(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.7. ಇದೇ ಬರುವ ಮೇ.10ರಂದು ಸಂಜೆ 6 ಕ್ಕೆ ಸರಿಯಾಗಿ ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ ಎಂದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಇದೀಗ ಅಭ್ಯರ್ಥಿಗಳು ಬಹಿರಂಗವಾಗಿ ಪ್ರಚಾರ ನಡೆಸುತ್ತಿದ್ದು, ಮೇ.10 ರಂದು ಸಂಜೆ 6 ರ ನಂತರ ಕಲಂ 144 ರ ಅನ್ವಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಸಸಿಕಾಂತ್ ಸೆಂಥಿಲ್ ಅವರು ತಿಳಿಸಿದರು. ನಿಷೇಧಾಜ್ಞೆಯು ಚುನಾವಣೆ ಮುಗಿದ 48 ಗಂಟೆಗಳ ವರೆಗೆ ಜಾರಿಯಲ್ಲಿರುವುದು ಎಂದರು.
ಮೇ.10 ರ ಸಂಜೆ 6ರ ಬಳಿಕ ಮನೆ,ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ, ಆದರೆ 5ಕ್ಕಿಂತ ಹೆಚ್ಚು ಮಂದಿ ಹೋಗುವಂತಿಲ್ಲ ಹಾಗು ಮತದಾನದ ದಿನದಂದು ಮತದಾನದ ಕೊನೆಯ 48 ತಾಸುಗಳಲ್ಲಿ ಕ್ಷೇತ್ರದ ಮತದಾರರಲ್ಲದ ನಾಯಕರು, ಕಾರ್ಯಕರ್ತರು ಹಾಗು ಇತರರು ಮತದಾನದ ಕ್ಷೇತ್ರದ ಬಳಿ ಬರದಂತೆ ತಡೆಯಲು ಪೊಲೀಸರು ಹಾಗೂ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸಸಿಕಾಂತ್ ಸೆಂಥಿಲ್ ಅವರು ತಿಳಿಸಿದರು. ಚುನಾವಣೆಯು ಸುಸಜ್ಜಿತವಾಗಿ, ಯಾವುದೇ ಅಹಿತರ ಘಟನೆಗಳು ಸಂಭವಿಸದೆ ನಡೆಯಲು ಎಲ್ಲಾ ವಿಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.