(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.28.ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮ ಜಿಲ್ಲೆಯಲ್ಲಿ ಜೂನ್ 3 ರಿಂದ 17ರವರೆಗೆ ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಕಾರ್ಯಕ್ರಮ ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಆರ್. ವಂಕಟಾಚಲಪತಿ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಅತಿಸಾರ ಭೇದಿ ನಿಯಂತ್ರಣ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿಸಾರ ಭೇದಿಯಿಂದ ಸಂಭವಿಸಿದ ದುರಂತಗಳ ಮಾಹಿತಿ ಪಡೆದರು. ಕಾರ್ಯಕ್ರಮಗಳ ಆಯೋಜನೆಯ ಉದ್ದೇಶ ಹಾಗೂ ಸಾರ್ಥಕತೆಗೆ ಮಾಹಿತಿ ತಲುಪಿಸುವ ಜೊತೆಗೆ ಎ ಎನ್ ಎಂ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು.
ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ, ಶಾಲಾ ಮಕ್ಕಳಲ್ಲಿ ಆರೋಗ್ಯ ಮತ್ತು ಕೈತೊಳೆಯುವ ಬಗ್ಗೆಯೂ ಅರಿವು ಮೂಡಬೇಕು. ಆರೋಗ್ಯ ಇಲಾಖೆ ವಿತರಿಸುವ ಜಿಂಕ್ ಮತ್ತು ಒ ಆರ್ ಎಸ್ ದ್ರಾವಣಗಳ ಬಗ್ಗೆ ಮಾಹಿತಿ ಗ್ರಾಮೀಣರಿಗೂ ಲಭ್ಯವಾಗಬೇಕು. ಯಾವುದೇ ಮಗು ಈ ಅತಿಸಾರ ಭೇದಿಯಿಂದ ಬಳಲದಂತೆ ಮುನ್ನೆಚ್ಚರಿಕೆ ವಹಿಸಿ ಎಂದರು. ಬೇಸಿಗೆ ಕಾಲ ಮತ್ತು ಮಳೆಗಾಲದಲ್ಲಿ ಚಿಕ್ಕಮಕ್ಕಳಲ್ಲಿ ನೀರು ಹಾಗೂ ಸ್ವಚ್ಛತೆಯ ಕೊರತೆಯಿಂದ ತೀವ್ರವಾಗಿ ವಾಂತಿ ಭೇದಿ ಕಂಡುಬರುತ್ತದೆ, ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸಾಂಕ್ರಾಮಿಕ ರೋಗಗಳನ್ನು ಸಂಪೂರ್ಣ ತಡೆಗಟ್ಟುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ.
ಓ ಆರ್.ಎಸ್. ದ್ರಾವಣ ಮತ್ತು ಜಿಂಕ್ ಮಾತ್ರೆಗಳನ್ನು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವುದರಿಂದ ಈ ಖಾಯಿಲೆಯನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ರಾವ್ ಸಭೆಗೆ ಮಾಹಿತಿ ನೀಡಿದರು. ಗ್ರಾಮ, ನಗರ ಪಟ್ಟಣ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೀರಿನ ಟ್ಯಾಂಕರ್‍ಗಳ ಶುಚಿಗೊಳಿಸುವುದು. ವೈಜ್ಞಾನಿಕವಾಗಿ ಮಕ್ಕಳ ಕೈ ತೊಳೆಯುವ ರೀತಿಯನ್ನು ಹೇಳಿಕೊಡುವುದು ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಮಕ್ಕಳ ಪೋಷಕರಲ್ಲಿ ಅತಿಸಾರ ಭೇದಿಯನ್ನು ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸುವುದು. ಈ ಅತಿಸಾರ ಭೇದಿಯ ನಿಯಂತ್ರಣ ಪ್ರಯೋಜನವನ್ನು ಪ್ರತಿ ತಾಲೂಕ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಿ ಅವರಿಂದ ಪ್ರತಿ ಹಂತದಲ್ಲಿ ಈ ಸಂಬಂಧ ಮಾಹಿತಿಗಳನ್ನು ಪಡೆದು ಕೊಂಡು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲಾಗುತ್ತದೆ ಎಂದು ಡಿಎಚ್‍ಒ ವಿವರಿಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡರು.