(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30. ನಗರದಲ್ಲಿ ಅಪಾರ್ಟ್‍ಮೆಂಟ್‍ಗಳು ಅಧಿಕ ಸಂಖ್ಯೆಯಲ್ಲಿದ್ದು ವಲಸೆ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಇವರ ಮಕ್ಕಳನ್ನು ಕೆಲಸಕ್ಕೆ ಬಳಸದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕ ಇಲಾಖೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಅಪಾರ್ಟ್‍ಮೆಂಟ್‍ಗಳಲ್ಲಿ ಮನೆ ಕೆಲಸ ಮಾಡುವ ಕಾರ್ಮಿಕರು ಮತ್ತು ಮಾಲಿಕರ ಮೇಲೆ ಹೆಚ್ಚಿನ ಗಮನ ಹರಿಸಿ ಏಕೆಂದರೆ ಹೆಚ್ಚಾಗಿ ಮನೆಕೆಲಸಕ್ಕೆ ಹಾಗೂ ಅಪಾರ್ಟ್‍ಮೆಂಟ್‍ಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಮಕ್ಕಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಅಂತಹ ಬಾಲಕಾರ್ಮಿಕರು ಕಂಡುಬಂದಲ್ಲಿ ಮಾಲೀಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಿ ಎಂದರು.
ಕೈಗಾರಿಕಾ ಪ್ರದೇಶವಾದ ಬೈಕಂಪಾಡಿ ವ್ಯಾಪ್ತಿಯಲ್ಲಿ ‘ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ’ ಅಡಿಯಲ್ಲಿ ಸರ್ಕಾರದಿಂದ ಹೊಸದಾಗಿ ದೊರಕಿರುವ ಅನುದಾನದಲ್ಲಿ ವಸತಿ ಸಹಿತ ಶಾಲೆಯನ್ನು ನಿರ್ಮಿಸುವುದು ಉತ್ತಮ. ಆ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರ ಮಕ್ಕಳನ್ನು ವಸತಿ ಶಾಲೆ ಸೇರುವಂತೆ ಪ್ರೇರೇಪಿಸಲು ಸೂಚಿಸಿದರು. ಒಂದು ವೇಳೆ ಇಂತಹ ಶಾಲೆಗಳಿಗೆ ಮಕ್ಕಳ ಕೊರತೆ ಇದ್ದಲ್ಲಿ ಹೊರ ಜಿಲ್ಲೆಗಳಿಂದ ಬರುವಂತಹ ಕಾರ್ಮಿಕರ ಮಕ್ಕಳನ್ನು ಕೂಡ ನೋಂದಣಿ ಮಾಡಬಹುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು.
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರಿಗೆ ವಿಶೇಷವಾದ ನೂತನ ವಸತಿ ಶಾಲೆಯನ್ನು ತೆರೆಯಲು 14ಲಕ್ಷ ರೂ.ಗಳ ಅನುದಾನ ಬಿಡುಗಡೆ ಆಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರು ಕೆ. ಬಿ. ನಾಗರಾಜ್ ಹೇಳಿದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇದರ 40ನೇ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಆಯುಕ್ತರು ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನ ಮಾಡಬೇಕು, ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.
ಕಾರ್ಮಿಕರ ಮಕ್ಕಳಿಗೂ ಇತರ ಮಕ್ಕಳಂತೆ ಶಿಕ್ಷಣ ದೊರಕಬೇಕು ಸಮಾಜದಲ್ಲಿ ಉತ್ತಮ ಸ್ಥಾನಮಾನ ಲಭಿಸಬೇಕು ಎಂದರು. 2018-19ನೇ ಸಾಲಿನ ಖರ್ಚುವೆಚ್ಚ ಮತ್ತು ಲೆಕ್ಕ ಪರಿಶೋಧನಾ ವರದಿಯ ಬಗ್ಗೆ ಹಾಗೂ 2019-20ನೇ ಸಾಲಿನ ಕ್ರಿಯಾ ಯೋಜನೆ ಹಾಗೂ ಅಂದಾಜು ಆಯವ್ಯಯವನ್ನು ಅನುಮೋದಿಸಿ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜೂನ್ 12 ರಂದು ಮಂಗಳೂರು ಪುರಭವನದಲ್ಲಿ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನವನ್ನು ಹಮ್ಮಿಕೊಂಡಿದ್ದು ಅಂದು ಬಾಲ ಕಾರ್ಮಿಕರ ಪದ್ಧತಿ ವಿರೋಧಿ ಕುರಿತು ಜನಜಾಗೃತಿ ಜಾಥಾ ಹಾಗೂ ಬೀದಿನಾಟಕ ಪ್ರದರ್ಶನ ನಡೆಯಲಿದೆ ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಎನ್.ಜಿ,ಓ ಗಳು, ಬಾಲಕಾರ್ಮಿಕ ಯೋಜನಾ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.