ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಹಳ್ಳಿಯ ಯುವ ಪ್ರತಿಭೆ➤ ದಿಲೀಪ್ ವೇದಿಕ್

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಮೇ.23. ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ದಿಲೀಪ್ ವೇದಿಕ್17ನೇ ವಯಸ್ಸಿಗೆ 800ಕ್ಕೂ ಹೆಚ್ಚು ಕೃತಿ, ಹಲವು ಪ್ರಶಸ್ತಿಗಳ ಸರದಾರ
ಕಲ್ಲುಗುಡ್ಡೆ, ಎ. 4: ತನ್ನ 17ನೇ ವಯಸ್ಸಿನಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ಕವಿ, ಕಥೆಗಾರ, ಗಾಯಕ, ವಾಗ್ಮಿಯಾಗಿ, ಕರ್ನಾಟಕ ಹಾಗೂ ಕೇರಳ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಹಲವಾರು ಕೃತಿ, ಕವನಗಳನ್ನು ರಚಿಸಿ, ಹಲವಾರು ಸನ್ಮಾನ, ಬಿರುದು, ಪ್ರಶಸ್ತಿಗಳ ಸರದಾರನಾಗಿರುವ ನೂಜಿಬಾಳ್ತಿಲ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಲೀಪ್ ವೇದಿಕ್ ಎಂಬ ಯುವ ಸಾಹಿತಿಯ ಸಾಧನೆಯಿದು. ಇದೀಗ ಇವರು ಚಲನಚಿತ್ರಗಳಿಗೂ ಸಾಹಿತ್ಯ ಬರೆಯುತ್ತಿದ್ದಾರೆ. ಇವರು ದ.ಕ. ಜಿಲ್ಲಾ ಕವಿ ಬಳಗ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದಾರೆ.


12ನೇ ವಯಸ್ಸಿಗೆ ಸಾಹಿತ್ಯ ಕ್ಷೇತ್ರಕ್ಕೆ;
ಡಿವಿಕೆ ಎಂಬ ದಿಲೀಪ್ ವೇದಿಕ್ ಕಡಬ ರವರು ವೇದಿಕ್ ಕಾವ್ಯನಾಮದಲ್ಲಿ ಕವಿತೆಗಳನ್ನು ಬರೆಯುತ್ತಿದ್ದಾರೆ. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ದಿ| ಶಶಿಮಾಧವನ್ ಮಾನಂದವಾಡಿ ಹಾಗೂ ವಿಜಯ ಕುಮಾರಿ ಪುದುಪರಂಬಿಲ್ ದಂಪತಿಯ ದ್ವಿತೀಯ ಪುತ್ರನೇ ದಿಲೀಪ್ ವೇದಿಕ್. ಇವರ ಅಣ್ಣ ದೀಪು. ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿತ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಪೇರಡ್ಕದಲ್ಲಿ, ಪ್ರಸ್ತುತ ಕಡಬ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಾಣಿಜ್ಯ ವಿಭಾಗ) ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ದಿಲೀಪ್ ವೇದಿಕ್ ರವರು ತನ್ನ 12ನೇ ವಯಸ್ಸಿನಲ್ಲಿಯೇ ಸಾಹಿತ್ಯ ಕ್ಷೇತ್ರಕ್ಕೆ ಆಕರ್ಷಿತರಾಗಿದ್ದು, ಶಾಲಾ ಪಠ್ಯಗಳ ಸಾಹಿತ್ಯಗಳನ್ನು ಓದಿ ಸಾಹಿತ್ಯಕ್ಕೆ ಅವಲಂಬಿತನಾದೆ ಎನ್ನುತ್ತಾರೆ.

Also Read  ➤ ಮಾರ್ಚ್ 1 ರಂದು ಖಗೋಳದಲ್ಲಿ ಶುಕ್ರ ಹಾಗೂ ಗುರು ಗ್ರಹದ ಜೊತೆಗೆ ಚಂದ್ರ ಕಾಣಿಸಲಿದೆ


“ಭಾರತಾಂಬೆಯ ಮಡಿಲು” ಚೊಚ್ಚಲ ಕೃತಿ;
ದಿಲೀಪ್ ವೇದಿಕ್ ರವರು ಸಾಹಿತ್ಯ ಕ್ಷೇತ್ರಕ್ಕೆ ಆಕರ್ಷಿತಗೊಂಡು “ಭಾರತಾಂಬೆಯ ಮಡಿಲು” ಎಂಬ ಚೊಚ್ಚಲ ಕೃತಿಯನ್ನು ರಚಿಸಿದರು. ಮೊದಲಿಗೆ ಇದನ್ನು ಸರಳ ರೀತಿಯಲ್ಲಿ ರಚಿಸಿದ ಇವರು, ಬಳಿಕ ಅದನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದರು. ದಿಲೀಪ್‍ರ “ಭಾರತಾಂಬೆಯ ಮಡಿಲು” ಹಾಗೂ “ಪಾಸ್ಟಿಕ್ ಒಡೆಯ” ಎಂಬ ಕೃತಿಗಳು ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಸಾಹಿತಿ ಪೋಪೇರ್ ಮಹಾದೇವ್ ರವರ “ಕಹಲೆ” ಎಂಬ ಕವನ ಸಂಕಲನದಲ್ಲಿ ಸೇರ್ಪಡೆಗೊಂಡು ರಾಜ್ಯಮಟ್ಟದಲ್ಲೂ ಬಿಡುಗಡೆಗೊಂಡಿದೆ.


ಕೃತಿ, ಸನ್ಮಾನ, ಪ್ರಶಸ್ತಿಗಳ ಸರದಾರ;
ತನ್ನ ಎಳೆ ವಯಸ್ಸಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪರಿಚಿತನಾಗಿ ಹಲವಾರು ಸಾಹಿತಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಅವರ ಮಾರ್ಗದರ್ಶನದಲ್ಲಿ ಈಗಾಗಲೇ 800ಕ್ಕೂ ಅಧಿಕ ಕೃತಿಗಳನ್ನು ಕನ್ನಡ, ತುಳು, ಮಲೆಯಾಳಂ ಭಾಷೆಯಲ್ಲಿ ರಚಿಸಿದ್ದಾರೆ. ಇಲ್ಲಿಯ ವರೆಗೆ ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ವೇದಿಕೆಗಳಲ್ಲಿ ಕವಿಗೋಷ್ಠಿ ನಡೆಸಿಕೊಟ್ಟಿದ್ದಾರೆ. ಇವರಿಗೆ ನೇಶನಲ್ ಲಯನ್ಸ್ ಗ್ರೇಡ್ ರಾಷ್ಟ್ರ ಮಟ್ಟದ ಪ್ರಶಸ್ತಿ (2016ರಲ್ಲಿ ಕಡಬದಲ್ಲಿ), ಮೇಘದೂತ ಬಿರುದು (2017ರಲ್ಲಿ ಸುಳ್ಯದಲ್ಲಿ), ಸಾಹಿತ್ಯ ಕಲ್ಪವೃಕ್ಷ ಪ್ರಶಸ್ತಿ (2017ರಲ್ಲಿ ಮಡಿಕೇರಿಯಲ್ಲಿ), ಬೆಂಗಳೂರಿನಲ್ಲಿ ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ ಕರುನಾಡ ಸಾಧಕ ಪ್ರಶಸ್ತಿ (2019ರಲ್ಲಿ), ಸಾಹಿತ್ಯ ರತ್ನ ಪ್ರಶಸ್ತಿ (2019ರಲ್ಲಿ ಸುಳ್ಯದಲ್ಲಿ) ನೀಡಿ ಇವರನ್ನು ಗೌರವಿಸಿದ್ದು, ಅನೇಕ ಸಂಘ ಸಂಸ್ಥೆಗಳಿಂದಲೂ ಸನ್ಮಾನಗಳನ್ನು ಪಡೆದಿರುತ್ತಾರೆ.

Also Read  ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ 'ಗಟ್ಟಿಮೇಳ' ಹುಡುಗಿ..!


ಚಲನಚಿತ್ರಗಳ ಸಾಹಿತ್ಯಕ್ಕೂ ಸೈ;
ದಿಲೀಪ್ ವೇದಿಕ್ ರವರು ಚಲನಚಿತ್ರ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಇವರು ಚೆಲವುವಿನ ಚಿತ್ತಾರ ಎಂಬ ಕಿರು ಚಿತ್ರಕ್ಕೆ ಟೈಟಲ್ ಸಾಂಗ್ ರಚಿಸಿದ್ದಾರೆ. ಗ್ಲೋಬಲ್ ಟಿವಿಯ ಸ್ಕ್ರಿಪ್ಟ್ ರೈಟಿಂಗ್‍ಗೂ ಇವರು ಆಯ್ಕೆಯಾಗಿದ್ದಾರೆ. ಅಲ್ಲದೇ ಕೇರಳದಿಂದ ಮಲೆಯಾಳಿ ಟಿವಿ ಚಾನೆಲ್‍ಗಳಿಂದಲೂ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತಿದ್ದು, ಕನ್ನಡ ಆಸಕ್ತಿಯಿಂದ ಹೆಚ್ಚಿನ ಮಹತ್ವವನ್ನು ಕನ್ನಡಕ್ಕೆ ಕೊಡುವುದಾಗಿ ತಿಳಿಸಿದ್ದಾರೆ. ದಿಲೀಪ್ ರವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹಲವು ಅವಕಾಶಗಳು, ಪ್ರಶಸ್ತಿಗಳು ಹುಡುಕಿಕೊಂಡು ಬರಲಿ ಎಂಬುದೇ ನಮ್ಮ ಆಶಯ.


ಸಾಹಿತ್ಯ ಕ್ಷೇತ್ರದಲ್ಲಿ ಸಾಧಿಸುವ ಛಲ;
ಕಡಬ ಲಯನ್ಸ್ ಕ್ಲಬ್ ನವರು ನನ್ನ ಸಾಹಿತ್ಯ ಕೃಷಿಯನ್ನು ಗಮನಿಸಿ ಮೊದಲಿಗೆ ನನ್ನನ್ನು ಸನ್ಮಾನಿಸಿದ್ದು, ಬಳಿಕ ನನಗೆ ಹೆಚ್ಚು ಕೃತಿ, ಕವನ ರಚಿಸಲು ಆಸಕ್ತಿ ಬೆಳೆಯಿತು. ಮೊದ ಮೊದಲು ಈ ಕ್ಷೇತ್ರಕ್ಕೆ ಹೋಗಬೇಡ ಎಂದವರು ಈಗ ನನಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ವಿದ್ಯಾಸಂಸ್ಥೆಯವರೂ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆಗಳಿದ್ದು ಅವರದನ್ನು ಪ್ರಸ್ತುತ ಪಡಿಸಿದಾಗ ಅದಕ್ಕೆ ತಕ್ಕ ಬೆಲೆ ಸಿಗುತ್ತದೆ. ನನಗೆ ಪ್ರೋತ್ಸಾಹಿಸಿದ ಹೆತ್ತವರಿಗೆ, ಗೆಳೆಯರಿಗೆ, ಸ್ಥಳೀಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆಯೂ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧಿಸುವ ಛಲವನ್ನು ಹೊಂದಿದ್ದೇನೆ.
– ದಿಲೀಪ್ ವೇದಿಕ್, ಯುವ ಸಾಹಿತಿ ನೂಜಿಬಾಳ್ತಿಲ.

error: Content is protected !!
Scroll to Top