(ನ್ಯೂಸ್ ಕಡಬ) newskadaba.com ಕಡಬ, ಮೇ.7. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು ಸುಳ್ಯದ ಬಂಗಾರ ಎಸ್.ಅಂಗಾರ ಅತ್ಯಧಿಕ ಮತಗಳೊಂದಿಗೆ ವಿಜಯಿಯಾಗಿ ರಾಜ್ಯದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಬಿಜೆಪಿ ಸುಳ್ಯ ಮಂಡಲ ಉಪಾಧ್ಯಕ್ಷೆ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ರಾಜ್ಯ ಕಾರ್ಯದರ್ಶಿ ಪುಲಸ್ತ್ಯಾ ರೈ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಸೋಮವಾರ ಕಡಬ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಸತತ 5 ಬಾರಿ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ಅಜಾತ ಶತ್ರು ಶಾಸಕ ಎಸ್.ಅಂಗಾರ ಸುಧೀರ್ಘ ರಾಜಕೀಯ ಬದುಕಿನಲ್ಲಿ ನಿಷ್ಕಳಂಕ ಚಾರಿತ್ಯ್ರದೊಂದಿಗೆ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸಮಗ್ರ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಇವರಿಗೆ ಕ್ಷೇತ್ರದ ಮಹಿಳಾ ಮತದಾರರು ಬಾರಿ ಸಂಖ್ಯೆಯಲ್ಲಿ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು. ಮಹಿಳೆಯ ಶಕ್ತಿಯ ಬಗ್ಗೆ ಸ್ಪಷ್ಟ ಅರಿವಿದ್ದ ಬಿಜೆಪಿ ದೇಶದ ಮೂರು ಅತ್ಯುನ್ನತ ಹುದ್ದೆಗಳಾದ ಲೋಕಸಭಾ ಸ್ಪೀಕರ್ ವಿದೇಶಾಂಗ ಸಚಿವ ಸ್ಥಾನ ರಕ್ಷಣಾ ಸಚಿವ ಸ್ಥಾನವನ್ನು ಮಹಿಳೆಯರಿಗೆ ನೀಡಿ ಗೌರವವನ್ನು ಸಲ್ಲಿಸಿದೆ. ಒಬ್ಬ ದಲಿತನನ್ನು ರಾಷ್ಟ್ರಪತಿಯನ್ನಾಗಿ ಮಾಡಿ ದಲಿತ ವರ್ಗಕ್ಕೆ ನ್ಯಾಯ ಒದಗಿಸಿದೆ. ಭೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯ ಸಮೃದ್ದ ಯೋಜನೆ, ಮಹಿಳೆಯರು ಹೊಗೆ ತಿಂದು ಅನಾರೋಗ್ಯದಿಂದ ಬಳಲಬಾರದೆಂದು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ಉಜ್ವಲ ಯೋಜನೆ, ಮುಖ್ಯವಾಗಿ ತ್ರಿವಳಿ ತಲಾಖ್ ರದ್ದತಿಯನ್ನು ಮಾಡಿ ಕೋಟ್ಯಾಂತರ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಆಗಿರುವುದನ್ನು ತಪ್ಪಿಸಿರುವ ಹೆಗ್ಗಳಿಕೆ ಕೇಂದ್ರ ಸರಕಾರಕ್ಕೆ ಸಲ್ಲಬೇಕು.
ಇದೀಗ ರಾಷ್ಟ್ರಾದ್ಯಂತ ಮಹಿಳೆಯರು ಬಿಜೆಪಿ ಪರ ಇದ್ದರೆ ವಿಶೇಷವಾಗಿ ಮುಸ್ಲಿಂ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದು ಲಕ್ಷಾಂತರ ಹೆಣ್ಣುಮಕ್ಕಳ ಬಾಳಿಗೆ ಆಶಾಕಿರಣವಾಗಿದೆ. ಯಡಿಯೂರಪ್ಪನವರು ಜಾರಿಗೆ ತಂದ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆಯಿಂದಾಗಿ ಇಂದು ಅನೇಕ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯುವಂತಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ದೇಶಾದ್ಯಂತ ಇತ್ತೀಚೆಗೆ ನಡೆದ ಚುನಾವನೆಯಲ್ಲಿ 22 ರಾಜ್ಯಗಳಲ್ಲಿ ಮಹಿಳೆಯರ ಶಕ್ತಿಯಿಂದಾಗಿ ಭಾಜಪ ಆಡಳಿತ ನಡೆಸುವಂತಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಕೆಟ್ಟ ಆಡಳಿತದಿಂದಾಗಿ ಜನತೆ ರೋಸಿ ಹೋಗಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಈ ಸರಕಾರವನ್ನು ಕಿತ್ತೊಗೆದು ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮಹಿಳೆಯರು ಶಾಸಕ ಅಂಗಾರರವರ ಗೆಲುವಿಗೆ ಶ್ರಮ ವಹಿಸುತ್ತಿದ್ದಾರೆ. ಮನೆ ಮನೆ ಭೇಟಿಯಂತಹ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬಿಜೆಪಿ ಗೆಲುವಿಗೆ ಪಣ ತೊಟ್ಟಿದ್ದಾರೆ ಎಂದು ಹೇಳಿದ ಪುಲಸ್ತ್ಯಾ ರೈ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಹೆಚ್ಚಿನ ಸ್ಥಾನ ನೀಡಿಲ್ಲದಿರುವ ಬಗ್ಗೆ ನಮಗೇನೂ ಇದರಿಂದ ಅಸಮಾಧಾನವಿಲ್ಲ. ಪಕ್ಷದ ಮುಖಂಡರು ಹಾಗೂ ಸಂಘಟನೆಯ ಪ್ರಮುಖರು ಒಳ್ಳೆಯ ನಿರ್ಧಾರಗಳನ್ನು ತೆಗೆದು ಪಕ್ಷದ ಗೆಲುವಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಗುರಿ ಒಂದೇ. ಬಿಜೆಪಿ ಗೆಲ್ಲಬೇಕು, ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಬೇಕು. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಕಡಬ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಶಿಪ್ರಭಾ ಎಂ.ಶೆಟ್ಟಿ, ತಾ.ಪಂ.ಸದಸ್ಯೆ ಪಿ.ವೈ ಕುಸುಮಾ, ಮಹಿಳಾ ಮೋಚರ್ಾದ ಪದಾಧಿಕಾರಿಗಳಾದ ಜಯಶ್ರೀ ರಾಮಚಂದ್ರ, ರುಕ್ಮಿಣಿ ಕುಶಾಲಪ್ಪ, ಸರೋಜಿನಿ ಆಚಾರ್ಯ, ಇಂದಿರಾಕೃಷ್ಣಪ್ಪ, ಲೀಲಾವತಿ ಎ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.