ಮುಚ್ಚುವ ಹಂತಕ್ಕೆ ತಲುಪಿದ ಸರಕಾರಿಶಾಲೆ

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಜೂನ್.6.ಮಕ್ಕಳ ಕೊರತೆಯಿಂದ ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಅನೇಕ ಸರಕಾರಿ ಶಾಲೆಗಳು ಈ ಪರಿಸ್ಥಿತಿ ಎದುರಿಸುತ್ತಿದ್ದು,ಈ ರೀತಿ ಭೀತಿ ಎದುರಿಸುತ್ತಿದ್ದ ಕನ್ನಡ ಶಾಲೆಯೊಂದು ಊರವರ ಸತತ ಪ್ರಯತ್ನದಿಂದ ಬಚಾವಾಗಿದೆ.

ಮೂರು ವರ್ಷಗಳಲ್ಲೇ ಅತೀ ಹೆಚ್ಚು ಮಕ್ಕಳ ದಾಖಲಾತಿಯಿಂದಾಗಿ ಶಾಲೆ ಬಾಗಿಲು ಹಾಕುವುದನ್ನು ತಪ್ಪಿಸಿಕೊಂಡಿದೆ.ದೇವಚಳ್ಳ ಗ್ರಾಮದ ಅಚ್ರಪ್ಪಾಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19ನೇ ಸಾಲಿನಲ್ಲಿ 12 ಮಕ್ಕಳಷ್ಟೇ ದಾಖಲಾಗಿದ್ದರು. ಅದರಲ್ಲೂ ಒಂದನೇ ತರಗತಿಗೆ ಒಂದೇ ಮಗು ದಾಖಲಾತಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಶಾಲೆ ಮುಚ್ಚುವ ಭೀತಿ ಕಾಡಿತ್ತು. ಈ ಶಾಲೆ ಯನ್ನು ಉಳಿಸಿಕೊಳ್ಳಬೇಕೆಂಬ ಗ್ರಾಮಸ್ಥರ ಪ್ರಯತ್ನದ ಫ‌ಲವಾಗಿ ಈ ವರ್ಷ 21 ಮಕ್ಕಳು ದಾಖಲಾತಿ ಪಡೆದಿದ್ದಾರೆ.

ಊರಿನಿಂದ ಖಾಸಗಿ ಹಾಗೂ ಹೊರ ಭಾಗದ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳನ್ನು ಮನೆ ಭೇಟಿ ಮುಖಾಂತರ ಅಚ್ರಪ್ಪಾಡಿ ಶಾಲೆಗೆ ದಾಖಲಿಸಿಕೊಳ್ಳಲಾಗಿದೆ. ಹೆತ್ತವರ ಮನವೊಲಿಸಿ 1ರಿಂದ 5ನೇ ತರಗತಿ ವರೆಗೆ ಹೊರ ಭಾಗದ ಶೈಕ್ಷಣಿಕ ಕೇಂದ್ರಗಳಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಇಲ್ಲಿಗೆ ಬರುವಂತೆ ಮಾಡಲಾಗಿದೆ. ಒಟ್ಟು 21 ಮಕ್ಕಳು 2019-20ನೇ ಸಾಲಿಗೆ ದಾಖಲಾತಿ ಪಡೆದಿದ್ದು, ಒಂದನೆ ತರಗತಿಗೆ 8 ಮಕ್ಕಳು ಸೇರಿದ್ದಾರೆ.ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಗ್ರಾ.ಪಂ. ಸದಸ್ಯ ಶಿವಪ್ರಕಾಶ್‌ ಅಡ್ಡನಪಾರೆ ಹಾಗೂ ಎಸ್‌ಡಿಎಂಸಿ ಅಧ್ಯಕ್ಷೆ ನಿರ್ಮಲಾ ಹರಿಶ್ಚಂದ್ರ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

Also Read  ಮಂಗಳೂರು: ಆನ್-ಲೈನ್ ವಂಚನೆ ➤ ದೂರು ದಾಖಲು

1ನೇ ತರಗತಿಗೆ ದಾಖಲಾಗುವ ಮಕ್ಕಳ ಹೆಸರಿನಲ್ಲಿ 1 ಸಾವಿರ ರೂ.ಗಳ ನಿರಖು ಠೇವಣಿ ಇಟ್ಟು, 5ನೇ ತರಗತಿ ಪಾಸಾಗಿ ಹೋಗುವಾಗ ಠೇವಣಿ ಹಾಗೂ ಬಡ್ಡಿಯನ್ನು ಕೊಡುವುದು, ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆ, ದಾನಿಗಳ ನೆರವಿನಿಂದ ಉಚಿತ ಬ್ಯಾಗ್‌, ಕೊಡೆ, ನೋಟ್ಬುಕ್‌ ವಿತರಣೆ, ಹೊಸದಾದ ಬೆಂಚ್, ಡೆಸ್ಕ್ಗಳು – ಹೀಗೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ನಮ್ಮೂರ ಶಾಲೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ನಾವು ಪ್ರಯತ್ನಿಸಿದ್ದೇವೆ. ನಮ್ಮ ಜೊತೆ ಇಲಾಖೆಯೂ ಸಹಕರಿಸಿದರೆ ಶಾಲೆ ಉತ್ತಮವಾಗಿ ಬೆಳೆಯಲು ಸಹಕಾರಿ ಎಂಬುದಾಗಿ ಅಲ್ಲಿನ ಶಾಲಾ ಶಿಕ್ಷಕಿ ತಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Also Read  ಮಂಗಳೂರು: ರಾಜ್ಯದ ಮೊದಲ ಕತ್ತೆ ಸಾಕಣೆ ಮತ್ತು ಮಾದರಿ ತರಬೇತಿ ಕೇಂದ್ರ ಆರಂಭ

error: Content is protected !!
Scroll to Top