(ನ್ಯೂಸ್ ಕಡಬ) newskadaba.com ಕಡಬ, ಮೇ.8. ಜಾತ್ಯಾತೀತ ನೆಲೆಗಟ್ಟಿನಲ್ಲಿ ದೇಶದ ಎಲ್ಲಾ ಪ್ರಜೆಗಳನ್ನು ಸಮಾನತೆಯಿಂದ ನೋಡುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಳಂಕಿತರಿಂದ ತುಂಬಿರುವ ಬಿಜೆಪಿ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಬೆಳ್ತಂಗಡಿಯ ಗಂಗಾಧರ ಗೌಡ ಅವರು ಭವಿಷ್ಯ ನುಡಿದರು.

ಅವರು ಮಂಗಳವಾರ ಕಡಬದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಎಲ್ಲರಿಗೂ ನೆರಳು ಕೊಡುವ ಪಕ್ಷ. ಆದರೆ ಬಿಜೆಪಿ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆದು ಅಕಾರಕ್ಕೇರುವ ನೀಚ ರಾಜಕೀಯವನ್ನು ಮಾಡುತ್ತಿದೆ. ಕೋಮು ಭಾವನೆಯನ್ನು ಕೆರಳಿಸಿ ಅಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿ ದೇಶದ ಐಕ್ಯತೆ, ಸಹಬಾಳ್ವೆ ಹಾಗೂ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಟೀಕಿಸಿದ ಅವರು 10 ವರ್ಷಗಳ ಹಿಂದೆ ಅನಿವಾರ್ಯ ರಾಜಕೀಯ ಕಾರಣಗಳಿಗಾಗಿ ಬಿಜೆಪಿ ಸೇರಿ ಉಸಿರುಗಟ್ಟಿಸುವ ವಾತಾವರಣದಲ್ಲಿದ್ದ ನಾನು ಇದೀಗ ಮತ್ತೆ ಮಾತೃಪಕ್ಷಕ್ಕೆ ಸೇರ್ಪಡೆಯಾಗಿ ನಿರಾಳವಾಗಿದ್ದೇನೆ ಎಂದರು. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಬಡವರಿಗೆ ಅನ್ನ, ವಸತಿ ರಹಿತರಿಗೆ ವಸತಿ, ಮನೆ ಅಡಿಸ್ಥಳದ ಹಕ್ಕುಪತ್ರ ವಿತರಣೆ ಮುಂತಾದ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸನ್ನು ಗೆದ್ದಿದೆ. ಆದರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಜನರಿಗೆ ಅಂಗೈಯಲ್ಲಿ ಆಕಾಶ ತೋರಿಸಿದ್ದು ಬಿಟ್ಟರೆ ಇನ್ನೇನೂ ಮಾಡಿಲ್ಲ. ದೇಶದ ಬೆನ್ನೆಲುಬಾಗಿರುವ ಕೃಷಿಕರಿಗೆ ಯಾವುದೇ ಯೋಜನೆಗಳನ್ನು ಜಾರಿ ಮಾಡದೆ ಅನ್ಯಾಯ ಮಾಡಿರುವ ಕೇಂದ್ರ ಸರಕಾರ ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಹೇರಿಕೆಯ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನೇ ಬಡುಮೇಲು ಮಾಡಿದೆ ಎಂದು ದೂರಿದರು.

ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರಿಂದ ಹಿಡಿದು ಬಹುತೇಕ ಎಲ್ಲಾ ಅಭ್ಯರ್ಥಿಗಳು ಭ್ರಷ್ಟಾಚಾರಿಗಳು ಮತ್ತು ಕಳಂಕಿತರು ಎಂದು ದೂರಿದ ಗಂಗಾಧರ ಗೌಡ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಲಿದೆ. ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ|ರಘು ಅವರು ಸಜ್ಜನ ಹಾಗೂ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದು, ಈ ಬಾರಿ ಅತ್ಯಧಿಕ ಅಂತರದ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಹಾಗೆಯೇ ಬೆಳ್ತಂಗಡಿಯ ಬಿಜೆಪಿ ಅಭ್ಯರ್ಥಿ ಹೀನಾಯ ಸೋಲು ಎದುರಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ಉದ್ಯಮಿ ಎ.ಸಿ.ಜಯರಾಜ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ, ಪ್ರಧಾನ ಕಾರ್ಯದರ್ಶಿಗಳಾದ ಎ.ಸಿ.ಮ್ಯಾಥ್ಯೂ, ಎಚ್.ಕೆ.ಇಲ್ಯಾಸ್ ಹೊಸ್ಮಠ, ಕಾರ್ಯದರ್ಶಿಸೈಮನ್ ಸಿ.ಜೆ., ಪ್ರಮುಖರಾದ ಎಸ್.ಅಬ್ದುಲ್ಖಾದರ್, ಕ್ಸೇವಿಯರ್ ಬೇಬಿ, ಶರೀಫ್ ಎ.ಎಸ್. ಮುಂತಾದವರು ಉಪಸ್ಥಿತರಿದ್ದರು.
