(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.2. ಡಾ. ರಘುವಿನಂತಹ ನಿಷ್ಠಾವಂತ ಕಾರ್ಯಕರ್ತ ಮತ್ತೊಬ್ಬರಿರಲಾರರು. ಸುಳ್ಯದ ಹಾಲಿ ಶಾಸಕ ಎಸ್. ಅಂಗಾರರವರಿಗೆ ರಜೆ ನೀಡಿ ರಘುರಿಗೆ ಜನರ ಸೇವೆಗೈಯಲು ಒಂದು ಅವಕಾಶ ಮಾಡಿಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಮಂಗಳವಾರ ಬೆಳ್ಳಾರೆಯಲ್ಲಿ ಮನವಿ ಮಾಡಿಕೊಂಡರು. ಅವರು ಬೆಳ್ಳಾರೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಮುಖಂಡರಾಗಿದ್ದ ಸಂಕಪ್ಪ ರೈ ಡಾ. ರಘುರವರನ್ನು ಪರಿಚಯ ಮಾಡಿಸಿದ್ದರು. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸುವ ಸಲುವಾಗಿ ನಾನು ಸರಕಾರಿ ಉದ್ಯೋಗಕ್ಕೆ ರಘುರವರಲ್ಲಿ ರಾಜೀನಾಮೆ ಕೊಡಿಸಿದೆ. ಸಮರ್ಥ ಅಭ್ಯರ್ಥಿಯಾಗಿದ್ದರೂ ಈ ಹಿಂದಿನ ಚುನಾವಣೆಗಳಲ್ಲಿ ರಘುರವರು ಸೋಲು ಅನುಭವಿಸಿರಬಹುದು. ಆದರೆ ಈ ಚುನಾವಣೆಯಲ್ಲಿ ಡಾ. ರಘು ಬಹುಮತಗಳಿಂದ ಗೆದ್ದುಬರಲಿದ್ದಾರೆ ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪೆರುವಾಜೆ ಪದವಿ ಕಾಲೇಜು ಸೇರಿದಂತೆ ಸುಳ್ಯ, ಬೆಳ್ಳಾರೆ ಭಾಗದಲ್ಲಿ ಅನೇಕ ಶಾಲಾ ಕಾಲೇಜು, ಸೇತುವೆ, ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ರಘು ಶಾಸಕರಾದಲ್ಲಿ ಅವರೊಂದಿಗೆ ನಾನು ಸಹಕರಿಸುವುದಾಗಿ ಮೊಯ್ಲಿ ಹೇಳಿದರು.
ಖಾತೆಗೆ ಹಣ ಜಮಾವಣೆಯೆಲ್ಲಿ ?
ಅಧಿಕಾರಕ್ಕೆ ಬಂದ ನೂರು ದಿವಸದ ಒಳಗಾಗಿ ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು ಪ್ರತಿಯೊಬ್ಬನ ಬ್ಯಾಂಕ್ ಖಾತೆಗೆ ರೂ. 15 ಲಕ್ಷ ಜಮೆ ಮಾಡಲಾಗುವುದು ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಒಂದು ರೂ. ಕೂಡ ಖಾತೆಗೆ ಜಮೆ ಮಾಡಿಸಿಲ್ಲ. ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಮೋದಿ ನೋಟು ಅಮಾನ್ಯೀಕರಣ ಮಾಡುವ ಮೂಲಕ ಅದೆಷ್ಟೋ ಬಡ ಜನರ ಉದ್ಯೋಗವನ್ನು ಕಸಿದುಕೊಂಡಿದೆ ಎಂದು ಕೇಂದ್ರ ಸರಕಾರವನ್ನು ಮೊಯ್ಲಿ ಟೀಕಿಸಿದರು.
ಯಡ್ಡಿ ರೆಡ್ಡಿ ಸೇರಿ ಬಳ್ಳಾರಿ ಲೂಟಿ
ಯಡಿಯೂರಪ್ಪ ಸರಕಾರದ ಆಡಳಿತಾವಧಿಯಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿಯ ಕಬ್ಬಿಣದ ಅದಿರನ್ನು ಲೂಟಿ ಹೊಡೆದರು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲುರನ್ನು ಅಭ್ಯರ್ಥಿ ಮಾಡುವ ಮೂಲಕ ಚಿತ್ರದುರ್ಗದಲ್ಲಿರುವ ಗ್ರಾನೈಟ್ ಮೇಲೆ ಬಿಜೆಪಿಯವರ ಕಣ್ಣು ಬಿದ್ದಿದೆ. ಆದರೆ ಸಿದ್ದರಾಮಯ್ಯ ಅಲ್ಲಿ ಗೆಲ್ಲುವ ಮೂಲಕ ಲೂಟಿಕೋರರ ಕನಸು ನುಚ್ಚು ನೂರಾಗಲಿದೆ ಎಂದು ವೀರಪ್ಪ ಮೊಯ್ಲಿ ಹೇಳಿದರು. ಕೆಜೆಪಿ ಪಕ್ಷ ಸ್ಥಾಪನೆ ವೇಳೆ ಡಿ.ವಿ. ಸದಾನಂದ ಗೌಡರೇ ಯಡಿಯೂರಪ್ಪ ಸರಕಾರ ಅತ್ಯಂತ ಭ್ರಷ್ಟ ಸರಕಾರವೆಂದು ಬಣ್ಣಿಸಿದ್ದರು. ಇದೀಗ ಬಿಜೆಪಿಯಲ್ಲಿ ಕೆಜೆಪಿಯವರಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿದ್ದು, ಗೊಂದಲದ ವಾತಾವರಣ ಬಿಜೆಪಿಯಲ್ಲಿದೆ ಎಂದರು.
ಒಂದು ಕೋಟಿ ಉದ್ಯೋಗ ಸೃಷ್ಟಿ, 50 ಲಕ್ಷ ಮನೆ ನಿರ್ಮಾಣ
ಮುಂದಿನ ಅವಧಿಯಲ್ಲಿ ಕಾಂಗ್ರೆಸ್ಗೆ ಮತ್ತೆ ಅಧಿಕಾರ ದೊರೆಯಲ್ಲಿದ್ದು ಸುಭದ್ರ ಸರಕಾರ, ಸಾಮಾಜಿಕ ಭದ್ರತೆ ನೀಡಲಿದೆ. ಮುಂದಿನ ಐದು ವರ್ಷದಲ್ಲಿ 50 ಲಕ್ಷ ಮನೆಗಳ ನಿರ್ಮಾಣ, ಒಂದು ಕೋಟಿ ಉದ್ಯೋಗದ ಆಶ್ವಾಸನೆ ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಕೊಟ್ಟ ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸಲಾಗುವುದು. ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ ಪ್ರಚಾರ ನಡೆಸುತ್ತಿದ್ದು ಮತದಾರರು ಅವರ ಮಾತುಗಳಿಗೆ ಮರಳಾಗಲಾರರು ಎಂದು ಮೊಯ್ಲಿ ಹೇಳಿದರು.
ಕಣ್ಣೀರಿಟ್ಟ ಡಾ. ರಘು
ಅತ್ಯಂತ ದುಖಃದಿಂದಲೇ ಮಾತು ಆರಂಭಿಸಿದ ಡಾ. ರಘು, ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿರುವುದೇ ತಪ್ಪಾಯ್ತು ಎಂದೆನಿಸುತ್ತಿದೆ. ಕಳೆದ ಮೂರು ಚುನಾವಣೆಗಳಲ್ಲಿ ಸೋತು ಮುಖ ತೋರಿಸಲು ನಾಚಿಕೆ ಪಡುವಂತಾಗಿದೆ ಎಂದು ಕಣ್ಣೀರಿಟ್ಟರು. ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಕುಟುಂಬ ವರ್ಗದವರು ಹೇಳಿದ್ದಾಗ್ಯೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಮತ್ತು ಪಕ್ಷ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಬಾರಿ ಮತದಾರರು ನನ್ನನ್ನು ಚುನಾಯಿಸಿ, ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡುತ್ತೇನೆಂದರು.
145ಕ್ಕಿಂತ ಹೆಚ್ಚು ಸೀಟು
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 145ಕ್ಕಿಂತ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಂಸದ ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು. ಅನ್ನಭಾಗ್ಯ ಯೋಜನೆ, ರೈತರ ಸಾಲ ಮನ್ನಾ, 3ಶೇ. ಬಡ್ಡಿಯಲ್ಲಿ ಕೃಷಿ ಸಾಲ, ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ. 94 ಸಿ ಯೋಜನೆ ಹೀಗೆ ರಾಜ್ಯ ಸರಕಾರದ ಉತ್ತಮ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು ಮುಂದಿನ ಚುನಾವಣೆಯಲ್ಲಿ ಸಹಕಾರಿಯಾಗಲಿದೆ ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಪೆಟ್ರೋಲ್ ಬೆಲೆ ಗಗನಕ್ಕೇರಿದೆ
ಯುಪಿಎ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ 140 ಡಾಲರ್ ಇತ್ತು. ಆಗ ಕೇಂದ್ರ ಸರಕಾರವು 70 ರೂ.ಗೆ ಪೆಟ್ರೋಲ್ ವಿತರಿಸಿದೆ. ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಗಣನೀಯವಾಗಿ ಕುಸಿದಿದ್ದು 40 ಡಾಲರ್ಗೆ ಇಳಿದಿದೆ. ಆದರೆ ಮೋದಿ ಸರಕಾರ ಪೆಟ್ರೋಲ್ ದರ ಕಡಿಮೆ ಮಾಡದೇ 76 ರೂ. ಗೆ ವಿತರಿಸುತ್ತಿದೆ. ಸಿಲಿಂಡರ್ ಗ್ಯಾಸ್ ಬೆಲೆಯೂ ಗಗನಕ್ಕೇರಿದ್ದು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ. ಕೃಷಿಕರ ಉತ್ಪನ್ನಗಳಾದ ಅಡಿಕೆ, ರಬ್ಬರ್, ಕಾಳುಮೆಣಸು ದರ ಮೋದಿ ಸರಕಾರ ಬಂದ ಬಳಿಕ ಇಳಿಮುಖವಾಗಿದ್ದು, ಕೃಷಿಕರ ಕುರಿತು ಮೋದಿಗೆ ನಿಜವಾದ ಕಾಳಜಿ ಇಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಟೀಕಿಸಿದರು.
ಸದಾನಂದ ಗೌಡರು ಮಾತನಾಡುವುದೇ ಸುಳ್ಳು
ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದ ಗೌಡರಿಗೆ ಆ ವೇಳೆಗಾಗಲೇ ನಾಲ್ಕು ಬಾರಿ ಆಯ್ಕೆಯಾಗಿದ್ದು ಜಿಲ್ಲೆಯ ಹಿರಿಯ ಶಾಸಕರಾಗಿದ್ದ ಅಂಗಾರರನ್ನು ಮಂತ್ರಿಯನ್ನಾಗಿ ಮಾಡಲು ಸಾಧ್ಯವಾಗಿಲ್ಲ. ಇದೀಗ ಸಚಿವ ಸ್ಥಾನದ ಮಾತುಗಳನ್ನಾಡುತ್ತಿದ್ಧಾರೆ. ಸದಾನಂದ ಗೌಡರು ಮಾತನಾಡುವುದೇ ಸುಳ್ಳು. ಇದೀಗ ಜನರಿಗೂ ಅವರ ಸುಳ್ಳು ಭರವಸೆ ಕುರಿತು ಅರ್ಥವಾಗಿದೆ ಎಂದು ಹರೀಶ್ ಕುಮಾರ್ ಹೇಳಿದರು. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ಧ. ಕೆಪಿಸಿಸಿ ಸದಸ್ಯರಾಗಿದ್ದು ಸುಳ್ಯ ಶಾಸಕ ಅಂಗಾರರಗಿಂತ ಹೆಚ್ಚು ಕೆಲಸ ಮಾಡಿರುವ ಡಾ. ಬಿ. ರಘು ಶಾಸಕರಾದರೆ ಸುಳ್ಯ ಅಮೂಲಾಗ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಸಚಿವರಾಗಿ ಸೇವೆ ಸಲ್ಲಿಸಲು ಡಾ. ರಘು ಸಮರ್ಥರು ಎಂದು ಹರೀಶ್ ಬಣ್ಣಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕಣಚೂರು ಮೋನು ಮಾತನಾಡಿದರು. ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳಾದ ಎಂ. ವೆಂಕಪ್ಪ ಗೌಡ, ಭರತ್ ಮುಂಡೋಡಿ, ದ.ಕ. ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಧನಂಜಯ ಅಡ್ಪಂಗಾಯ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಕೆ.ಪಿ.ಸಿ.ಸಿ. ಸದಸ್ಯೆ ರಾಜೀವಿ ಆರ್. ರೈ, ಸುಳ್ಯ ಕಾಂಗ್ರೆಸ್ ಉಸ್ತುವಾರಿ ಸವಿತಾ ರಮೇಶ್ ಗೌಡ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿ.ಕೆ. ಹಮೀದ್, ವಕ್ಪ್ ಮಂಡಳಿ ಸದಸ್ಯ ಸಂಶುದ್ದೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ನೂರುದ್ದೀನ್ ಸಾಲ್ಮರ, ಬೆಳ್ಳಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಳಾ ನಾಗರಾಜ್, ಪೆರುವಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯ, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಕಾಮತ್, ವೇದನಾಥ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಸ್ವಾಗತಿಸಿ, ಸಚಿನ್ರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆ
ಜಾಲ್ಸೂರು ಗ್ರಾಪಂ ಸದಸ್ಯೆ ಗುಲಾಬಿ, ಪಂಜ ಹಾಗೂ ಕೂತ್ಕುಂಜ ಗ್ರಾಮದ ಕೆಲ ಬಿಜೆಪಿ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಸಂಸದ ವೀರಪ್ಪ ಮೊಯ್ಲಿ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪಕ್ಷದ ಧ್ವಜ ನೀಡಿ ಕಾಂಗ್ರೆಸ್ಗೆ ಬರಮಾಡಿಕೊಂಡರು.