(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.23.ಯುವಜನತೆ ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಸಿಗದೆ ತಮ್ಮ ಗುರಿಯಿಂದ ವಿಮುಕ್ತರಾಗುತ್ತಿದ್ದಾರೆ, ದೇಶದ ಅಗಾಧ ಯುವ ಸಂಪತ್ತಿನ ಸದ್ಬಳಕೆ ಸರಿಯಾದ ಮಾರ್ಗದರ್ಶನದಿಂದ ಮಾತ್ರವೇ ಸಾಧ್ಯವಾಗಬಹುದು. ಅದಕ್ಕಾಗಿ ಸರಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಳೆದ 4 ವರ್ಷಗಳಿಂದ ಯುವಸ್ಪಂದನ ಕೇಂದ್ರವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ತೆರೆದಿದ್ದು, ಯುವಸ್ಪಂದನ ಅರಿವು ಕಾರ್ಯಕ್ರಮವನ್ನು ಪರಿಣಿತ ಯುವ ಪರಿವರ್ತಕರ ಮೂಲಕ ಎಲ್ಲಾ ಶಾಲಾ-ಕಾಲೇಜು, ಸಮುದಾಯಗಳಲ್ಲಿ ಯಶಸ್ವಿಯಾಗಿ ನಡೆಸುತ್ತಾ ಬಂದಿದೆ.
ಇದರ ಸದುಪಯೋಗವನ್ನು 15 ರಿಂದ 35 ವರ್ಷದವರೆಗಿನ ಎಲ್ಲಾ ಯುವಕ-ಯುವತಿಯರು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇಂತಹದ್ದೊಂದು ಪರಿಕಲ್ಪನೆ ಇಡೀ ದೇಶದಲ್ಲೇ ಮೊದಲಿಗೆ ಕರ್ನಾಟಕದಲ್ಲಿ ನಿಮಾನ್ಸ್ ವತಿಯಿಂದ ಆಯೋಜಿಸಲ್ಪಡುತ್ತಿದ್ದು, ಹಲವಾರು ಯುವ ಸಂಬಂಧಿ ಸಮಸ್ಯೆಗಳಿಗೆ ನುರಿತ ಮಾರ್ಗದರ್ಶಕರಿಂದ ನೆರವು ನೀಡುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ತಾಲೂಕಿನ ಯುವ ಪರಿವರ್ತಕಿ ಯು. ವಿ. ಪರ್ವಿನ್ ಇವರು ನಿಟ್ಟೆ ಉಷಾ ನರ್ಸಿಂಗ್ ಕಾಲೇಜಿನ ದೇರಳಕಟ್ಟೆಯಲ್ಲಿ ಹಮ್ಮಿಕೊಳ್ಳಲಾದ ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ಕಾರ್ಪೋರೇಟ್ ಸಲಹೆಗಾರರಾದ ಅನುರಾಜ್, ವಿದ್ಯಾರ್ಥಿಗಳನ್ನುದ್ದೇಶಿಸಿ ನಿಮ್ಮ ಚಿಂತನೆಗಳು ನಿಮ್ಮನ್ನು ಹೇಗೆ ರೂಪಿಸುತ್ತದೆ, ಹಾಗೂ ಮೈಂಡ್ -ಸಬ್-ಕಾನ್ಷಿಯಸ್ ಮೈಂಡ್ ಯಾವ ರೀತಿ ಕೆಲಸ ನಿರ್ವಹಿಸುತ್ತದೆ ಮತ್ತು ಆ ಮೂಲಕ ನಾವು ಏನನ್ನು ಸಾಧಿಸಬಹುದು ಎನ್ನುವುದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳ ಜೊತೆ ಹಂಚಿದರು.ಯುವ ಸಂಬಂಧಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯು. ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣ, ಮಂಗಳೂರು ಇಲ್ಲಿರುವ ಯುವಸ್ಪಂದನ ವಿಭಾಗವನ್ನು (ದೂರವಾಣಿ ಸಂಖ್ಯೆ. 0824-2452264) ಸಂಪರ್ಕಿಸಲು ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.