(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.5. ನಾಲ್ಕು ವರ್ಷಗಳ ಹಿಂದೆ ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ಪತ್ನಿ ಹಾಗು ಆಕೆಯ ಪ್ರಿಯಕರನೇ ದೋಷಿಗಳು ಎಂದು ಮಂಗಳೂರಿನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶಾಲೆ ಮನೆಯ ಅಣ್ಣಯ್ಯ ಗೌಡ ಎಂಬಾತನ್ನು 2014 ಎಪ್ರಿಲ್ 19ರಂದು ರಾತ್ರಿ ವೇಳೆಯಲ್ಲಿ ಕೊಲೆ ಮಾಡಲಾಗಿತ್ತು. ಆರೋಪಿಗಳನ್ನು ಅಣ್ಣಯ್ಯ ಗೌಡ ಅವರ ಪತ್ನಿ ಅಮಿತಾ ಯಾನೆ ದೇವಕಿ (42) ಹಾಗು ಬೆಳ್ತಂಗಡಿಯ ಕಳೆಂಜ ಶಾಖೆಯ ಫಾರೆಸ್ಟರ್ ಆಗಿದ್ದ ಭದ್ರಾವತಿಯ ಸಿದ್ಧಾಪುರ ಥಾಂಡಾ ನಿವಾಸಿ ಟಿ. ರುದ್ರೇಶ (32) ಎಂದು ಗುರುತಿಸಲಾಗಿದೆ. ಅಮಿತಾ ಅವರು ಟಿ. ರುದ್ರೇಶ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು, ಇದೇ ಕೊಲೆಗೆ ಪ್ರಮುಖ ಕಾರಣ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ಮಾರಕಾಸ್ತ್ರಗಳನ್ನು ಬಳಸಿ ಕೊಲೆ ಮಾಡಿದ್ದರು.
ಅಮಿತಾ ಅವರು 2014 ಎ. 19 ರಂದು ತನ್ನ ಪತಿಯ ಜೊತೆ ಮಲಗಿದ್ದ ವೇಳೆ ದುಶ್ಕರ್ಮಿಗಳು ಮನೆಗೆ ಅಕ್ರಮವಾಗಿ ನುಗ್ಗಿ ತನ್ನ ಪತಿಯ ಕೊಲೆ ಮಾಡಿದ್ದಾರೆ ಎಂದು ಸುಳ್ಳು ದೂರು ನೀಡಿದ್ದಳು. ಆದರೆ ಘಟನೆಯ ನೈಜತೆಯು ಪೋಲೀಸರ ತನಿಖೆಯ ವೇಳೆ ತಿಳಿದು ಬಂದಿದೆ. ಇದೇ ಬರುವ ಮೇ.8 ರಂದು ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ತಿಳಿಯಲಿದೆ.