ಗ್ರಾಮಾಭಿವೃದ್ದಿ ಚಿಂತನೆಯ ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘಕ್ಕೆ 35ರ ಸಂಭ್ರಮ

ಸವಣೂರು: ಗ್ರಾಮಾಭಿವೃದ್ದಿಯ ಚಿಂತನೆಯೊಂದಿಗೆ ಆರಂಭಗೊಂಡ ಪಾಲ್ತಾಡಿಯ ಮಂಜುನಾಥನಗರ ಶ್ರೀಸಿದ್ದಿವಿನಾಯಕ ಸೇವಾ ಸಂಘಕ್ಕೆ ಈಗ ೩೫ರ ಸಂಭ್ರಮ.ಅತೀ ಹಿಂದುಳಿದ ಗ್ರಾಮವಾಗಿದ್ದ ಪಾಲ್ತಾಡಿ ಗ್ರಾಮದ ಸರ್ವತೋಮುಖ ಅಭಿವೃದ್ದಿಗಾಗಿ  ಧಾರ್ಮಿಕ ಸಾಮಾಜಿಕ,ಸಾಂಸ್ಕೃತಿಕ ಕಾರ್ಯಗಳ ಮೂಲಕ ಜನರಿಗೆ ತಿಳುವಳಿಕೆಯನ್ನು ನೀಡಿ ಕರ್ತವ್ಯ ಹಾಗೂ ಬೇಡಿಕೆಗಳ ಕುರಿತು ಹೋರಾಟ ಮಾಡುವ ದೃಷ್ಟಿಯಿಂದ ಊರಿನ ಹಿರಿಯರಾದ ನ್ಯಾಯವಾದಿ ದಿ.ಕುಂಜಾಡಿ ರಘುನಾಥ ರೈ ಅವರ ನೇತೃತ್ವದಲ್ಲಿ 1983ರ ಗಣೇಶ ಚತುರ್ಥಿಯಂದು ಈ ಸೇವಾ ಸಂಘ ಆರಂಭಗೊಂಡಿತು.

ಅಂದು ಇದರ ಸ್ಥಾಪಕಾಧ್ಯಕ್ಷರಾಗಿ ಬಿ.ಕೆ.ರಮೇಶ್ ಹಾಗೂ ಕಾರ್ಯದರ್ಶಿಯಾಗಿ ಪುರಂದರ ಗೌಡ ಆಯ್ಕೆಗೊಂಡರು.ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದ ಪಾಲ್ತಾಡಿ ಗ್ರಾಮದ ಸರ್ವತೋಮುಖ ಬೆಳವಣಿಗೆ ಈ ಸೇವಾ ಸಂಘವು ಕಳೆದ 35ವರ್ಷಗಳಿಂದ ಶ್ರಮಿಸುತ್ತಿದೆ.

ಶಿಕ್ಷಣ ಕ್ಷೇತ್ರ

ಪಾಲ್ತಾಡಿಯಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳಿಲ್ಲದೇ ಇಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬೇರೆಡೆ ತೆರಳಬೇಕಾದ ಸಮಸ್ಯೆಯನ್ನು ಆರಿತ ಸಿದ್ದಿವಿನಾಯಕ ಸೇವಾ ಸಂಘವು ಹೋರಾಟ ನಡೆಸಿ 1989ರಲ್ಲಿ ಇಲ್ಲಿಗೆ ಪ್ರಾಥಮಿಕ ಶಾಲೆಯೊಂದನ್ನು ಮಂಜೂರುಗೊಳಿಸಿತ್ತು.ಅದರಂತೆ ಇಲ್ಲಿನ ಮಂಜುನಾಥನಗರದಲ್ಲಿ ಪ್ರಾಥಮಿಕ ಶಾಲೆಯೊಂದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯ ಮೂಲಕ ಆರಂಭಗೊಂಡಿತ್ತು.

ಈ ರೀತಿಯಲ್ಲಿ ಆರಂಭಗೊಂಡ ಶಾಲೆಗೆ ಅದ್ಯಾಪಕರ ಕೊರತೆ ಕಂಡುಬಂದಾಗ ಸೇವಾ ಸಂಘವು ತಡಮಾಡದೇ ತನ್ನ ಸದಸ್ಯರಲ್ಲಿ ಅರ್ಹರೆನಿಸಿದವರನ್ನು ಗೌರವ ಶಿಕ್ಷಕರನ್ನಾಗಿಯೂ ಮಾಡಿತು.ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ಸೇವಾ ಸಂಘದ ನೇತೃತ್ವದಲ್ಲಿ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಕಲಾನಿಕೇತನ ರಂಗಮಂದಿರವನ್ನು  ಸ್ಥಾಪಿಸುವುದರ ಜತೆಗೆ ಮಕ್ಕಳ ಬೌದ್ಧಿಕ,ಸಾರೀರಿಕ,ಮನೋವಿಕಾಸಕ್ಕೆ ಶಾಲಾ ಆಟದ ಬಯಲನ್ನೂ ವಿಸ್ತರಿಸಲಾಯಿತು.

2007-08ನೇ ಸಾಲಿನಲ್ಲಿ  ಮಂಜುನಾಥನಗರಕ್ಕೆ ಪ್ರೌಢಶಾಲೆಯು ಮಂಜೂರುಗೊಂಡಿದ್ದು,ಫಲಿತಾಂಶ ದಾಖಲೆಯಲ್ಲೂ ಉತ್ತಮ ಸಾಧನೆ ಮಾಡುತ್ತಿದೆ.

Also Read  ಪಾಲ್ತಾಡಿ ಮಂಜುನಾಥನಗರ ;ಶ್ರೀಕೃಷ್ಣ ಜನ್ಮಾಷ್ಟಮಿ

ಮಾತೃಮಂಡಳಿ

ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣದ ಕೊರತೆ ನೀಗಿಸಲು,ನಶಿಸಿ ಹೋಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಹಾಗೂ ಪುನರ್ಜೀವಗೊಳಿಸುವ ಸಲುವಾಗಿ ಕೇಶವ ಶಿಶುಮಂದಿರವನ್ನು ಹಾಗೂ ಇದರಲ್ಲಿ ಕಲಿಯುವ ಮಕ್ಕಳ ವಿಕಾಸದ ಜತೆಗೆ ಮಕ್ಕಳ ತಾಯಂದಿರ ಸಂಘಟನೆಗಾಗಿ  ಆರುಂಧತಿ ಮಾತೃಮಂಡಳಿಯನ್ನೂ ರಚಿಸಲಾಯಿತು.

ಈ ಊರಿನಿಂದ ಬೇರೆ ಬೇರೆ ಕಡೆಗೆ ಹೋಗಿ ವಿದ್ಯಾಭ್ಯಾಸ ಮಾಡುವ ಬಾಲಕ ಬಾಲಕಿಯರಿಗಾಗಿ  ಕಿಶೋರ ಭಾರತಿ ಹಾಗೂ ಬಾಲಗೋಕುಲ ಮೊದಲಾದ ಕಾರ್ಯಗಳನ್ನೂ ಸೇವಾ ಸಂಘದ ವತಿಯಿಂದಲೇ ನಡೆಸಲಾಗಿದೆ.ಮಕ್ಕಳ ಅಭ್ಯಾಸಕ್ಕಾಗಿ ಪರೀಕ್ಷಾನಂತರ ಬೇಸಿಗೆ ಶಿಬಿರ,ರಾಷ್ಟ್ರೀಯ ಹಬ್ಬ,ಧಾರ್ಮಿಕ ಹಬ್ಬಗಳನ್ನು ಆಚರಿಸಿ ಅಂತಹ ವಿಶೇಷ ಕಾರ್ಯಕ್ರಮಗಳಿಗಾಗಿ ಸಂಪನ್ಮೂಲ ವ್ಯಕ್ತಿಗಳನ್ನು  ಕರೆಸಿ ಅವರಿಂದ ತರಬೇತಿಯನ್ನೂ ನೀಡುವ ಕಾರ್ಯವನ್ನೂ ಈ ಸಿದ್ದಿವಿನಾಯಕ ಸೇವಾ ಸಂಘ ಮಾಡುತ್ತಿದೆ.

ಸಾಮಾಜಿಕ ಕ್ಷೇತ್ರ

ಈ ಸೇವಾ ಸಂಘ ಆರಂಭವಾದ ಹಿನ್ನೆಲೆಯಂತೆಯೇ ಗ್ರಾಮದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.ತೀರಾ ಕುಗ್ರಾಮವಾಗಿದ್ದು  ನಾಗರಿಕ ಸೇವಾ ಸೌಲಭ್ಯಗಳಿಂದ ವಂಚಿತವಾಗಿದ್ದ ಹೆಚ್ಚಾಗಿ ಪರಿಶಿಷ್ಟ  ವರ್ಗಕ್ಕೆ ಸೇರಿದವರ ಸಂಖ್ಯೆ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಸರಕಾರದಿಂದ ಪಡೆಯಬಹುದಾದ ಹೆಚ್ಚಿನ ಸೌಲಭ್ಯಗಳನ್ನು ಜನಪರ ಹೋರಾಟದ ಮೂಲಕ ಪಡೆಯುವ ಪ್ರಯತ್ನದ ಫಲವಾಗಿ ಪಡಿತರ ವ್ಯವಸ್ಥೆ,ಗಂಗಾ ಕಲ್ಯಾಣ ಯೋಜನೆ,ಬಡವರಿಗೆ ಬೇರೆ ಬೇರೆ ಯೋಜನೆಗಳಿಂದ ಮನೆ ನಿವೇಶನ,ಕುಡಿಯುವ ನೀರಿನ ವ್ಯವಸ್ಥೆ,ರಸ್ತೆ ದುರಸ್ಥಿ,ಸಾರ್ವಜನಿಕ ಆಸ್ತಿಗಳಿಗೆ ಆವರಗೋಡೆ,ಅಂಚೆ ಕಚೇರಿ,ಉಚಿತ ಕಾನೂನು ನೆರವು ಮಿತಿಯಿಂದ ಕಾನೂನು ಮಾಹಿತಿ,ಪ್ರಾಥಮಿಕ ಆರೋಗ್ಯ ಕೇಂದ್ರ…ಹೀಗೆ ಹತ್ತು ಹಲವು ಯೋಜನೆಗಳು ಸೇವಾ ಸಂಘದ ಮೂಲಕವೇ ಇಲ್ಲಿಗೆ ಬರುವಂತಾಗಿದೆ.

ಊರಿನ ಪ್ರಾಥಮಿಕ ಹಂತದ ಬೇಡಿಕೆಯಾದ ಎರಡು ಭಾಗವಾಗಿದ್ದ ಪಾಲ್ತಾಡಿ ಗ್ರಾಮವನ್ನು ನಾಡೋಳಿಯಲ್ಲಿ ಸೇತುವೆ ನಿರ್ಮಾಣದ ಮೂಲಕ ಒಂದುಗೂಡಿಸಿದ್ದ ಖ್ಯಾತಿ ಈ ಸೇವಾ ಸಂಘಕ್ಕೆ ಸಲ್ಲುತ್ತದೆ.ಈ ಸೇತುವೆ ನಿರ್ಮಾಣಕ್ಕಾಗಿ ಆ ಸಮಯದಲ್ಲಿ ಸೇವಾ ಸಂಘ ಮಾಡಿದ ಹೋರಾಟ ಅವಿಸ್ಮರಣೀಯ.

Also Read  ಕರ್ತವ್ಯದಲ್ಲಿದ್ದ ವೇಳೆ ದಿಢೀರ್ ಅಸ್ವಸ್ಥ ➤ ಕೊಣಾಜೆ ಠಾಣಾ ಹೆಡ್ ಕಾನ್ಸ್ಟೇಬಲ್, ಸವಣೂರು ಮೂಲದ ಜಗನ್ನಾಥ್ ನಿಧನ

ಧಾರ್ಮಿಕ ಕ್ಷೇತ್ರ

ಸಮಾಜದಲ್ಲಿ ಜನತೆಯ ಸಂಘಟನೆ ದೈವೀಕಾರ್ಯದ ಮೂಲಕ ನಡೆಯಬೇಕಾಗುತ್ತದೆ ಎಂಬುದನ್ನು ಮನಗಂಡ ಈ ಸೇವಾ ಸಂಘವು ಸಾರ್ವಜನಿಕ ಗಣೇಶೋತ್ಸವದ ಮೂಲಕ ಸಂಘಟನೆಯನ್ನು ಹುಟ್ಟುಹಾಕಿ ಗ್ರಾಮಾಭಿವೃದ್ದಿ ಮೂಲಕ ಸಂಘಟನೆಯನ್ನು ಬಲಪಡಿಸುತ್ತಾ ಬಂದರು.ಸಾರ್ವಜನಿಕ ಸತ್ಯನಾರಾಯಣ ಪೂಜೆ,ಅಶ್ವತ್ಥ ಪೂಜೆ,ಶಾರದಾ ಪೂಜೆ,ವರಮಹಾಲಕ್ಷ್ಮೀ ಪೂಜೆ,ಕೃಷ್ಣ ಜನ್ಮಾಷ್ಟಮಿ ಹಾಗೂ ಧಾರ್ಮಿಕ ಜಾಗೃತಿಗಾಗಿ ಪ್ರತೀ ಶನಿವಾರ ,ಪ್ರತಿ ತಿಂಗಳ ಸಂಕ್ರಮಣ ಭಜನೆ ನಡೆಸುತ್ತಾ ಗ್ರಾಮಸ್ಥರನ್ನು ಧಾರ್ಮಿಕತೆಯಲ್ಲಿ ಜಾಗೃತಗೊಳಿಸಿದರು.

ಗ್ರಾಮೋತ್ಸವ

ಗ್ರಾಮಾಭಿವೃದ್ದಿ ಚಿಂತನೆಯಲ್ಲಿ ಆರಂಭವಾದ ಈ ಸಂಘದ ಮುಂದಾಳತ್ವದಲ್ಲಿ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಯು ಹಲವಾರು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗ್ರಾಮೋತ್ಸವ ಆಚರಿಸಲಾಗುತ್ತಿದೆ.ಈ ಮೂಲಕ ನಶಿಸಿ ಹೋಗುತ್ತಿರುವ ನಮ್ಮ ಸಂಸ್ಕೃತಿ,ಜಾನಪದ ವೈವಿದ್ಯವನ್ನು  ತೆರೆದಿಡುವ ಪ್ರಯತ್ನ ನಡೆಯುತ್ತಿದೆ.ಈ ಕಾರ್ಯಕ್ರಮದಲ್ಲಿ  ವಿದ್ವಾಂಸರಿಂದ ವಿಚಾರ ಸಂಕೀರ್ಣ,ಬಾಲ ಮೇಳ,ಗ್ರಾಮ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮ ವೈವಿದ್ಯಗಳು ನಡೆಯುತ್ತದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಸಿದ್ದಿವಿನಾಯಕ ಭಜನಾ ಮಂದಿರ ಕೇಂದ್ರವಾಗಿದ್ದು,ಈ ಗ್ರಾಮದವರೇ ಆಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ   ಸಿದ್ದಿವಿನಾಯಕ ಸಭಾಭವನವೂ ನಿರ್ಮಾಣವಾಗಿದೆ.ಗ್ರಾಮದ ಹೆಚ್ಚಿನ ಕಾರ್ಯಕ್ರಮಗಳು ಇದೇ ಸಭಾಭವನದಲ್ಲಿ ನಡೆಯುತ್ತದೆ.ಈ ಬಾರಿ ಸಿದ್ದಿವಿನಾಯಕ ಸೇವಾ ಸಂಘದ ೩೫ನೇ ವರ್ಷಾಚರಣೆಯ ಗಣೇಶೋತ್ಸವ ಆಚರಣೆಯ ಸಂಭ್ರಮದಲ್ಲಿದ್ದು ಪ್ರಸ್ತುತ ಸಂಘದ ಗೌರವಾಧ್ಯಕ್ಷರಾಗಿ ಈಶ್ವರ ಕೆ.ಎಸ್,ಅಧ್ಯಕ್ಷರಾಗಿ ಪ್ರವೀಣ್ ಬಂಬಿಲದೋಳ,ಕಾರ್ಯದರ್ಶಿಯಾಗಿ ಉದಯ ಬಿ.ಆರ್ ಸಂಘವನ್ನು   ಊರವರ ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

Also Read  ►► ಕವರ್ ಸ್ಟೋರಿ ► ಸವಣೂರಿನಿಂದ ಪ್ರತ್ಯೇಕವಾಗಲಿದೆಯೇ ಪಾಲ್ತಾಡಿ ಗ್ರಾಮ..!! ► ಈಡೇರುವುದೇ ಪಾಲ್ತಾಡಿ ಪ್ರತ್ಯೇಕ ಗ್ರಾಮ ಪಂಚಾಯತ್ ನ ಬೇಡಿಕೆ..??

 

error: Content is protected !!
Scroll to Top