(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.4.ಮಳೆಗಾಲದಲ್ಲಿ ಉಳ್ಳಾಲದ ಮುಕ್ಕಚೇರಿ ಮತ್ತು ಕೈಕೋ ಪ್ರದೇಶಗಳಲ್ಲಿ ಸಮುದ್ರ ಕೊರೆತ ತೀವ್ರವಾಗಿ ಕಾಡಲಿದ್ದು, ಈ ಪ್ರದೇಶ ವ್ಯಾಪ್ತಿಯಲ್ಲಿ ಕೊರೆತ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಬಂದರು ಇಲಾಖೆ ಅಧಿಕಾರಿಗಳಿಗೆ ರಾಜ್ಯ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ನಿರ್ದೇಶನ ನೀಡಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಉಳ್ಳಾಲದ ಮುಕ್ಕಚೇರಿ ಮತ್ತು ಕೈಕೋ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕಡಲ್ಕೊರೆತ ಸಂಭವಿಸಲಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಮುಂಗಾರು ವಿಳಂಬದಿಂದ ಕುಡಿಯುವ ನೀರು ಪೂರೈಕೆಗೆ ತೊಂದರೆಯಾದ ಪ್ರದೇಶಗಳಿಗೆ ನೀರು ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಮಂಗಳೂರು ನಗರ ವ್ಯಾಪ್ತಿಗೆ ಜೂನ್ 7ರ ನಂತರ ನೀರು ಪೂರೈಕೆಗೆ ಈಗಾಗಲೇ ಇರುವ ಟ್ಯಾಂಕರ್‍ಗಳ ಜೊತೆ 25 ಹೆಚ್ಚುವರಿ ಟ್ಯಾಂಕರ್ ಗಳನ್ನು ಪಡೆಯಲು ಮಹಾನಗರಪಾಲಿಕೆ ಇಂಜಿನಿಯರ್ ನಿಂಗೇಗೌಡರಿಗೆ ಸೂಚನೆ ನೀಡಿದರು.
ಜೂನ್ 15ರನಂತರ ಜಿಲ್ಲೆಯಲ್ಲಿ ಮಳೆಯಾಗುವ ಲಕ್ಷಣಗಳಿದ್ದು ಆವರೆಗೆ ಜನರಿಗೆ ತೊಂದರೆಯಾಗದಂತೆ ನೀರು ಪೂರೈಕೆಗೆ ಕ್ರಮಕೈಗೊಳ್ಳಿ ಎಂದ ಸಚಿವರು, ಗ್ರಾಮೀಣ ಪ್ರದೇಶಗಳಲ್ಲಿ ದೂರು ಬಂದ ಪ್ರದೇಶಗಳಿಗೆ ಆದ್ಯತೆ ಮೇರೆಗೆ ನೀರು ನೀಡಿ ಎಂದರು. ಪುತ್ತೂರು ತಾಲೂಕಿನಲ್ಲಿ ನೀರಿಗೆ ತೊಂದರೆ ಇಲ್ಲ ಎಂದ ಸಹಾಯಕ ಆಯುಕ್ತ ಕೃಷ್ಣ ಮೂರ್ತಿ ಅವರು, ತಾಲೂಕಿನ ಎತ್ತರದಲ್ಲಿರುವ ಪ್ರದೇಶಗಳಾದ ಒಳಮೊಗರು, ಪರಿಯತ್ತೋಡಿಯಂತಹ ಪ್ರದೇಶಗಳಿಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು. ಕುಮಾರಧಾರಾ ನದಿಯಲ್ಲಿ ಒಳಹರಿವಿದೆ ಎಂದು ಅವರು ಹೇಳಿದರು. ಸುಳ್ಯದಲ್ಲಿ ಟ್ರೀಟ್‍ಮೆಂಟ್ ಪ್ಲಾಂಟ್‍ಗೆ ಆದ್ಯತೆ ನೀಡಲು ಉಸ್ತುವಾರಿ ಸಚಿವರು ಸೂಚಿಸಿದರು.
ಉಳ್ಳಾಲದಲ್ಲಿ ಆರು ಬೋರ್‍ವೆಲ್ ಮತ್ತು 8 ತೆರೆದ ಬಾವಿಗಳಿದ್ದು, 9 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ; ಕೋಟೆಕಾರ್‍ನ 3 ವಾರ್ಡ್‍ಗೆ ಬೋರ್‍ವೆಲ್ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಅತಿವೃಷ್ಠಿಗೆ ಸಂಬಂಧಿಸಿದಂತೆ ಸಂಭವಿಸುವ ಸಮಸ್ಯೆಗಳಿಗೆ ಗರಿಷ್ಠ ಮೂರು ದಿನಗಳೊಳಗಾಗಿ ಪರಿಹಾರ ನೀಡಲು ಸೂಚಿಸಿದ ಅವರು ಸಿಡಿಲು ಗುಡುಗಿನಿಂದಾಗುವ ಹಾನಿಗಳಿಗೆ ಮಾನವೀಯ ನೆಲೆಯಿಂದ ಉದಾರವಾಗಿ ಪರಿಹಾರದ ಮೊತ್ತವನ್ನು ನೀಡಲು ಶ್ರಮಿಸಿ ಎಂದರು.
ಬ್ಯಾಂಕರ್‍ಗಳ ಜೊತೆ ಸಭೆ : ಸರಕಾರದ ವಿವಿಧ ಸಾಲ ಯೋಜನೆಗಳಡಿಯಲ್ಲಿ ಸಾಲ ಸೌಲಭ್ಯ ಪಡೆಯುವವರನ್ನು ಸ್ಥಳೀಯ ಬ್ಯಾಂಕುಗಳ ಮ್ಯಾನೇಜರ್‍ಗಳು ವಿವಿಧ ನೆಪವೊಡ್ಡಿ ಸಾಲ ನಿರಾಕರಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಜನ ಸಾಮಾನ್ಯರ ಸಬಲೀಕರಣಕ್ಕೆ ರೂಪಿಸಲಾದ ಯೋಜನೆಗಳಿಗೆ ಇದರಿಂದ ಹಿನ್ನಡೆಯಾಗಲಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸ್ವಯಂ ಉದ್ಯೋಗ ಯೋಜನೆ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ಕಲಿಕಾ ಸಾಲಕ್ಕೆ ಯಾವುದೇ ರೀತಿಯಲ್ಲಿ ಕತ್ತರಿಯಾಡಿಸದೆ ಸರ್ಕಾರ ಆರಿಸಿದ ಅಭ್ಯರ್ಥಿಗಳಿಗೆ ಸಾಲ ನೀಡಿ ಎಂದು ಉಪಸ್ಥಿತರಿದ್ದ ವಿವಿಧ ಬ್ಯಾಂಕ್‍ಗಳ ಮುಖ್ಯಸ್ಥರಿಗೆ ಸೂಚಿಸಿದರು.
ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸಾಲ ದೊರಕಿಸಲು ಬ್ಯಾಂಕ್‍ಗಳು ಸಹಕರಿಸಬೇಕು ಎಂದ ಅವರು, ಬೇರೆ ಯಾರೋ ಸಾಲ ಮರುಪಾವತಿ ಮಾಡದಿರುವುದಕ್ಕೆ ಅರ್ಹರಿಗೆ ನಿರಾಕರಿಸಬಾರದು ಎಂದರು.ಬಡ ವಿದ್ಯಾರ್ಥಿಗಳು ಹೆಚ್ಚಾಗಿ ಶೈಕ್ಷಣಿಕ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ ಹಾಗಾಗಿ ಶೈಕ್ಷಣಿಕ ಸಾಲ ಪಡೆಯುವ ವಿದ್ಯಾರ್ಥಿಗಳಲ್ಲಿ ಸರಕಾರದ ಯೋಜನೆಗಳು ಹಾಗೂ ಸಾಲ ಪಡೆದುಕೊಳ್ಳಲು ಇರುವ ಕ್ರಮಗಳ ಬಗ್ಗೆ ಗೊಂದಲಮಯ ವಾತಾವರಣ ಸೃಷ್ಠಿಯಾಗಿದೆ ಇದನ್ನು ನಿವಾರಿಸಬೇಕೆಂದರು.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಭೆಯಲ್ಲಿ ಮಾತನಾಡಿ, ಬ್ಯಾಂಕಿಂಗ್ ಸಮಸ್ಯೆ ಪರಿಹರಿಸಲು ಅದಾಲತ್ ಮಾದರಿ ಕಾರ್ಯಕ್ರಮ ಆಯೋಜಿಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು.
ಲೀಡ್ ಬ್ಯಾಂಕ್ ಪ್ರತಿನಿಧಿಯನ್ನು ಉದ್ಧೇಶಿಸಿ ಮಾತನಾಡಿ, ಸಾಲ ನೀಡುವಿಕೆ ಮತ್ತು ಮರುಪಾವತಿ ಬಗ್ಗೆ ಸಮಗ್ರ ಅಂಕಿ ಸಂಖ್ಯೆ ಮಾಹಿತಿಯೊಡನೆ ಹಾಗೂ ಸರ್ಕಾರದ ಯೋಜನೆಗಳಡಿ ನೆರವು ನೀಡಿದ ಟ್ರ್ಯಾಕ್ ಲಿಸ್ಟ್ ನ್ನು ನೀಡುವುದರಿಂದ ಬ್ಯಾಂಕ್‍ಗಳಿಗೆ ಸೂಕ್ತ ನಿರ್ದೇಶನ ನೀಡಲು ಸಾಧ್ಯವಿದೆ ಎಂದರು. ನಗರೋತ್ಥಾನ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಕಾಂಕ್ರೀಟ್ ರಸ್ತೆ, ಸಣ್ಣ ಮಾರುಕಟ್ಟೆ ಕಟ್ಟಡಗಳು, ಹಾಗೂ ಆಟದ ಮೈದಾನಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ ಅವರು, ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ವೇಗವಾಗಿ ಪ್ರಾರಂಭಿಸಲು ಆದಷ್ಟು ಶೀಘ್ರವಾಗಿ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಮಹಾನಗರಪಾಲಿಕೆ ಆಯುಕ್ತರಾದ ನಾರಾಯಣಪ್ಪ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕ್ ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.