ಕೋಡಿಂಬಾಳ ರೈಲ್ವೇ ನಿಲ್ದಾಣ ಎಕ್ಸ್‌ಪ್ರೆಸ್ ರೈಲು ನಿಲುಗಡೆ , ಮೂಲಭೂತ ಸೌಕರ್ಯ ಅಭಿವೃದ್ದಿ ಕನಸು ಮಾತ್ರ

(ನ್ಯೂಸ್ ಕಡಬ) newskadaba.com, ಕಡಬ, ಎ.23.  ಕಡಬ ತಾಲೂಕಿನ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ನಿಲ್ದಾಣ ಅಭಿವೃದ್ದಿಪಡಿಸಬೇಕೆಂದು ಈ ಭಾಗದ ಜನತೆ ಮನವಿ ನೀಡಿ, ಹೋರಾಟ ಮಾಡಿ ಸಂಬಂದಪಟ್ಟವರಿಗೆ ಹಕ್ಕೋತ್ತಾಯ ಮಂಡಿಸಿದರೂ ಯಾವೂದೆ ಪ್ರಯೋಜನವಿಲ್ಲ. ಇಲಾಖಾಧಿಕಾರಿಗಳು ಕಾನೂನು ನೆಪವೊಡ್ಡಿ ರೈಲು ನಿಲುಗಡೆ ಸಾಧ್ಯವಿಲ್ಲ ಎಂದಿದ್ದಾರೆ.
ದಿನನಿತ್ಯ ಕಡಬ ಹಾಗೂ ಸುತ್ತಮುತ್ತಲಿನ ಹೊಸಮಠ, ಬಲ್ಯ, ಕುಟ್ರುಪ್ಪಾಡಿ, ಪದವು, ಕುಂತೂರು, ಪೆರಾಬೆ, ಆಲಂಕಾರು, ನೂಜಿಬಾಳ್ತಿಲ, ಇಚ್ಲಂಪಾಡಿ, ನೆಲ್ಯಾಡಿ, ರೆಂಜಿಲಾಡಿ, ಬಂಟ್ರ, ಮರ್ದಾಳ, ಕೋಡಿಂಬಾಳ, ಕೇಪು ಪ್ರದೇಶಗಳಿಂದ ದಿನನಿತ್ಯ ಮಂಗಳೂರು ಬೆಂಗಳೂರು ಸೇರಿದಂತೆ ನೆರೆಯ ಕೇರಳ ಮೊದಲಾದ ರಾಜ್ಯಗಳಿಗೆ ತೆರಳುವ ಸಾವಿರಾರು ಜನ ಪ್ರಯೋಜನ ಪಡೆಯುವವರಿದ್ದಾರೆ. ಹಾಗಾಗಿ ಈ ನಿಲ್ದಾಣದಲ್ಲಿ ಬೆಂಗಳೂರು ಮಂಗಳೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆಯಾಗಬೇಕು, ನಿಲ್ದಾಣಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಜನತೆಯ ಒತ್ತಾಯ . ಇದೀಗ ಹಲವಾರು ಕಾನೂನಾತ್ಮಕ ಕಾರಣ ನೀಡಿ ಇಲಾಖೆಯಿಂದ ಬೇಡಿಕೆ ಈಡೇರಿಸಲು ಸಾದ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗಾಗಿ ಸ್ಥಳೀಯ ರೈಲು ನಿಲ್ದಾಣ ಅಭಿವೃದ್ದಿ ಹೋರಾಟ ಸಮಿತಿ ನೇತೃತ್ವದಲ್ಲಿ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ವರ್ಷದ ಹಿಂದೆ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು. ಭರವಸೆ ನೀಡಿದ ಇಲಾಖಾಧಿಕಾರಿಗಳು ಮೂರು ತಿಂಗಳೊಳಗೆ ನಿಲ್ದಾಣ ಅಭಿವೃದ್ದಿಪಡಿಸಲಾಗುವುದು ಎಂದರು. ಇದ್ಯಾವೂದು ಕಾರ್ಯಗತವಾಗಿಲ್ಲ. ಇದರೊಂದಿಗೆ 17 ಹೋರಾಟಗಾರರ ಮೇಲೆ ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡರು. ಇದೀಗ ಹೋರಾಟಗಾರರು ಕೋರ್ಟು ಕಛೇರಿ ಅಲೆದಾಡುವಂತಾಗಿದೆ.

ಯಾಕೆ ಅಭಿವೃದ್ದಿಪಡಿಸಲು ಸಾಧ್ಯವಿಲ್ಲ
ನಿಲ್ದಾಣ ಎಫ್ ಕೆಟಗಿರಿಯಡಿಲ್ಲಿದೆ. ಹಾಗಾಗಿ ಇಲಾಖೆಯಿಂದ ಅಭಿವೃದ್ದಿಪಡಿಸಲು ಸಾಧ್ಯವಿಲ್ಲ. ಇಲ್ಲಿ ಲೋಕಲ್ ರೈಲು ನಿಲುಗಡೆಯಿದೆ. ಅದರ ಟಿಕೇಟ್ ಮಾರಟ ಆಧಾರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೊಳಿಸಲಾಗುವುದು. ಐದು ವರ್ಷಕ್ಕೊಮ್ಮೆ ಇಲ್ಲಿನ ಟಿಕೇಟ್ ಮಾರಟ ಸ್ಥಿತಿಗತಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎನ್ನುವ ಉತ್ತರ ದೊರೆತಿದೆ. ಬೇಡಿಕೆ ಈಡೇರಿಸುವಂತೆ ರೈಲು ಪ್ರತಿಭಟನೆ ಬಳಿಕ ಏನು ಕ್ರಮ ಕೈಗೊಳ್ಳಗಾಗಿದೆ ಎಂದು ಮಾಹಿತಿ ಹಕ್ಕಿನಡಿ ಸಾಮಾಜಿಕ ಕಾರ್ಯಕರ್ತ ದಿಲೀಪ್ ಸಂಪಡ್ಕ ಕೇಳಿರುವ ಪ್ರಶ್ನೆಗೆ ಇಲಾಖೆ ಇಂತಹ ಉತ್ತರ ನೀಡಿದೆ. ರೈಲು ಕೆಟಗರಿಯನ್ನು ಬದಲಾಯಿಸುವುದು ಸರಕಾರದ ಮಟ್ಟದಲ್ಲಿ ನಡೆಯಬೇಕಾಗಿದೆ. ಬಳಿಕವಷ್ಟೆ ಅಭಿವೃದ್ದಿ ಸಾಧ್ಯ . ಈ ಬಗ್ಗೆ ಮತ್ತೆ ಹೋರಾಟ ಮುಂದುವರಿಸಲಾಗುವುದು ಎಂದು ರೈಲು ನಿಲ್ದಾಣ ಅಭಿವೃದ್ದಿ ಹೋರಾಟ ಸಮಿತಿ ಸಂಚಾಲಕ ಸಯ್ಯದ್ ಮೀರಾ ಸಾಹೇಬ್ ತಿಳಿಸಿದ್ದಾರೆ.

Also Read  ಸುಳ್ಯ: ಅಣ್ಣನ ಹತ್ಯೆ ಪ್ರಕರಣ..!   ➤ ಬಂಧಿತ ಸಹೋದರರನ್ನು ಕರೆತಂದು ಮಹಜರು

ಮೂಲಭೂತ ಸೌಕರ್ಯವಿಲ್ಲ
ಮೀಟರ್ ಗೇಜ್ ಹಳಿ ಇರುವಾಗ ಇಲ್ಲಿ ಫ್ಲಾಟ್ ಫಾರಂ ಎತ್ತರದಲ್ಲಿತ್ತು, ಬ್ರಾಡ್ಗೇಜ್ ಹಳಿಯಾದಾಗ ಹಳಿ ಎತ್ತರವಾಯಿತು ಫ್ಲಾಟ್ ಫಾರಂ ಹಳಿಗೆ ಸಮಾನಾಂತರವಾಯಿತು. ಇದರಿಂದಾಗಿ ವೃದ್ದರಿಗೆ, ಮಹಿಳೆಯರಿಗೆ, ಮಕ್ಕಳಿಗೆ ರೈಲು ಹತ್ತಿ ಇಳಿಯುವುದು ದುಸ್ತರದ ಸಂಗತಿಯಾಗಿದೆ. ಇಂದಿಗೂ ಕಂಪ್ಯುಟರೈಸ್ಡ್ ಟಿಕೆಟ್ ವ್ಯವಸ್ಥೆ ಇಲ್ಲಿಗೆ ಬರಲೇ ಇಲ್ಲ. ಚಿಕ್ಕದೊಂದು ನಿಲ್ದಾಣದ ಕೊಠಡಿ ಇದ್ದರೂ ಅದರಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯೂ ಸರಿ ಇಲ್ಲ. ಶಿಥಿಲಾವಸ್ಥೆಯಲಲಿರುವ ಈ ಕಟ್ಟಡದಲ್ಲಿ ಸ್ಥಳಾವಕಾಶ ಇಲ್ಲದೆ ಮಳೆಗಾಲದಲ್ಲಿ ಕೊಡೆ ಹಿಡಿದುಕೊಂಡೇ ಕೊಠಡಿ ಹೊರಗಡೆ ರೈಲಿಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ನೀರಿನ ಸಂಪರ್ಕವಿಲ್ಲದೆ ಇಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗಿರುವುದರಿಂದ ಪ್ರಯಾಣಿಕರು ಜನನಿಬಿಡ ಪ್ರದೇಶದಲ್ಲಿ ಬಂದು ಶೌಚ ಮಾಡಬೇಕಾಗಿದೆ. ಕನಿಷ್ಟ ಕುಡಿಯುವ ನೀರೂ ಇಲ್ಲ.

Also Read  ಉಪ್ಪಿನಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳ್ಳತನ

1976-77 ರಲ್ಲಿ ಮಂಗಳೂರು-ಹಾಸನ-ಬೆಂಗಳೂರು ರೈಲ್ವೇ ಹಳಿ ಅಸ್ತಿತ್ವಕ್ಕೆ ಬಂದಿತ್ತು. ಇದಾದ ಎರಡು ಮೂರು ವರ್ಷಗಳಲ್ಲಿ ಕಡಬ ಸಮೀಪದ ಕೋಡಿಂಬಾಳದಲ್ಲಿ ಒಂದು ರೈಲ್ವೇ ನಿಲ್ದಾಣವಾಬೇಕೆಂದು ಅಂದಿನ ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೀರಾ ಸಾಹೇಬ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದನ ದೊರೆಯದೆ ಇದ್ದಾಗ ಹೋರಾಟಕ್ಕೆ ಇಳಿದಿದ್ದರು. ಮೂರು ಬಾರಿ ಹೋರಾಟ ನಡೆಸಿ ಬಳಿಕ ರೈಲ್ವೇ ನಿಲ್ದಾಣಕ್ಕೆ ರಚನೆಗೆ ಹಸಿರು ನಿಶಾನೆ ದೊರೆತಿತ್ತು. ಕಡಬ ಭಾಗದಿಂದ ದೂರದ ಊರಿಗೆ ಹೋಗುವ ಪ್ರಯಾಣಿಕರು, ರೈತರು, ಉದ್ಯಮಿಗಳು ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಲೋಕಲ್ ರೈಲು ಪ್ರಯಣವನ್ನು ಅವಲಂಬಿಸಿದ್ದರು. ರಾತ್ರಿ ನೆಟ್ಟಣ ಸ್ಟೇಷನ್ನಲ್ಲಿ ತಂಗುತ್ತಿದ್ದ ರೈಲು ಬೆಳಿಗ್ಗೆ 7.30 ಗಂಟೆಗೆ ಹೊರಟು, ಪುತ್ತೂರು ಮಂಗಳೂರು ಹೋಗಿ ಮಧ್ಯಾಹ್ನ ಒಂದು ಟ್ರಿಪ್ ಹೊಡೆದು, ಸಂಜೆ ನೆಟ್ಟಣಕ್ಕೆ ಮತ್ತೆ ವಾಪಾಸ್ಸಾಗುತ್ತಿತ್ತು. ಈ ಮಧ್ಯೆ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ರೈಲು ಕೂಡಾ ನಿಲುಗಡೆಯಾಗಿತ್ತು. ಮೀಟರ್ ಗೇಜ್ ಬದಲು ಬ್ರಾಡ್ ಗೇಜ್ಗೆ ಹಳಿ ಪರಿವರ್ತನೆಗೆ ಸರಕಾರ ಆದೇಶ ನೀಡಿದ ಬಳಿಕ ಕಾಮಗಾರಿ ನಿಧಾನಗತಿಯಲ್ಲಿ ಸಾಗಿ ಹತ್ತಾರು ವರ್ಷ ಕೋಡಿಂಬಾಳ ರೈಲ್ವೇ ನಿಲ್ದಾಣ ಅನಾಥವಾಗಿತ್ತು. ಬ್ರಾಡ್ ಗೇಜ್ ಆಗಿ ಪರಿವರ್ತನೆಯಾದರೂ ರೈಲು ಓಡಾಟ ಆರಂಭವಾದರೂ ಕೋಡಿಂಬಾಳದ ರೈಲ್ವೇ ನಿಲ್ದಾಣ ಅಭಿವೃದ್ಧಿ ಆಗಿರಲಿಲ್ಲ. ಎಕ್ಸ್‌ಪ್ರೆಸ್ ರೈಲು ನಿಲುಗಡೆ ಇಲ್ಲ.

error: Content is protected !!
Scroll to Top