(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. 2019ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತಿದೆ.
ಪ್ರಥಮ ಪ್ರಯತ್ನದಲ್ಲಿ ಶೇ.60% – 74.99% ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ರೂ.7,000/- ಗಳನ್ನು ಮತ್ತು ಶೇ.75% ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ರೂ.15,000/- ಮಂಜೂರು ಮಾಡಲಾಗುತ್ತಿದೆ. ಈ ಪ್ರೋತ್ಸಾಹಧನವನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆ ಹಾಗೂ ಇತರ ವಿವರಗಳನ್ನು ಇಲಾಖೆಯ ವೆಬ್‍ಸೈಟ್ www.tw.kar.nic.in ನಲ್ಲಿ ಆನ್‍ಲೈನ್ ಮೂಲಕ ತಪ್ಪದೇ ನೋಂದಾಯಿಸಿಕೊಳ್ಳಬೇಕು.
ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಡಿಸೆಂಬರ್ 31ರ ವರೆಗೆ ಅವಕಾಶ ಕಲ್ಪಿಸಲಾಗಿದೆ.ಅರ್ಹತಾ ಷರತ್ತುಗಳು ಇಂತಿವೆ: ವಿದ್ಯಾರ್ಥಿಯು ಕರ್ನಾಟಕ ರಾಜ್ಯದವರಾಗಿರಬೇಕು. ವಿದ್ಯಾರ್ಥಿಯು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು. ನೊಂದಾಣಿ ಮಾಡಿಕೊಳ್ಳಲು ಬೇಕಾಗಿರುವ ಮೂಲ ದಾಖಲೆಗಳು: ಎಸ್.ಎಸ್.ಎಲ್.ಸಿ ನೊಂದಾಣಿ ಸಂಖ್ಯೆ, ಆಧಾರ್ ಕಾರ್ಡ್‍ನಲ್ಲಿರುವಂತೆ ನಿಮ್ಮ ಹೆಸರು ಮತ್ತು ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಆರ್.ಡಿ.ಸಂಖ್ಯೆ, ಅರ್ಜಿದಾರರ ಪಾಸ್‍ಪೋರ್ಟ್ ಅಳತೆಯ ಫೋಟೋ (jpeg/jpg 20kb), ಸ್ಕ್ಯಾನ್ ಮಾಡಲಾದ ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರ (jpeg/jpg 20kb), ಆಧಾರ್ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ವಿವರ.ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಇತರ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22261787, 080-22269075 ಸಂಪರ್ಕಿಸಬಹುದು ಎಂದು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ದಕ್ಷಿಣ ಕನ್ನಡ ಜಿಲ್ಲೆ ಇವರ ಪ್ರಕಟಣೆ ತಿಳಿಸಿದೆ.