ಸವಣೂರು: ಸರ್ವೆಯ ವಿನುತಾರವರ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್ ಕುಮಾರ್‌ಗೆ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.
೨೦ಕ್ಕೂ ಅಧಿಕ ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ದೈಹಿಕ ಸಂಪರ್ಕ ಬೆಳೆಸಿ ನಂತರ ಸೈನೆಡ್ ನೀಡಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಪುತ್ತೂರು ತಾಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕನಾಗಿದ್ದ ಕನ್ಯಾನ ಮೂಲದ ಮೋಹನ್ ಕುಮಾರ್‌ಗೆ ಸರ್ವೆಯ ವಿನುತಾರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡದ ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಹೆಚ್ಚಳಗೊಳಿಸುವಂತೆ ಕೋರಿ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರವಿ ಮಳಿಮಠ ಹಾಗೂ ಜಾನ್ ಮೈಕೆಲ್ ಕುನ್ಹಾರವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆಯನ್ನು ಮುಂದೂಡಿತು. ಬೇರೊಂದು ಯುವತಿಯ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿದ್ದ ಸೈನೈಡ್ ಮೋಹನ್‌ನನ್ನು ಪೊಲೀಸರು ಬಾಡಿ ವಾರೆಂಟ್ ಮೇಲೆ ಕರೆ ತಂದು ನ್ಯಾಯಪೀಠದ ಮುಂದೆ ಹಾಜರುಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿಕೊಡುವಂತೆ ಅಧೀನ ನ್ಯಾಯಾಲಯಕ್ಕೆ ಈ ವೇಳೆ ಸೂಚಿಸಿದ ಹೈಕೋರ್ಟ್ ನ್ಯಾಯಪೀಠವು ಎಲ್ಲಾ ದಾಖಲೆಗಳನ್ನು ಒಳಗೊಂಡ ಪೇಪರ್ ಬುಕ್ ಸಿದ್ಧಪಡಿಸಿ ಅದರ ಪ್ರತಿಯನ್ನು ಮೋಹನ್‌ಗೂ ಒದಗಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ. ಜಿಲ್ಲಾ ನ್ಯಾಯಾಲಯದಲ್ಲಿಯೂ ತನ್ನ ಪರವಾಗಿ ತಾನೇ ವಾದಿಸುತ್ತಿದ್ದ ಮೋಹನ್ ಕುಮಾರ್ ಹೈಕೋರ್ಟ್‌ನಲ್ಲಿ ನಡೆದ ಮೇಲ್ಮನವಿ ವಿಚಾರಣೆಯ ವೇಳೆಯೂ ತನ್ನ ಪರವಾಗಿ ತಾನೇ ವಾದ ಮಂಡಿಸುವುದಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾನೆ. 2009ರ ಸೆಪ್ಟೆಂಬರ್ 17ರಂದು ಮಡಿಕೇರಿ ಬಸ್ ನಿಲ್ದಾಣದ ಮಹಿಳೆಯರ ಶೌಚಗೃಹದ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಸೈನೈಡ್ ಮೋಹನ್‌ನನ್ನು ಬಂಧಿಸಿದ್ದರು. 2017ರ ಸೆಪ್ಟೆಂಬರ್ 13ರಂದು ದಕ್ಷಿಣ ಕನ್ನಡ ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸರ್ವೆಯ ವಿನುತಾರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೋಹನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆ ರದ್ದು ಕೋರಿ ಮೋಹನ್ ಹೈಕೋರ್ಟ್ ಮೆಟ್ಟಿಲೇರಿದ್ದು ಇದರ ವಿಚಾರಣೆ ಬಾಕಿಯಿದೆ. ಬಂಟ್ವಾಳದ ಅನಿತಾ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಾಡುಗೊಳಿಸಿದ್ದ ಹೈಕೋರ್ಟ್, ಬೆಳ್ತಂಗಡಿಯ ಲೀಲಾ ಕೊಲೆ ಪ್ರಕರಣದಲ್ಲಿ ಮೋಹನ್‌ನನ್ನು ಖುಲಾಸೆಗೊಳಿಸಿದೆ. ಸುಳ್ಯದ ಸುನಂದಾ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಖಾಯಂಗೊಳಿಸಿದೆ. ಇನ್ನೂ ಹಲವು ಯುವತಿಯರ ಕೊಲೆ ಪ್ರಕರಣದ ವಿಚಾರಣೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದೆ.