ಔಷಧ ಸಿಂಪಡಣೆಗೆ ಸಿಗುತ್ತಿಲ್ಲ ಸುಣ್ಣ..!! ► ಕೊಳೆ ರೋಗದಿಂದಾಗಿ ಅಡಿಕೆಗೆ ಹಳದಿ ಬಣ್ಣ..!!

(ನ್ಯೂಸ್ ಕಡಬ) newskadaba.com ಸವಣೂರು, ಸೆ.16. ಕೊಳೆರೋಗ ಹೆಸರು ಕೇಳಿದರೇನೇ ಬೆಚ್ಚಿಬೀಳುತ್ತಾರೆ ಕರಾವಳಿಯ ಕೃಷಿಕರು. ಅಡಿಕೆಗೆ ಬರುವ ಅತ್ಯಂತ ಭಯಾನಕ ರೋಗದಲ್ಲಿ ಕೊಳೆರೋಗ ಒಂದಾಗಿದೆ. ಕೊಳೆರೋಗ ಬಾಧಿತ ಕೃಷಿಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ಸೆ.11. ಕೊನೆಯ ದಿನವಾಗಿದ್ದು, ಅವಧಿ ವಿಸ್ತರಿಸುವಂತೆ ಕೃಷಿಕರು ಒತ್ತಾಯಿಸಿದ್ದಾರೆ. ಅರ್ಜಿ ಸಲ್ಲಿಸಲು ಇನ್ನೂ ಹಲವು ಕೃಷಿಕರು ಬಾಕಿಯಾಗಿದ್ದು ಇದರಿಂದಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವಂತೆ ಕೃಷಿಕರು ಮನವಿ ಮಾಡಿದ್ದಾರೆ.

ಸರಕಾರ ಸೇರಿದಂತೆ ವಿವಿಧ ಸಹಕಾರಿ ಸಂಘಗಳು, ರೈತಪರ ವಿಜ್ಞಾನಿಗಳು, ಚಿಂತಕರು ಕೊಳೆರೋಗದ ಬಗ್ಗೆ ಮತ್ತು ಅದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಲೇ ಬಂದಿದ್ದಾರೆ. ಆದರೂ ನಿರೀಕ್ಷಿತ ಫಲಿತಾಂಶ ಇನ್ನೂ ಸಿಗದಿರುವುದು ದುರಂತವೇ ಸರಿ. ಕಳೆದ ಎರಡು ತಿಂಗಳಿನಿಂದ ಎಡೆಬಿಡದೆ ಸುರಿದ ವಿಪರೀತ ಮಳೆಯ ಕಾರಣಕ್ಕೆ ಅಡಕೆಗೆ ಕೊಳೆರೋಗ ಉಂಟಾಗಿದೆ. ಪುತ್ತೂರು ತಾಲೂಕಿನಲ್ಲಿ ಶೇ.50 ರಷ್ಟು ಅಡಿಕೆ ಕೊಳೆರೋಗದಿಂದ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಕೆಲವೊಮ್ಮೆ ಇದರ ತೀವ್ರತೆ ಹೇಗಿರುತ್ತದೆಯೆಂದರೆ ಮರದಲ್ಲಿದ್ದ ಅಡಿಕೆಗಳು ಸಂಪೂರ್ಣ ನೆಲಕಚ್ಚುತ್ತವೆ. ಅಡಿಕೆ ಕೃಷಿಯನ್ನೆ ನಂಬಿರುವ ಅನೇಕ ಕೃಷಿಕರ ಕುಟುಂಬಗಳು ಕೂಡ ಸಂಕಷ್ಟಕ್ಕೆ ತುತ್ತಾಗುತ್ತವೆ.

ಮೊದಲನೆ ಹಂತದ ಸರ್ವೇ ಕಾರ್ಯ ಮುಗಿದಿದ್ದು ಇದೀಗ ಎರಡನೇ ಹಂತದ ಸರ್ವೆ ಕಾರ್ಯ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತೋಟಗಾರಿಕಾ ಇಲಾಖೆಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸುಳ್ಯ,ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಎಲ್ಲಾ ಭಾಗಗಳಲ್ಲಿರುವ ಕೃಷಿಕರ ತೋಟಗಳನ್ನು ಗಮನಿಸಿದರೆ ಅಡಿಕೆ ಗಿಡಗಳಿಂದ ಎಳೆ ಅಡಿಕೆಗಳು ಉದುರಲಾರಂಭಿಸಿವೆ. ಅಡಿಕೆಗೆ ಈಗ ಉತ್ತಮ ಧಾರಣೆ ಇದ್ದರೂ ಇರುವ ಅಡಿಕೆಯನ್ನು ಉಳಿಸಿಕೊಳ್ಳಲು ಕೃಷಿಕ ಶತಾಯಗತಾಯ ಪ್ರಯತ್ನ ಮಾಡಬೇಕಾಗಿದೆ. ಕಳೆದ ಎರಡು ತಿಂಗಳಿಂದ ಅಡಿಕೆ ಕೊಳೆರೋಗದಿಂದ ಉದುರುತ್ತಿದೆ. ಶೇ.50 ರಷ್ಟು ಅಡಿಕೆ ಈಗಾಗಲೇ ನಾಶವಾಗಿದೆ.

Also Read  2019 ರ ಗೃಹರಕ್ಷಕರ ದಿನಾಚರಣೆ ಕಾರ್ಯಕ್ರಮ

ಅಡಿಕೆ ಗಿಡದಲ್ಲಿ ಹಿಂಗಾರ ಅರಳುವ ಸಮಯದಿಂದ ಮೊದಲುಗೊಂಡು ಹಣ್ಣು ಅಡಿಕೆ ಆಗುವವರೆಗೆ ಸರಿ ಸುಮಾರು ಮೂರು ಬಾರಿಯಾದರೂ ಬೋಡೋ ದ್ರಾವಣ ಸಿಂಪಡಿಸಬೇಕಾಗುತ್ತದೆ. ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಕಡಿಮೆಯಾಗಿದೆ ಆದರೆ ಕೊಳೆರೋಗಕ್ಕೆ ಔಷಧ ಸಿಂಪಡನೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಚಿಪ್ಪು ಸುಣ್ಣದ ಕೊರತೆ ಉಂಟಾದ ಕಾರಣ ರೈತ ಇನ್ನಷ್ಟು ಕಂಗಾಲಾಗಿದ್ದಾನೆ. ಚಿಲ್ಲರೆ, ರಖಂ ಆಗಿ ಯಾವುದೇ ಅಂಗಡಿಯಲ್ಲೂ ಸುಣ್ಣ ದೊರೆಯುತ್ತಿಲ್ಲ. ಸಹಕಾರಿ ಸಂಘಗಳಲ್ಲಿ ಕಳೆದ 20 ದಿವಸಗಳಿಂದ ಸುಣ್ಣ ಪೂರೈಕೆಯಾಗಿಲ್ಲ. ಕಿಲೋ ಸುಣ್ಣ ಖರೀದಿಸಲು ಕೃಷಿಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ಕಾರಣಕ್ಕೆ ಸುಣ್ಣ ಅಲಭ್ಯ ಎಂಬ ಮಾಹಿತಿ ವಿತರಕರಿಗೂ ಗೊತ್ತಿಲ್ಲ. ಮಾರಾಟಗಾರನಿಗೂ ಗೊತ್ತಿಲ್ಲದಂತಹ ದುಸ್ಥಿತಿ ನಿರ್ಮಾಣವಾಗಿದೆ. ಕೊಳೆ ರೋಗಕ್ಕೆ ಅಥವಾ ಕೊಳೆರೋಗ ನಿಯಂತ್ರಣಕ್ಕೆ ಮೈಲುತುತ್ತು ಸಿಂಪಡನೆ ಮಾಡಬೇಕಾಗುತ್ತದೆ. ಕರಾವಳಿಯ ಬಹುತೇಕ ಕೃಷಿಕರು ಈ ಪದ್ದತಿಯನ್ನೇ ಅವಲಂಬಿಸಿದ್ದಾರೆ. ಮೈಲುತುತ್ತು ಸಿಂಪಡನೆ ಮಾಡಬೇಕಾದಲ್ಲಿ ಸುಣ್ಣ ಅತೀ ಅಗತ್ಯ. ಮೈಲುತುತ್ತು ಮಾರುಕಟ್ಟೆಯಲ್ಲಿ ದಾರಾಳವಾಗಿ ಸಿಗುತ್ತಿದೆ. ಮೈಲುತುತ್ತಿಗೆ ಸರಕಾರದಿಂದ ಸಬ್ಸಿಡಿಯೂ ಲಭ್ಯವಿದೆ. ಆದರೆ ಸುಣ್ಣ ಎಲ್ಲೂ ಸಿಗದೇ ಇರುವುದು ಔಷಧ ಇದ್ದರೂ ಸಿಂಪಡನೆ ಮಾಡಲಾಗದ ಪರಿಸ್ಥಿತಿ ಕೃಷಿಕರದ್ದಾಗಿದೆ.

ಕೊಳೆರೋಗದಿಂದ ಅಡಿಕೆ ನಾಶವಾದಲ್ಲಿ ನಷ್ಟದ ಪ್ರಮಾಣಕ್ಕೆ ತಕ್ಕಂತೆ ಪರಿಹಾರವೂ ಸಿಗುತ್ತಿಲ್ಲ. ತೋಟಗಾರಿಕಾ ಇಲಾಖೆಯ ವತಿಯಿಂದ ಸರ್ವೆ ನಡೆಸಿ ಸರಕಾರಕ್ಕೆ ವರದಿ ನೀಡಿದರೆ ಪರಿಹಾರ ಸಿಗುವುದು ಬಹಳ ಅಪರೂಪ. ಒಂದು ವೇಳೆ ಪರಿಹಾರ ಸಿಕ್ಕರೂ ನಷ್ಟವಾದ ಅಡಿಕೆ ಪ್ರಮಾಣದ ಶೇ. 02 ರಷ್ಟು ಪರಿಹಾರ ಮೊತ್ತ ಸರಕಾರದಿಂದ ಸಿಗುತ್ತಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಕೊಳೆ ರೋಗದಿಂದ ಅಡಿಕೆ ಜೊತೆಗೆ ಅಡಿಕೆ ಮರವೇ ಹಳದಿ ರೋಗ ಬಾಧೆಯಿಂದ ನಾಶವಾಗಿತ್ತು. ಇದಕ್ಕೆ ಸರಕಾರದಿಂದ ಕನಿಷ್ಟ ಪರಿಹಾರ ಮೊತ್ತ ನೀಡಿದರೂ ಅದರಿಂದ ಕೃಷಿಕ ಕಳೆದುಕೊಂಡ ಮೌಲ್ಯವನ್ನು ಪಡೆಯಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಕೃಷಿಕರು. ಸರಕಾರ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು, ಎಕರೆಗೆ ಕನಿಷ್ಠ 10 ಸಾವಿರ ರುಪಾಯಿಯಾದರೂ ಪರಿಹಾರ ಕೊಡಬೇಕು ಎನ್ನುವುದು ಕೃಷಿಕರ ಆಗ್ರಹವಾಗಿದೆ.

Also Read  ಜಾಗದ ವಿವಾದ- ಅಣ್ಣನನ್ನೇ ಕೊಲೆಗೈದ ತಮ್ಮ

ಕೊಳೆರೋಗದಿಂದ ಅಡಿಕೆ ಕೃಷಿ ಬಹುತೇಕ ನಾಶವಾಗುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಚೇರಿಯಲ್ಲೇ ಕುಳಿತು ಸರ್ವೆ ನಡೆಸಿ ಅಂದಾಜುಪಟ್ಟಿ ಸರಕಾರಕ್ಕೆ ಕಳುಹಿಸುತ್ತಿದೆ. ಸುಣ್ಣದ ಕೊರತೆಯನ್ನು ನೀಗಿಸುವಲ್ಲಿ ಕೃಷಿ ಇಲಾಖೆ ಯವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸುವ ಕೃಷಿಕರು, ಕೃಷಿಯ ಅಭಿವೃದ್ದಿಗೆ ಅಥವಾ ಕೃಷಿಕರ ಸಹಕಾರಕ್ಕೆ ಇರುವ ಇಲಾಖೆ ಈ ವಿಚಾರದಲ್ಲಿ ನಿದ್ರಾವಸ್ಥೆಯಲ್ಲಿರುವುದು ಕೃಷಿಕರ ಆಕ್ರೋಶಕ್ಕೂ ಕಾರಣವಾಗಿದೆ. ಕೊಳೆರೋಗದ ಬಗ್ಗೆ ಕೃಷಿ ತೋಟಗಳಿಗೆ ಭೇಟಿಕೊಟ್ಟು ಸರ್ವೇ ನಡೆಸಬೇಕು ಎನ್ನುವುದು ಕೃಷಿಕರ ಮನವಿಯಾಗಿದೆ. ಕರಾವಳಿ ಜಿಲ್ಲೆಯಾದ್ಯಂತ ಕೊಳೆರೋಗ ವ್ಯಾಪಕವಾಗಿ ಹರಡಿದ್ದು ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ದಿನವೊಂದಕ್ಕೆ ತೋಟದಲ್ಲಿ ಸಾವಿರಗಟ್ಟಲೆ ಎಳೆ ಅಡಿಕೆ ರೋಗದಿಂದ ಬೀಳುತ್ತಿದ್ದು ಏನು ಮಾಡಬೇಕೆಂದು ರೈತರು ಚಿಂತೆಗೀಡಾಗಿದ್ದಾರೆ. ಸರಕಾರ ಈ ಹಿಂದೆ ಎಕರೆಗೆ 2 ಸಾವಿರದಷ್ಟು ಪರಿಹಾರ ನೀಡಿದ್ದು ಯಾವ ಲೆಕ್ಕಕ್ಕೂ ಸಿಗದಂತಾಗಿದೆ. ಎಕರೆಗೆ ಕನಿಷ್ಠ 10 ಸಾವಿರವಾದರೂ ಪರಿಹಾರ ಕೊಡಬೇಕು ಎನ್ನುವುದು ರೈತರ ಮನವಿ.

Also Read  ಬಂಟ್ವಾಳ: ಒಂದೇ ದಿನ 16 ಕೊರೋನಾ ಪಾಸಿಟಿವ್

ವರದಿ: ಪ್ರವೀಣ್ ಚೆನ್ನಾವರ

error: Content is protected !!
Scroll to Top