ಮುಕ್ಕೂರಿನಲ್ಲಿ 9 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ

ಪರಂಪರೆ,ಪರಿಸರ,ಪರಿಶ್ರಮ ಪ್ರಜ್ಞೆ ಸಂಘಟನೆ ಜೀವಾಳ : ನಾಯರ್‌ಕೆರೆ

ಮುಕ್ಕೂರು : ಹಿರಿಯರು ತೋರಿಸಿದ ಪರಂಪರೆ ಪ್ರಜ್ಞೆ, ಪ್ರಕೃತಿ ಸಹಜ ಮೌಲ್ಯಗಳನ್ನು ಬೆಳೆಸುವ ಪರಿಸರ ಪ್ರಜ್ಞೆ, ಎಲ್ಲರನ್ನು ಒಗ್ಗೂಡಿಸಿ ಊರನ್ನು ಬೆಳಗಿಸುವ ಪರಿಶ್ರಮ ಪ್ರಜ್ಞೆ. ಈ ಮೂರನ್ನು ಹೊಂದಿರುವ ಸಂಘಟನೆ ಚಿರಾಯಿಯಾಗುತ್ತದೆ ಎಂದು ಪತ್ರಕರ್ತ, ಸಂಪನ್ಮೂಲ ವಕ್ತಿ ದುರ್ಗಾಕುಮಾರ್ ನಾಯರ್‌ಕೆರೆ ಹೇಳಿದರು.

ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ೯ ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಮ್ಮಾನ ನೆರವೇರಿಸಿ ಅವರು ಮಾತನಾಡಿದರು.

ಗಣೇಶೋತ್ಸವ ಪ್ರಕೃತಿ ಪಾಠವನ್ನು ಹೇಳಿಕೊಡುತ್ತದೆ. ಕಾಡಿನ-ನಗರ ಸಂಸ್ಕೃತಿ ಮುಖಾಮುಖಿಗೊಳ್ಳುವ ಸಂದರ್ಭ ಮಹಾಗ್ರಂಥಗಳಲ್ಲಿ ಕೂಡ ಉಲ್ಲೇಖಿತವಾಗಿದೆ. ಆದರೆ ಇಂದು ಪ್ರಕೃತಿ ವಿರುದ್ಧದ ಮಾನವ ನಡೆಯಿಂದ ವಿಕೋಪಗಳು ಸಂಭವಿಸುತ್ತಿವೆ. ಕೇರಳ, ಕೊಡಗಿನಲ್ಲಿ ಉಂಟಾದ ಘಟನೆಗಳು ಅದಕ್ಕೆ ಸಾಕ್ಷಿ. ಹಾಗಾಗಿ ಪ್ರಕೃತಿಯ ರಕ್ಷಣೆಯ ಆವಶ್ಯಕತೆ ಇಂದಿದೆ ಎಂದು ಅವರು ಅಭಿಪ್ರಾಯಿಸಿದರು.

ಐಕ್ಯತೆಯ ಆದರ್ಶ ಇಟ್ಟುಕೊಂಡ ಗಣೇಶೋತ್ಸವ ಈ ಕಾಲಘಟ್ಟದಲ್ಲಿ ರಕ್ಷಣೆಯ ಬೇಲಿಯೊಳಗೆ ಆಚರಿಸುವ ಹಂತಕ್ಕೆ ಬಂದಿರುವುದರ ಬಗ್ಗೆ ಆತ್ಮಾವಲೋಕನದ ಅಗತ್ಯ ಇದೆ ಎಂದ ಅವರು, ನಿಸರ್ಗದತ್ತವಾದ ಮುಕ್ಕೂರಿನ ಸಣ್ಣ ಊರಿನಲ್ಲಿ ಜಾತಿ, ಮತ, ಧರ್ಮ ಮೀರಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರುವುದು ಐಕ್ಯತೆಯ ಆಚರಣೆಗೊಂದು ಉದಾಹರಣೆ ಎಂದು ಅವರು ಹೇಳಿದರು.

Also Read  ಪೌರತ್ವ ಪ್ರತಿಭಟನೆ : ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ಸಮಾರಂಭ ಉದ್ಘಾಟಿಸಿದ ನಿವೃತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ, ಒಗ್ಗಟ್ಟಿನಿಂದ ಗಣೇಶೋತ್ಸವ ಕಾರ್ಯಕ್ರಮ ಆಚರಿಸುವುದರಿಂದ ಫಲ ದೊರೆಯಲು ಸಾಧ್ಯ. ಇಂತಹ ಒಗ್ಗಟ್ಟಿನ ಪ್ರಯತ್ನ ಮುಕ್ಕೂರಿನ ಆಚರಣೆಯಲ್ಲಿ ಇದೆ ಎಂದ ಅವರು, ವಿಘ್ನ ವಿನಾಶಕನ ಆರಾಧನೆಯ ಧಾರ್ಮಿಕ ಮಹತ್ವ ವಿವರಿಸಿದರು.

ಮುಖ್ಯ ಅತಿಥಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಮಾತನಾಡಿ, ಅಸತ್ಯದ ವೈಭವಿಕರಣದ ಮಧ್ಯೆ ಸತ್ಯದ ಹುಡುಕಾಟ ನಡೆಸುವ ಅನಿವಾರ್ಯತೆ ಇರುವ ಕಾಲ ಘಟ್ಟ ಇಂದಿದೆ. ಅಂತಹ ಸಂದರ್ಭ ಸಮಾನತೆ ನೆಲೆಗಟ್ಟಿನಲ್ಲಿ ಸಂಘಟಿತರಾಗಿ ಸತ್ಯ, ಧರ್ಮ, ನ್ಯಾಯದ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಕೊಡುಗೆ ನೀಡುವುದು ಶ್ಲಾಘನೀಯ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಕವಯತ್ರಿ ಅಶ್ವಿನಿ ಕೋಡಿಬಲು ಮಾತನಾಡಿ, ಸರ್ವರು ಜತೆಗೂಡಿ ಸಂಘಟನೆಗೊಂಡು, ಕ್ರೀಡಾಕೂಟ, ಪ್ರತಿಭೆಗಳನ್ನು ಗುರುತಿಸುವ ಮೂಲಕ ಗಣೇಶೋತ್ಸವ ಆಚರಿಸುವುದು ಸಮಾಜಕ್ಕೆ ಮಾದರಿ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಬೆಳಗ್ಗೆ ಕ್ರೀಡಾಕೂಟಕ್ಕೆ ಧಾರ್ಮಿಕ ಮುಂದಾಳು ಸತ್ಯನಾರಾಯಣ ಬಪಾಡಿತ್ತಾಯ ಕಿನ್ನಿಜಾಲು ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.

Also Read  ಬೆಳ್ಳಾರೆ: ದ.ಕ.ಜಿಲ್ಲಾ ಮಟ್ಟದ ಗಿರಿಜನ ಉತ್ಸವ

ಶ್ರಾವ್ಯ ರೈ ಪೂವಾಜೆ ಪ್ರಾರ್ಥಿಸಿದರು. ಸಮಿತಿ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಪ್ರಸ್ತಾವನೆಗೈದು, ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ಕಾನಾವು ವಂದಿಸಿದರು. ಶಿಕ್ಷಕ ಶಶಿಕುಮಾರ್ ಮತ್ತು ರಕ್ಷಿತಾ ಅಡ್ಯತಕಂಡ ನಿರೂಪಿಸಿದರು. ಅನಂತರ ವಿದ್ಯಾರ್ಥಿ ಮತ್ತು ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು.

ಸಮ್ಮಾನ ಸಮಾರಂಭ

ಇದೇ ಸಂದರ್ಭದಲ್ಲಿ ಕ್ರೀಡಾರಂಗದ ಸಾಧಕರಾದ ರಕ್ಷಿತಾ ಕೊಡಂಗೆ, ವೀಕ್ಷಿತಾ ಕೂರೋಡಿ, ಶೈಕ್ಷಣಿಕ ಸಾಧಕರಾದ ಅಕ್ಷಯ್ ಬೀರುಸಾಗು, ನವಜೀತ್ ಜಾಲ್ಪಣೆ ಅವರನ್ನು ದುರ್ಗಾಕುಮಾರ್ ನಾಯರ್‌ಕೆರೆ ಸಮ್ಮಾನಿಸಿದರು. ಕಿರಣ್ ಪ್ರಸಾದ್ ಕುಂಡಡ್ಕ ಸಮ್ಮಾನ ಪತ್ರ ವಾಚಿಸಿದರು. ಸಮ್ಮಾನಿತರ ಪರವಾಗಿ ವೀಕ್ಷಿತಾ ಕೂರೋಡಿ ಅನಿಸಿಕೆ ವ್ಯಕ್ತಪಡಿಸಿದರು.

 

 

 

error: Content is protected !!
Scroll to Top