(ನ್ಯೂಸ್ ಕಡಬ) newskadaba.com,ಹೈದರಾಬಾದ್,ಮೇ.14. ಇದು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಶೇನ್ ವ್ಯಾಟ್ಸನ್ ರ ಫೈನಲ್ ಪಂದ್ಯದ ಸಾಹಸಗಾಥೆ.
ಫೈನಲ್ ಪಂದ್ಯದ ಒತ್ತಡ, ಒಂದೆಡೆ ವಿಕೆಟ್ ಗಳು ಬೀಳುತ್ತಿದೆ, ರನ್ ಔಟ್ ತಪ್ಪಿಸಲು ಹಾಕಿದ ಡೈವ್ ನಿಂದ ಮೊಣ ಕಾಲಿಂದ ರಕ್ತ ಸುರಿಯುತ್ತಿದೆ, ಹರಿದ ನೆತ್ತರಿಂದಾಗಿ ಹಳದಿ ಪ್ಯಾಂಟ್ ಕೆಂಪಾಗಿದೆ, ಆದರೆ ಛಲ ಬಿಡದ ಹೋರಾಟ.ಬ್ಯಾಟಿಂಗ್ ಮಾಡುತ್ತಿದ್ದ ಶೇನ್ ವ್ಯಾಟ್ಸನ್ ಡೈವ್ ಹಾಕುವ ವೇಳೆ ಗಾಯಗೊಂಡಿದ್ದರು. ಆದರೆ ಈ ವಿಷಯ ಯಾರಿಗೂ ಹೇಳದ ವ್ಯಾಟ್ಸನ್ ಬ್ಯಾಟಿಂಗ್ ಮುಂದುವರಿಸಿದರು. ಕಾಲಿನಲ್ಲಿ ರಕ್ತ ಸುರಿಯುತ್ತಿದ್ದರೂ, ಪ್ಯಾಂಟ್ ನೆತ್ತರಿಂದ ತೊಯ್ದು ಹೋದರೂ, ಆ ನೋವಿನಲ್ಲೂ ಏಕಾಂಗಿ ಹೋರಾಟ ನಡೆಸಿದ ಶೇನ್ 59 ಎಸೆತಗಳಲ್ಲಿ 80 ರನ್ ಗಳಿಸಿ ಕೊನೆಯ ಓವರ್ ನಲ್ಲಿ ರನ್ ಔಟ್ ಆಗಿ ಪೆವಿಲಿಯನ್ ತೆರಳಿದರು.
ರವಿವಾರ ಹೈದರಾಬಾದ್ ನಲ್ಲಿ ಮುಂಬೈ ವಿರುದ್ಧ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಈ ಘಟನೆ ನಡೆದಿದೆ.ಪಂದ್ಯದ ನಂತರ ವ್ಯಾಟ್ಸನ್ ಕಾಲಿಗೆ ಆರು ಹೊಲಿಗೆ ಹಾಕಲಾಗಿದೆ. ಈ ವಿಷಯವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮೂಲಕ ಜಗಜ್ಜಾಹೀರು ಮಾಡಿದ ಹರ್ಭಜನ್ ಸಿಂಗ್, ಸ್ನೇಹಿತನನ್ನು ಕೊಂಡಾಡಿದ್ದಾರೆ.ಹರ್ಭಜನ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೋವಿನ ನಡುವೆಯೂ ಬ್ಯಾಟಿಂಗ್ ಮಾಡಿದ ಶೇನ್ ವ್ಯಾಟ್ಸನ್ ಸಾಹಸವನ್ನು ಕ್ರಿಕೆಟ್ ಜಗತ್ತು ಕೊಂಡಾಡಿದೆ. ವ್ಯಾಟ್ಸನ್ ಹೋರಾಟದ ನಡುವೆಯೂ ಚೆನ್ನೈ ಒಂದು ರನ್ ನಿಂದ ಪಂದ್ಯ ಸೋತು ಮುಂಬೈ ಗೆ ಶರಣಾಗಿತ್ತು