ಮಾನವೀಯತೆಗಿಂತ ಮಿಗಿಲಾದ ಜಾತಿಯಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.09.  ಅಂತರಾಷ್ಟ್ರೀಯ ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ಅಂಗವಾಗಿ ಮೇ 8 ರಂದು ಜಿಲ್ಲಾ ಗೃಹರಕ್ಷಕದಳ ಮೇರಿಹಿಲ್ ಮಂಗಳೂರು ಕಚೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ತುಳುನಾಡು ಇದರ ಅಧ್ಯಕ್ಷರಾದ ವಿಲ್ಸನ್ ದಿವಾಕರ್, ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಅಜಯ್ ಕುಮಾರ್, ಮಾನವ ಹಕ್ಕುಗಳ ಪ್ರಾಧಿಕಾರದ ಶಿವರಾಜ್ ಅಯ್ಯರ್, ಅರಣ್ಯ ಮಿತ್ರ ಪ್ರಶಸ್ತಿ ವಿಜೇತ ಮಾಧವ ಉಲ್ಲಾಳ್ ಇವರುಗಳು ಉಪಸ್ಥಿತರಿದ್ದರು. ಮಾಧವ ಉಲ್ಲಾಳ್ ಇವರು ಮರಗಿಡಗಳನ್ನು ನೆಟ್ಟು ಬೆಳೆಸಿ, ಪೋಷಿಸಿ, ಪ್ರೀತಿಸಿ ಎಂದು ಕರೆ ನೀಡಿದರು.

ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರುರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಎಂಬುದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ಮಾನವೀಯ ಕಳಕಳಿ ಹೊಂದಿರುವ ಸಾಮೂಹಿಕ ಸಂಘಟನೆಯಾಗಿದ್ದು ವಿಶ್ವದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಮಾನವೀಯತೆಗಿಂತ ಮಿಗಿಲಾದ ಜಾತಿ ಇಲ್ಲ ಎಂಬ ತತ್ವದೊಂದಿಗೆ ಕೆಲಸ ನಿರ್ವಹಿಸುತ್ತ ಮಾನವೀಯತೆ ಮುಖಾಂತರ ಜಗತ್ತಿಗೆ ಶಾಂತಿಯನ್ನು ಪಸರಿಸುವ ಕೆಲಸವನ್ನು ಮಾಡುತ್ತಿವೆ. ಪ್ರತಿಯೊಬ್ಬ ಮನುಷ್ಯರು ರೆಡ್ ಕ್ರಾಸ್ ತತ್ವ ಧ್ಯೇಯಗಳನ್ನು ಜೀವನದಲ್ಲಿ ಅಳವಡಿಸಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು. ಕಚೇರಿಯ ಅಧೀಕ್ಷಕರಾದ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ. ಎಸ್. ಉಪಸ್ಥಿತರಿದ್ದರು. ಗೃಹರಕ್ಷಕರಾದ ರಮೇಶ್ ಭಂಡಾರಿ, ದಿವಾಕರ್, ಸನತ್ ಕುಮಾರ್ ಆಳ್ವ, ಸುಖಿತಾ ಶೆಟ್ಟಿ , ಕುಮಾರಿ ದೀಕ್ಷಾ ಮತ್ತು ಶಿಲ್ಪಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Also Read  ಉಳ್ಳಾಲ: ಕಾಂಗ್ರೆಸ್ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ➤ ಎಸ್ಡಿ ಪಿಐ ಕಾರ್ಯಕರ್ತನ ಬಂಧನ

error: Content is protected !!
Scroll to Top