‘ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ’

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21.  ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜೂನ್ ಆರರವರೆಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಸ್ಪಷ್ಟಪಡಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರಿಗೆ ಜಿಲ್ಲೆಯಲ್ಲಿ ಅನಾವೃಷ್ಟಿ ಮತ್ತು ಅತಿವೃಷ್ಟಿ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿ ನೀಡಿದರು. ನಗರಕ್ಕೆ ನೀರು ಪೂರೈಕೆ ಸಂಬಂಧ ಬೇಸಿಗೆಯಲ್ಲಿ ಮಳೆ ಬಾರದಿರುವುದರಿಂದ ತುಂಬೆಯಲ್ಲಿ ನೀರಿನ ಪ್ರಮಾಣ ಕುಸಿತಗೊಳ್ಳುತ್ತಿರುವುದನ್ನು ಮೊದಲೇ ಗಮನಿಸಲಾಗಿತ್ತು.

ಇದೇ ಮಾದರಿಯಲ್ಲಿ ಜಿಲ್ಲೆಯಾದ್ಯಂತ ನೀರು ವಿತರಣೆ ಮತ್ತು ಪೂರೈಕೆ ಸಂಬಂಧ ಉಪವಿಭಾಗಾಧಿಕಾರಿಗಳು ಹಾಗೂ ಇಂಜಿನಿಯರುಗಳಿಗೆ ನೀರು ನಿರ್ವಹಣೆ ಹೊಣೆ ವಹಿಸಲಾಗಿದ್ದು, ಎಲ್ಲರೂ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎತ್ತರದ ಪ್ರದೇಶಗಳಿಗೆ ಹಾಗೂ ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಮುಂಚೆಯೇ ಗುರುತಿಸಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೂ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲೆಯ ಪಂಚಾಯತ್ ವ್ಯಾಪ್ತಿಯಲ್ಲಿ ನೀರು ನಿರ್ವಹಣೆಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ ಸೆಲ್ವಮಣಿ ಅವರು ಖುದ್ದು ಉಸ್ತುವಾರಿ ವಹಿಸಿ ಸಂಬಂಧಪಟ್ಟ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ನಿರ್ವಹಣೆ ಯೋಜನೆಗಳನ್ನು ಅವಲೋಕಿಸಿದ್ದಾರೆ ಎಂದರು.ಮಳೆ ಬಂದರೆ ನೀರಿನ ರೇಷನಿಂಗ್‍ನ್ನು ಸ್ಥಗಿತಗೊಳಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರು ನಿರ್ವಹಣೆಗೆ ತೆರೆದ ಬಾವಿ ಹಾಗೂ ಬೋರ್‍ವೆಲ್‍ಗಳನ್ನು ಗುರುತಿಸಲಾಗಿದ್ದು ಹೊಸದಾಗಿ 11 ಬೋರ್‍ವೆಲ್‍ಗಳು ಸೇರಿದಂತೆ ಒಟ್ಟು 135 ಬೋರ್‍ವೆಲ್‍ಗಳಿವೆ.

Also Read  ಯುವತಿಯ ಮಾತಿಗೆ ಮರುಳಾಗಿ 23,000ರೂ.ಕಳೆದುಕೊಂಡ ಚಾಲಕ

48 ತೆರೆದ ಬಾವಿಗಳಿದ್ದು, 26 ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇನ್ನುಳಿದ ಬಾವಿಗಳನ್ನು 2 ದಿನಗಳೊಳಗಾಗಿ ಸ್ವಚ್ಛಗೊಳಿಸಲಾಗುವುದು. ನೀರಿನ ಶುದ್ಧತೆಯನ್ನು ಪರಿಶೀಲಿಸಲಾಗಿದೆ ಎಂದರು. ನೀರಿನ ಸಮಸ್ಯೆ ಇರುವವರಿಗೆ ಕರೆ ಮಾಡಲು 24 ಗಂಟೆ ಸಹಾಯವಾಣಿ ಕಾರ್ಯಾಚರಿಸುತ್ತಿದ್ದು, ನೀರು ಒದಗಿಸಲು ಯಾವುದೇ ಅನುದಾನದ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಉಳ್ಳಾಲ, ಮುಲ್ಕಿ, ಮೂಡಬಿದರೆಯಲ್ಲಿ ನೀರು ನಿರ್ವಹಣೆಯ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಉಸ್ತುವಾರಿ ಸಚಿವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಟ್ಯಾಂಕರ್ ಮುಖಾಂತರ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಬೋರ್‍ವೆಲ್ ಕೊರೆಸಲು ಅನುಮತಿ ನೀಡಲಾಗಿದೆ ಎಂದರು. ಉಳ್ಳಾಲ, ಮುಲ್ಕಿಯ ಮುಖ್ಯಾಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದು ನೀರು ನಿರ್ವಹಣೆಗೆ ಸಹಕಾರ ನೀಡದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಮೂಡಬಿದ್ರೆ ಮತ್ತು ಬಂಟ್ವಾಳದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದು, ಬಂಟ್ವಾಳದಲ್ಲಿ ನೀರು ಪೂರೈಕೆ ಸಂಬಂಧ ಇದ್ದ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ಉಪವಿಭಾಗ ಅಧಿಕಾರಿ ರವಿಚಂದ್ರ ನಾಯಕ್ ಹೇಳಿದರು.

ಪುತ್ತೂರಿನಲ್ಲಿ ನೀರಿಗೆ ಸಮಸ್ಯೆಯಾಗಿಲ್ಲ ಎಂದು ಉಪವಿಭಾಗ ಅಧಿಕಾರಿ ಕೃಷ್ಣಮೂರ್ತಿ ಅವರು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಭೆಗೆ ಮಾಹಿತಿ ನೀಡಿ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವವಿದ್ದು, ಪ್ರತೀ ತಾಲೂಕಿಗೆ ಬರ ನಿರ್ವಹಣೆಗೆ 25 ಲಕ್ಷ ರೂ. ಗಳನ್ನು ನೀಡಲಾಗಿದೆ ಎಂದರು. ಪ್ರತೀ ವರ್ಷವೂ ಎದುರಾಗುತ್ತಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರದ ಅಗತ್ಯವನ್ನು ಅವರು ಜಿಲ್ಲಾ ಉಸ್ತುವಾರಿ ಸಚಿವರ ಮುಂದಿಟ್ಟರು. ಪುತ್ತೂರಿನ ಕೆಲವು ಪ್ರದೇಶಗಳಲ್ಲಿ ನೀರಿದ್ದರೂ ಲೋ ವೋಲ್ಟೇಜ್ ಸಮಸ್ಯೆಯಿದೆ ಎಂದರು. ಇನ್ನು ಮಳೆಗಾಲವನ್ನು ಎದುರಿಸಲು ಎಲ್ಲ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದ್ದು, ಮಹಾನಗರಪಾಲಿಕೆ ಆಯುಕ್ತರು, ಉಪವಿಭಾಗಾಧಿಕಾರಿಗಳು ಹಾಗೂ ಪಂಚಾಯಿತಿಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಇಒ ಅವರು ಪಿಪಿಟಿ ಮೂಲಕ ನೀಡಿದರು.

Also Read  ಉಪ್ಪಿನಂಗಡಿ: ಕರ್ತವ್ಯ ನಿರತ ಸಂಚಾರ ಪೊಲೀಸ್ ಠಾಣಾ ಎಆರ್.ಎಸ್.ಐ ಗೆ ಸ್ಕೂಟರ್ ಢಿಕ್ಕಿ..!! ➤ ಇಬ್ಬರಿಗೆ ಗಾಯ


ಮಳೆಗಾಲವನ್ನು ಎದುರಿಸಲು ದೋಣಿಗಳು, ಹೋಂಗಾರ್ಡ್ ಹಾಗೂ ಉಪಕರಣಗಳನ್ನು ಚೆಕ್‍ಲಿಸ್ಟ್ ಮಾಡಿದ್ದು ಎಲ್ಲವೂ ಸನ್ನದ್ದ ಸ್ಥಿತಿಯಲ್ಲಿದೆ. ದುರಂತ ಸಂಭವಿಸಿದರೆ 24 ಗಂಟೆ ಹೆಚ್ಚೆಂದರೆ 48 ಗಂಟೆಯೊಳಗೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ. ಕಂಟ್ರೋಲ್ ರೂಮ್ ಈಗಾಗಲೆ ವ್ಯವಸ್ಥಿತವಾಗಿದ್ದ್ದು, ಸೆಟ್‍ಲೈಟ್ ಪೋನ್ ಸಹ ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮೂರು ಘಾಟಿಗಳಲ್ಲಿ ಭೂಕುಸಿತ ಸಂಭವಿಸುವ ಮುನ್ಸೂಚನೆಗಳಿದ್ದು, ನಿರ್ವಹಣೆ ಹೊಣೆ ಲೋಕೋಪಯೋಗಿ ಇಲಾಖೆಗೆ ನೀಡುವಂತೆ ಜಿಲ್ಲಾಧಿಕಾರಿಗಳು ಸಚಿವರಿಗೆ ಹೇಳಿದರು. ಈಗಾಗಲೇ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಭೂಕುಸಿತ ನಿರ್ವಹಣೆಗೆ ನಿಗದಿತ ಘಾಟಿಗಳಲ್ಲಿ ಜೆಸಿಬಿ ಹಾಗೂ ಸಿಬ್ಬಂದಿಗಳನ್ನು ಇರಿಸಲು ಸೂಚಿಸಲಾಗಿದೆ. ಕಡಲ್ಕೊರೆತ ಕಾಮಗಾರಿಗೆ ಅನುದಾನ ಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಎಲ್ಲ ಅಧಿಕಾರಿಗಳು ಸಭೆಯಲ್ಲಿದ್ದರು.

error: Content is protected !!
Scroll to Top