ಸ್ಮಾರ್ಟ್ ಸಿಟಿಯಡಿ ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಿ- ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.10.  ಸ್ಮಾರ್ಟ್ ಸಿಟಿ ಯೋಜನೆಯಡಿ ಏಳು ಪ್ಯಾಕೇಜ್‍ಗಳಲ್ಲಿ ನಗರದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಿ. ಅಧಿಕಾರಿಗಳು ಈ ನಿಟ್ಟಿನಲ್ಲಿ ವಿನೂತನವಾಗಿ ಚಿಂತಿಸಿ ಕಾರ್ಯಾನುಷ್ಠಾನ ಮಾಡಿ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆಗಳನ್ನು ನಿರ್ಮಿಸುವಾಗ ವಿನೂತನವಾಗಿ ಚಿಂತಿಸಿ; ಮತ್ತೆ ವಿವಿಧ ಇಲಾಖೆಗಳ ಅಧಿಕಾರಿಗಳು ರಸ್ತೆ ನಿರ್ಮಾಣದ ಬಳಿಕ ಅಗೆದು ನಿರ್ಮಾಣಕ್ಕೆ ಹಿನ್ನಡೆಯನ್ನು ಮಾಡದೆ ಸಮಗ್ರ ಅಭಿವೃದ್ಧಿ ನಗರಾಭಿವೃದ್ಧಿಗೆ ನಿಮ್ಮ ಕೊಡುಗೆಯನ್ನು ನೀಡಿ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.

ರಸ್ತೆ ನಿರ್ಮಾಣದ ಬಳಿಕ ರಸ್ತೆಗಳನ್ನು ಅಗೆಯಲು ಅವಕಾಶ ನೀಡದೆ, ಮುನ್ನವೇ ಮೆಸ್ಕಾಂ, ಕೆಯುಐಡಿಎಫ್‍ಸಿ ಮತ್ತು ಕೆಪಿಟಿಸಿಎಲ್, ನೀರು ಸರಬರಾಜು, ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ನಿರ್ಮಾಣಗೊಳ್ಳುವ ಪ್ರದೇಶಗಳಲ್ಲಿ ತಮ್ಮ ಇಲಾಖಾ ವ್ಯಾಪ್ತಿಯ ಕಾಮಗಾರಿಗಳಿದ್ದರೆ ಮೊದಲೇ ಪರಿಶೀಲಿಸಿ, ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಗ್ರವಾಗಿ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಎಲ್ಲರಿಗೂ ಜಿಲ್ಲಾಧಿಕಾರಿಗಳು ಇಂದು ನಿರ್ದೇಶನ ನೀಡಿದರು. ಒಂದೇ ಕಾಮಗಾರಿಯನ್ನು ವಿವಿಧ ಸಂಸ್ಥೆಗಳು ಹಲವು ಬಾರಿ ಮಾಡುವುದು; ಕಾಮಗಾರಿ ಮುಗಿದ ಬಳಿಕ ಮತ್ತೆ ಅಗೆಯುವುದಕ್ಕೆ ಅವಕಾಶ ನೀಡದೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ ಎಂದರು. ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳುವ ರಸ್ತೆಗಳು ಜನಸ್ನೇಹಿಯಾಗಿರಬೇಕೇ ಹೊರತು ವಾಹನ ಸ್ನೇಹಿಯಾಗಿರಬಾರದು; ಫುಟ್‍ಪಾತ್‍ಗಳಲ್ಲಿ ಪಾರ್ಕಿಂಗ್‍ಗೆ ಅವಕಾಶ ನೀಡಬಾರದು. ಪಾದಾಚಾರಿ ಸುರಕ್ಷೆಗೆ ಆದ್ಯತೆ ನೀಡಬೇಕೆಂದರು.

ಯಾವ್ಯಾವ ರಸ್ತೆಗಳಲ್ಲಿ ನಿರ್ಮಾಣಕ್ಕೆ ಮುನ್ನ ಬಿಎಸ್‍ಎನ್‍ಎಲ್, ಮೆಸ್ಕಾಂ ಇಂಜಿನಿಯರ್‍ಗಳು ತಮ್ಮ ಕೇಬಲ್‍ಗಳನ್ನು ಅಳವಡಿಸಲಿದೆ ಎಂಬ ಮಾಹಿತಿಯನ್ನು ಕೆಎಂಝಡ್ ಫಾರ್ಮಾಟ್‍ನಲ್ಲಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಮಹಾನಗರಪಾಲಿಕೆ ವತಿಯಿಂದ ಮೇ ಅಂತ್ಯದೊಳಗೆ ಸಂಪೂರ್ಣಗೊಳಿಸುವ ರಸ್ತೆ ಕಾಮಗಾರಿಗಳನ್ನು ಸಮಯ ಮಿತಿಯೊಳಗೆ ಮುಗಿಸಿ, ಮುಂದಿನ ಸ್ಮಾರ್ಟ್ ಸಿಟಿ ಸಭೆಗಿಂತ ಮುಂಚಿತವಾಗಿ ಅಂತರ್ ಇಲಾಖೆ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿಗಳ ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಮಂಗಳೂರು ಮಹಾನಗರಪಾಲಿಕೆ ಅಭಿವೃದ್ಧಿ ಪಡಿಸಿದ ಹಾಗೂ ಪಡಿಸುತ್ತಿರುವ ಮಾಹಿತಿಯನ್ನು ಪಡೆದ ಜಿಲ್ಲಾಧಿಕಾರಿಗಳು, ಮಂಗಳಾದೇವಿ ರಸ್ತೆ, ಭವಂತಿ ರಸ್ತೆಯಲ್ಲಿರುವ ಬಾಕಿ ಇರಿಸಿರುವ ಕಾಮಗಾರಿಯನ್ನು ಟಿಡಿಆರ್ ಮೂಲಕ ಅಥವಾ ಮಾತುಕತೆ ಮೂಲಕ ಬಗೆಹರಿಸಿ ಸಂಪೂರ್ಣಗೊಳಿಸಲು ಸೂಚನೆ ನೀಡಿದರು.ಕಂಕನಾಡಿ ಮಾರ್ಕೆಟ್ ಬಳಿ ಬಸ್ ನಿಲ್ಲಿಸುವ ಸಂಬಂಧ ಉಂಟಾಗಿರುವ ಸಮಸ್ಯೆಯನ್ನು ಆರ್ ಟಿ ಒ ಮೂಲಕ ಬಗೆಹರಿಸಲು ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ಸಲಹೆ ಮಾಡಿದರು.

error: Content is protected !!
Scroll to Top