(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.7. ತನಗೆ ಬಿದ್ದು ದೊರೆಕಿದಂತಹಾ 50,000 ರುಪಾಯಿಗಳನ್ನು ಅದರ ವಾರಿಸುದಾರನಿಗೆ ಹಿಂತಿರುಗಿಸುವ ಮೂಲಕ ರಿಕ್ಷಾ ಚಾಲಕನೊಬ್ಬ ಪ್ರಾಮಾಣಿಕತೆ ತೋರಿದ ಘಟನೆಯು ನಿನ್ನೆ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಯಾದ ಪ್ರಶಾಂತ್ ಕುಮಾರ್ ಅವರು ನಿನ್ನೆ ಬೆಳಿಗ್ಗೆ ನಗರದ ಪಂಪ್ ವೆಲ್ ಸರ್ಕಲ್ ಬಳಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಜೇಬಿನಿಂದ ಮೊಬೈಲ್ ತೆಗೆಯುವ ವೇಳೆಗೆ ಜೇಬಿನಲ್ಲಿದ್ದ 50,000ರೂ ಅವರಿಗೆ ತಿಳಿಯದಂತೆ ಕೆಳಗೆ ಬಿದ್ದಿತ್ತು. ಅಲ್ಲಿಂದ ಇನ್ನೊಂದು ಕಡೆಗೆ ತೆರಳಿದ ನಂತರ ಅವರಿಗೆ ತನ್ನ ಜೇಬಿನಲ್ಲಿದ್ದ ಹಣ ಕಳೆದು ಹೋಗಿರುವ ವಿಚಾರವು ತಿಳಿದಿದ್ದು, ತಾನು ಮೊದಲು ಬೈಕ್ ನಿಲ್ಲಿಸಿದ ಸ್ಥಳಕ್ಕೆ ಆಗಮಿಸಿ ಅಲ್ಲಿ ಹಣ ಇರಬಹುದೇ ಎಂದು ಹುಡುಕಾಟ ನಡೆಸಿ ವಿಫಲರಾದರು. ನಂತರ ಕಂಕನಾಡಿ ನಗರ ಪೊಲೀಸರಿಗೆ ಈ ಘಟನೆಯ ಕುರಿತು ದೂರು ನೀಡಿದರು.
ಮಧ್ಯಾಹ್ನದ ವೇಳೆ ರಿಕ್ಷಾ ಚಾಲಕನೊಬ್ಬ ಪೊಲೀಸ್ ಠಾಣೆಗೆ ಕರೆ ಮಾಡಿ ತನ್ನ ಸ್ನೇಹಿತನಾದ ರಿಕ್ಷಾ ಚಾಲಕ, ಅಬ್ದುಲ್ ಲಾಯ ಅವರಿಗೆ ಇಂದು 50,000ರೂ ಬಿದ್ದು ದೊರೆತಿದೆ ಎಂದು ಮಾಹಿತಿ ನೀಡುತ್ತಾನೆ. ವಿಷಯ ತಿಳಿದ ಪೋಲೀಸರು ಪ್ರಶಾಂತ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿ ಠಾಣೆಗೆ ಬರುವಂತೆ ತಿಳಿಸುತ್ತಾರೆ. ಪೋಲೀಸರು ಸಮ್ಮುಖದಲ್ಲಿ ರಿಕ್ಷಾ ಚಾಲಕ ಅಬ್ದುಲ್ ಲಾಯ ಅವರು ಪ್ರಶಾಂತ್ ಅವರಿಗೆ 50,000 ನೀಡಿ ಎಲ್ಲರ ಪ್ರಶಂಶೆಗೆ ಪಾತ್ರರಾದರು.