newskadaba.com ಸವಣೂರು, ಡಿ.03. ಪಾಲ್ತಾಡಿ ಗ್ರಾಮದ ಮಂಜುನಾಥ ನಗರ ವಿವೇಕಾನಂದ ಯುವಕ ಮಂಡಲ ಮತ್ತು ಶ್ರೀ ಗೌರಿ ಯುವತಿ ಮಂಡಲದ ವತಿಯಿಂದ ನೀಡಲಾಗುವ “ವಿವೇಕ ಯುವ ಪ್ರಶಸ್ತಿ”ಗೆ ಸವಣೂರಿನ ರಾಕೇಶ್ ರೈ ಕೆಡೆಂಜಿ ಅವರು ಆಯ್ಕೆಯಾಗಿದ್ದಾರೆ.
52 ಬಾರಿ ರಕ್ತದಾನ ಹಾಗೂ ರಕ್ತದಾನದ ಮಹತ್ವ ಕುರಿತ ಪ್ರಚಾರ ರಾಯಬಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಕೇಶ್ ರೈ ಕೆಡೆಂಜಿ ಅವರಿಗೆ ಈ ಪ್ರಶಸ್ತಿಯನ್ನು ಡಿ.8ರಂದು ಮಂಜುನಾಥನಗರ ಹಿ.ಪ್ರಾ.ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಇವರ ಸಮ್ಮುಖದಲ್ಲಿ, ಸುಳ್ಯ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಎಸ್.ಅಂಗಾರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘಕರ ಪ್ರಕಟಣೆ ತಿಳಿಸಿದೆ.
ರಾಕೇಶ್ ರೈ ಕೆಡೆಂಜಿ ಅವರು ಸವಣೂರು ಯುವಕ ಮಂಡಲದ ಅಧ್ಯಕ್ಷರಾಗಿ ತಾಲೂಕು,ಜಿಲ್ಲೆ,ರಾಜ್ಯಮಟ್ಟದ ಯುವಜನ ಮೇಳಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು,ತಾಲೂಕು ,ಜಿಲ್ಲಾ ಯುವ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ನರಿಮೊಗರು ಜೆಸಿಐ ಅಧ್ಯಕ್ಷರಾಗಿ ವ್ಯಕ್ತಿತ್ವ ವಿಕಸನ ದಂತಹ ಹಲವು ತರಬೇತಿಗಳನ್ನು ದ.ಕ., ಉಡುಪಿ, ಕೊಡಗು ಜಿಲ್ಲೆಗಳನ್ನೊಳಗೊಂಡ ವಲಯ ೧೫ರಲ್ಲಿ ವಲಯ ತರಬೇತುದಾರರಾಗಿ ನಡೆಸಿದ್ದಾರೆ. ವಲಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರಕ್ತದಾನದ ಜತೆಗೆ ನೇತ್ರದಾನ ಶಿಬಿರಗಳನ್ನು ಆಯೋಜಿಸಿ ಸುಮಾರು 60 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲು ಕಾರಣೀಭೂತರಾಗಿದ್ದಾರೆ. ಅಲ್ಲದೆ ಸವಣೂರು ಗ್ರಾ.ಪಂ.ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲೂ ಸಕ್ರೀಯರಾಗಿದ್ದಾರೆ.