(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.27. ಪಾಶ್ಚಾತ್ಯ ಆಹಾರಗಳಿಗೆ ಮಾರುಹೊಗಿ ಭಾರತೀಯ ಆಹಾರ ಸಂಸ್ಕೃತಿಯನ್ನು ಜನ ಮರೆತಿರುವುದು ವಿಷಾದನೀಯ.ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಬೆಳ್ತಂಗಡಿ ವತಿಯಿಂದ ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಆವರಣದಲ್ಲಿ ರವಿವಾರ ಸಿರಿಧಾನ್ಯ ಕೆಫೆ ಉದ್ಘಾಟಿಸಿ ಈ ಭಾರತೀಯ ಅಹಾರ ಪದ್ದತಿಯನ್ನು ಉಳಿಸುವ ಸಲುವಾಗಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಮರೆಯಾದ ನಮ್ಮ ಪಾರಂಪರಿಕ ಆಹಾರ ಪದ್ಧತಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಟ್ರಸ್ಟಿ ಶ್ರದ್ಧಾ ಅಮಿತ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಆಡಳಿತ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಸಿರಿಧಾನ್ಯಗಳ ಪರಿಚಯವಿರುವುದರಿಂದ ಸಿರಿ ಧಾನ್ಯ ಕೆಫೆ ಪ್ರಾರಂಭಿಸಲಾಗಿದೆ. ಅತ್ಯಂತ ಪೌಷ್ಟಿಕತೆ ಕೂಡಿ ರುವುದರಿಂದ ಆರೋಗ್ಯ ವೃದ್ಧಿಗೆ ಸಹಕಾರಿ. ಈಗಾಗಲೇ ಧರ್ಮಸ್ಥಳ ಸಂಸ್ಥೆ 2 ಕೋಟಿ ರೂ.ಗೂ ಹೆಚ್ಚು ಸಿರಿಧಾನ್ಯ ಸಂಸ್ಕರಣೆ, ಲ್ಯಾಬೋರೆಟರಿ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದೆ. ಸಿರಿಧಾನ್ಯ ಬಳಕೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಿರಿಧಾನ್ಯ ಆಹಾರ ತಜ್ಞೆ ಡಾ| ಶಕುಂತಲಾ ಸವದತ್ತಿ/ಮಾಸೂರು ಹಾಗೂ ಸಾವಯವ ಕೃಷಿಕ ಭದ್ರಾವತಿಯ ಈಶ್ವರನ್ ಪಿ. ತೀರ್ಥ ಅವರು ಸಿರಿ ಧಾನ್ಯ ಬಳಕೆಯ ಲಾಭ ಹಾಗೂ ಪ್ರಯೋಜನ ಕುರಿತು ಮಾಹಿತಿ ನೀಡಿದರು.ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ಕಾರ್ಯದರ್ಶಿ ಬಿ. ಯಶೋವರ್ಮ, ಸೋನಿಯಾ ವರ್ಮ, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕ ಬೂದಪ್ಪ ಗೌಡ, ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ಮಮತಾ ರಾವ್, ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ವಸಂತ ಸಾಲ್ಯಾನ್, ಹಿರಿಯ ಮಾರುಕಟ್ಟೆ ಪ್ರಬಂಧಕ ಸುಧಾಕರ್, ಯೋಜನಾಧಿಕಾರಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು. ಸಿರಿ ಸಂಸ್ಥೆ ನಿರ್ದೇಶಕಿ ಮನೋರಮಾ ಭಟ್ ಸ್ವಾಗತಿಸಿದರು. ಸಿರಿ ಸಂಸ್ಥೆ ಯೋಜನಾಧಿಕಾರಿ ರೋಹಿತಾಕ್ಷ ವಂದಿಸಿದರು. ರಾಮ್ ಕುಮಾರ್ ನಿರೂಪಿಸಿದರು.