ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ದಿನಾಂಕ 13-04-2018 ರಿಂದ 22-04-2018 ರವರೆಗೆ ನಡೆದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಆದಿತ್ಯವಾರ ದಂದು ಸಂಜೆ 4.00ಗಂಟೆಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು.

ಈ ಸಮಾರಂಭದಲ್ಲಿ ವಸಂತ್ ಕುಮಾರ್, ಬೆಳ್ಳಾರೆ ಘಟಕ ಇವರ ನೇತೃತ್ವದಲ್ಲಿ 4 ತುಕಡಿಗಳ ಪಥ ಸಂಚಲನ ನಡೆಯಿತು. ಮೊದಲನೇ ತುಕಡಿಯ ಮುಂದಾಳತ್ವವನ್ನು ಶ್ರೀ ರಮೇಶ್ ಭಂಡಾರಿ, ಎರಡನೇ ತುಕಡಿಯ ಮುಂದಾಳತ್ವವನ್ನು ಶ್ರೀ ಸತೀಶ್.ಕೆ, ಮೂರನೆಯ ತುಕಡಿಯ ಮುಂದಾಳತ್ವವನ್ನು ವಾಣಿಶ್ರೀ ಹಾಗೂ ನಾಲ್ಕನೆಯ ತುಕಡಿಯ ಮುಂದಾಳತ್ವವನ್ನು ತ್ಯಾಗವಲ್ಲಿ ಇವರು ವಹಿಸಿದ್ದರು. ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ಶ್ರೀ ರಮೇಶ್ ರವರು ಸ್ವಾಗತಿಸಿದರು. ಸ್ಟಾಫ್ ಆಫೀಸರ್ ಶ್ರೀಮತಿ ಉಷಾರವರು ಗೃಹರಕ್ಷಕರೊಂದಿಗೆ ಪ್ರತಿಜ್ಞೆ ವಿಧಿ ಸ್ವೀಕಾರ ಮಾಡಿದರು.

ಮುಖ್ಯ ಅತಿಥಿಗಳಾದ ಸನ್ಮಾನ್ಯ ಡಾ: ಬಿ.ಆರ್.ರವಿಕಾಂತೇಗೌಡ, ಐಪಿಎಸ್., ಜಿಲ್ಲಾ ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರು ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಗೃಹರಕ್ಷಕ ದಳವು ಪೊಲೀಸ್ ಇಲಾಖೆಯ ಒಂದು ಭಾಗವಾಗಿದೆ. ಪೊಲೀಸ್ ಇಲಾಖೆಯಲ್ಲಿರುವಂತೆಯೇ ಶಿಸ್ತು, ಸಮವಸ್ತ್ರ ಹಾಗೂ ಕವಾಯತುಗಳು ಗೃಹರಕ್ಷಕರಿಗೂ ಇದೆ. ಪೊಲೀಸ್ ಇಲಾಖೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಗೃಹರಕ್ಷಕರನ್ನು ಬೇರೆ ಎಂದು ಬಾವಿಸಿಲ್ಲ ಹಾಗೂ ಗೃಹರಕ್ಷಕರೂ ಕೂಡ ಸಾರ್ವಜನಿಕ ಸೇವೆಗೆ ಅರ್ಪಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಗೃಹರಕ್ಷಕರು ತಾತ್ಕಾಲಿಕ ಸೇವೆ ಮಾಡುತ್ತಿದ್ದೇವೆ ಎಂದು ನಿಮ್ಮ ಮನಸ್ಸಿನಲ್ಲಿ ಬರಬಾರದು. ಮುಂಬರುವ ಚುನಾವಣೆಯಲ್ಲಿ ಪೊಲೀಸರಂತೆಯೇ ಗೃಹರಕ್ಷಕರಿಗೂ ಚುನಾವಣಾ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಇರುತ್ತದೆ ಹಾಗೂ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುತ್ತೀರೆಂಬ ನಂಬಿಕೆಯಿದೆಎಂದು ನುಡಿದರು.

ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 10 ದಿನಗಳ ತರಬೇತಿ ಮುಗಿದು ಶಿಸ್ತಿನ ಸಿಪಾಯಿಗಳಾದ ಗೃಹರಕ್ಷಕರನ್ನು ನೀಡುತ್ತಿದ್ದೇವೆ. ಖಾಕಿ ಸಮವಸ್ತ್ರ ಧರಿಸಿದಾಗ ನಿಷ್ಕಾಮ ಸೇವಾ ಧ್ಯೇಯ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಲು ಸೂಚಿಸಿದರು ಎಲ್ಲಾ ಗೃಹರಕ್ಷಕರು ಕಾನೂನಿಗೆ ಭಂಗ ತರದಂತೆ ಮುಂಬರುವ ಚುನಾವಣಾ ಹಾಗೂ ಇನ್ನಿತರ ಕರ್ತವ್ಯ ನಿರ್ವಹಿಸಲು ಸೂಚಿಸಿದರು. ಸ್ಟಾಫ್ ಆಫೀಸರ್ ಶ್ರೀಮತಿ ಉಷಾರವರು ವಂದನಾರ್ಪಣೆ ಮಾಡಿದರು. ತರಬೇತಿಯಲ್ಲಿ ಭಾಗವಹಿಸಿದ ಗೃಹರಕ್ಷಕರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.

error: Content is protected !!

Join the Group

Join WhatsApp Group