ಪೇರಡ್ಕ-ಕಾಯರಡ್ಕ ರಸ್ತೆ:

(ನ್ಯೂಸ್ ಕಡಬ) newskadaba.com,ಕಲ್ಲುಗುಡ್ಡೆ,ಮೇ.17. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಿಂದ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಪೇರಡ್ಕದಿಂದ ಕಾಯರಡ್ಕ ವರೆಗೆ ಡಾಮಾರು ಕಿತ್ತು ಹೋಗಿ ಹೊಂಡ ಗುಂಡಿಗಳು ನಿರ್ಮಾಣವಾಗಿ ತೀರಾ ಹದಗೆಟ್ಟಿದ್ದು, ಸರ್ವಋತುವಿನಲ್ಲಿ ಸಂಚಾರ ಕಷ್ಟಕರವಾಗಿದ್ದು, ಹಲವು ವರ್ಷಗಳಿಂದ ದುರಸ್ಥಿಗೊಳಿಸುವಂತೆ ಆಗ್ರಹಿಸುತ್ತಿದ್ದರೂ ದುರಸ್ಥಿ ಮಾಡದೇ ಇರುವುದಕ್ಕೆ ನಿತ್ಯ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಪೂರ್ಣ ಪ್ರಮಾಣದಲ್ಲಿ ದುರಸ್ಥಿಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿ.ಪಂ. ಇಂಜಿನೀಯರ್ ರೋಹಿದಾಸ್ ರವರು ಅನುದಾನ ಲಭ್ಯವಿದ್ದು 3-4 ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದಿದ್ದಾರೆ.
ದೂಳುಮಯ, ಕೆಸರುಮಯ;
ತಾಲೂಕು ಕೇಂದ್ರ ಕಡಬದಿಂದ ಕಲ್ಲುಗುಡ್ಡೆಯನ್ನು ಸಂಪರ್ಕಿಸುವ ಈ ಜಿ.ಪಂ. ರಸ್ತೆಯ ಪೇರಡ್ಕದಿಂದ ಕಾಯರಡ್ಕದವರೆಗೆ ಸುಮಾರು 2 ಕಿ.ಮೀ. ತನಕ ತೀರಾ ಹದಗೆಟ್ಟಿದ್ದು ವಾಹನ ಸವಾರರು ನಿತ್ಯ ನರಕಯಾತನೆ ಪಡುತ್ತಿದ್ದಾರೆ. ಈ ರಸ್ತೆಯು ಬೆಸಿಗೆಗಾಲದಲ್ಲಿ ದೂಳುಮಯಗೊಂಡರೆ, ಮಳೆಗಾಲದಲ್ಲಿ ಕೆಸರುಮಯಗೊಂಡು ರಸ್ತೆಯ ಹೊಂಡ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಪಾಯದ ಸ್ಥಿತಿಯನ್ನು ತಂದೊಡ್ಡುತಿದ್ದು, ಈ ರಸ್ತೆ ಎಲ್ಲಾ ಋತುವಿನಲ್ಲೂ ಸಂಚಾರಕ್ಕೆ ಕಷ್ಟಕರವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಅಪತ್ಬಾಂಧವ ರಸ್ತೆ;
ಈ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದರೂ, ಅಪತ್ಬಾಂಧವ ರಸ್ತೆಯೂ ಹೌದು. ಕಳೆದ ಮಳೆಗಾಲದಲ್ಲಿ ಹೊಸಮಠ ಸೇತುವೆ ಸುಮಾರು 1 ತಿಂಗಳು ಮುಳುಗಡೆಗೊಂಡ ಸಂದರ್ಭದಲ್ಲಿ ಮಂಗಳೂರು ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಪ್ರಯಾಣಿಸುವ ವಾಹನ, ಶಾಲಾ ಕಾಲೇಜು ವಾಹನ, ಸರಕಾರಿ ಬಸ್ಸುಗಳು ಈ ರಸ್ತೆಯ ಮೂಲಕವೇ ಸಂಚರಿಸಿದ್ದು ಆಪದ್ಬಾಂಧವ ಎನಿಸಿಕೊಂಡಿದೆ. ಅಲ್ಲದೆ, ಕಡಬದಿಂದ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯಹೆದ್ದಾರಿ ಹಾಗೂ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಲು ಈ ರಸ್ತೆ ಸುಲಭದಾರಿಯಾಗಿದೆ.
ಗ್ರಾಮಸಭೆಗಳಲ್ಲೂ ಪ್ರಸ್ತಾಪ;
ಸದ್ರಿ ರಸ್ತೆಯನ್ನು ಡಾಮಾರೀಕರಣ ಯಾ ದುರಸ್ಥಿಗೊಳಿಸುವಂತೆ ನೂಜಿಬಾಳ್ತಿಲ, ಕುಟ್ರುಪಾಡಿ ಗ್ರಾಮ ಸಭೆಯಲ್ಲೂ ಆಗ್ರಹಿಸಿ ನಿರ್ಣಯಿಸಿದ್ದು, ಅದಲ್ಲದೆ, ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿ ದುರಸ್ಥಿಗೊಳಿಸುವಂತೆಯೂ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಮುಖ ಸಂಪರ್ಕ ಕೊಂಡಿ ರಸ್ತೆಯಾಗಿರುವ ಕಾಯರಡ್ಕ – ಪೇರಡ್ಕ ರಸ್ತೆಯನ್ನು ಶೀಘ್ರವಾಗಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

Also Read  ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ- ಸವಾರ ಗಂಭೀರ

ಕೂಡಲೇ ಕಾಮಗಾರಿ ಪ್ರಾರಂಭ;
ಕಾಯರಡ್ಕ-ಪೇರಡ್ಕ ರಸ್ತೆ ದುರಸ್ಥಿಗೆ ಅನುದಾನ ಲಭ್ಯವಿದ್ದು, ಮರಳು ಹಾಗೂ ನೀರಿನ ಸಮಸ್ಯೆಯಿಂದ ಕಾಮಗಾರಿ ಆರಂಭಿಸಲು ಅಸಾಧ್ಯವಾಗಿದ್ದು, ಈ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ರೂ. 50 ಲಕ್ಷ ಅನುದಾನ ಮಂಜೂರುಗೊಂಡಿದ್ದು, ಟೆಂಡರ್ ಪ್ರಕೃಯೆ ಪೂರ್ಣಗೊಂಡಿದ್ದು, ಈ ಅನುದಾನದಲ್ಲಿ ಕಾಯರಡ್ಕ ಜಂಕ್ಷನ್‍ನಿಂದ ಮುಂದಕ್ಕೆ 950 ಮೀಟರ್ ಡಾಮರೀಕರಣ ಹಾಗೂ ಮುಂದಕ್ಕೆ ಜಿ.ಪಂ. ಮಳೆಹಾನಿ ಅನುದಾನದ ರೂ. 19 ಲಕ್ಷದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆಸಲಾಗುವುದು. ಕಾಂಕ್ರಿಟೀಕರಣ ಕಾಮಗಾರಿಯನ್ನು ಇನ್ನು ಮೂರು ನಾಲ್ಕು ದಿನಗಳಲ್ಲಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಸತ್ಯೇಂದ್ರ ಆಲಿಯಾನ್ ಹಾಗೂ ಕಡಬ ಸಹಾಯಕ ಇಂಜಿನೀಯರ್ ಭರತ್ ರವರು ತಿಳಿಸಿದ್ದಾರೆ.
3-4 ದಿನದಲ್ಲಿ ಕೆಲಸ ಪ್ರಾರಂಭ;
ತೀರಾ ಹದಗೆಟ್ಟಿರುವ ಕಾಯರಡ್ಕ-ಪೇರಡ್ಕ ರಸ್ತೆಯ ದುರಸ್ಥಿ ಕಾರ್ಯ 3-4 ದಿನಗಳಲ್ಲಿ ಪ್ರಾರಂಭಿಸಲಾಗುವುದು. ಈ ರಸ್ತೆಗೆ ಲೋಕೋಪಯೋಗಿ ಇಲಾಖೆಯ ರೂ. 50 ಲಕ್ಷ ಅನುದಾನದಲ್ಲಿ ಕಾಯರಡ್ಕ ಜಂಕ್ಷನ್‍ನಿಂದ ಮುಂದಕ್ಕೆ 950 ಮೀಟರ್ ಡಾಮರೀಕರಣ ಹಾಗೂ ಮುಂದಕ್ಕೆ ಜಿ.ಪಂ.ನ ಮಳೆಹಾನಿ ಅನುದಾನ ರೂ. 19 ಲಕ್ಷದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಮಾಡಲಾಗುವುದು.
– ಸತ್ಯೇಂದ್ರ ಸಾಲಿಯಾನ್ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪುತ್ತೂರು

Also Read  ಮನೆಯಂಗಳಕ್ಕೆ ಬರೋಬ್ಬರಿ 17 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

 

error: Content is protected !!
Scroll to Top