(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಮೇ.10. ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೋಬನಗರದ ಪೊಲೀಸ್ ಚೌಕಿ ಬಳಿ ಇರುವ ‘ಉಪಹಾರ ದರ್ಶಿನಿ’ಯಲ್ಲಿ ಬೆಳಗ್ಗೆ ತಿಂಡಿ ತಿನ್ನಲೆಂದು ಬಂದವರಿಗೆ ಆಶ್ಚರ್ಯ ಕಾದಿತ್ತು. ತಮಗೆ ಬೇಕಾದ ತಿಂಡಿ ಆರ್ಡರ್ ಮಾಡಿ ಕೂತ ಕೆಲವೇ ಹೊತ್ತಿನಲ್ಲಿ ಇಂಗ್ಲಿಷ್‌ನಲ್ಲಿ ಗುಡ್‌ಮಾರ್ನಿಂಗ್ ಹೇಳುತ್ತಾ ಯುವತಿ ರೂಪದ ರೋಬೋಟ್ ಬಂದು ಟೇಬಲ್ ಬಳಿ ನಿಂತು, ತೆಗೆದುಕೊಳ್ಳಿ ಎಂದಾಗ ಗಾಬರಿ. ಬಳಿಕ ನಿಧಾನವಾಗಿ ಇಲ್ಲಿನ ವ್ಯವಸ್ಥೆ ಅರ್ಥವಾಗಿತ್ತು. ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹ ರೋಟೋಟ್ ಕಾರ್ಯಾರಂಭ ಮಾಡಿದೆ ಎನ್ನುತ್ತಾರೆ ದರ್ಶಿನಿ ಮಾಲೀಕರು. ಹೋಟೆಲ್ನಲ್ಲಿ ರೋಬೊ ತಿಂಡಿ ಸಪ್ಲೈ ಮಾಡುತ್ತಿರುವ ವಿಷಯ ಕೆಲವೇ ಹೊತ್ತಿನಲ್ಲಿ ಕಾಳ್ಗಿಚ್ಚಿನಂತೆ ಹರಡಿತ್ತು.
ರೋಬೋಟ್ ಕೆಲಸ ನೋಡಲೆಂದು, ರೋಬೋಟ್ ನಿಂದ ತಿಂಡಿ ತರಿಸಿಕೊಳ್ಳಲೆಂದು ನೂರಾರು ಜನ ಧಾವಿಸಿದರು. ಇದನ್ನು ನಿರೀಕ್ಷಿಸದೆ ಇದ್ದ ದರ್ಶಿನಿ ಮಾಲೀಕ ರಾಘವೇಂದ್ರ ಅವರು ರೋಟೋಟ್ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು.‘ಪ್ರಾಯೋಗಿಕವಾಗಿ ಈ ಸೇವೆ ಆರಂಭಿಸಲಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಇದಕ್ಕೆ ಚಾಲನೆ ನೀಡಲಾಗುವುದು. ಸುಮಾರು 5.30 ಲಕ್ಷ ರೂ. ನೀಡಿ ಈ ರೋಟೋಟ್ ತಂದಿದ್ದು, ಈ ರೀತಿಯ ರೋಬೋಟ್ ಅಳವಡಿಸಲಾಗಿದೆ. ಬೆಳಗ್ಗೆ 12 ರಿಂದ 4 ಗಂಟೆ ಮತ್ತು ರಾತ್ರಿ 7 ರಿಂದ 10 ಗಂಟೆಯವರೆಗೆ ರೋಬೋಟ್ ಸರ್ವೀಸ್ ಇರುತ್ತದೆ’ ಎನ್ನುತ್ತಾರೆ.ಎರಡು ವರ್ಷಗಳ ಹಿಂದೆ ಇಲ್ಲಿ ಆರಂಭಗೊಂಡ ಉಪಾಹಾರ ದರ್ಶಿನಿ ಈಗಾಗಲೇ ಜನಪ್ರಿಯಗೊಂಡಿದೆ. ಇದೀಗ ಇದರ ಮೊದಲ ಮಹಡಿಯಲ್ಲಿ ಉತ್ತರ ಭಾರತೀಯ ತಿಂಡಿಯ ವ್ಯವಸ್ಥೆ ಮಾಡಲಾಗಿದ್ದು, ‘ಇಲ್ಲಿ ಮಾತ್ರ ಈ ರೋಬೋಟ್ ಕಾರ್ಯ ನಿರ್ವಹಿಸಲಿದೆ’ ಎಂದು ಹೇಳಿದರು.
ಗ್ರಾಹಕರಿಗೆ ಬೇಕಾದ ತಿಂಡಿಯ ಆರ್ಡರ್ ಪಡೆದು ಕೌಂಟರ್‌ಗೆ ಕೊಟ್ಟ ಬಳಿಕ ತಿಂಡಿಯನ್ನು ಸಿದ್ಧಗೊಳಿಸಿ ರೋಬೋಟ್ ಕೈಯಲ್ಲಿ ಇರುವ ತಟ್ಟೆಯ ಮೇಲೆ ಇಡಲಾಗುತ್ತದೆ. ಬಳಿಕ ನಿರ್ದಿಷ್ಟ ಟೇಬಲ್ ಸಂಖ್ಯೆಯನ್ನು ಒತ್ತಿದಾಗ ರೋಬೋಟ್ ಆ ಟೇಬಲ್ ಬಳಿಗೆ ಹೋಗಿ, ಗ್ರಾಹಕರಿಗೆ ಶುಭ ಕೋರುತ್ತಾ, ತೆಗೆದುಕೊಳ್ಳುವಂತೆ ವಿನಂತಿಸುತ್ತದೆ.ಇಲ್ಲಿನ ಉಪಹಾರ ದರ್ಶಿನಿಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಗ್ರಾಹಕರಿಗೆ ಸೇವೆ ನೀಡಲು ರೋಬೋ ಸಹಾಯ ಪಡೆದಿದ್ದು, ಇದು ನಗರದಲ್ಲಿ ಮನೆಮಾತಾಗಿದೆ. ಶಿವಮೊಗ್ಗದ ಹೋಟೇಲ್ಗಳು ಇದೀಗ ಹೈಟೆಕ್ ಮಾದರಿಯತ್ತ ಹೊರಳುವ ಸೂಚನೆಯನ್ನು ನೀಡಿವೆ.ಇದರ ಸಂಪೂರ್ಣ ನಿಯಂತ್ರಣ ನಿಯಂತ್ರಕರ ಕೈಯಲ್ಲಿ ಇರಲಿದೆ.