(ನ್ಯೂಸ್ ಕಡಬ) newskadaba.com, ಸೆ.10: ಕೀವ್: ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಯಾರೋವಾ ಗ್ರಾಮದಲ್ಲಿ ರಷ್ಯಾ ಗ್ಲೈಡ್ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 24 ಜನರು ಮೃತಪಟ್ಟಿದ್ದು, 19 ಜನರು ಗಾಯಗೊಂಡಿದ್ದಾರೆ. ಈ ದಾಳಿಯು ಮಂಗಳವಾರ (ಸೆ. 9) ಬೆಳಗ್ಗೆ 11 ಗಂಟೆಗೆ ಪಿಂಚಣಿ ಸಂಗ್ರಹಿಸಲು ಸಾಲಿನಲ್ಲಿ ನಿಂತಿದ್ದ ಜನರ ಮೇಲೆ ನಡೆದಿದೆ. ಈ ಘಟನೆಯಿಂದಾಗಿ ಪೋಲೆಂಡ್‌ನ ಸೈನ್ಯವು ಹೈ ಅಲರ್ಟ್‌ನಲ್ಲಿದೆ.
ಯಾರೋವಾ ಗ್ರಾಮವು ಯುದ್ಧದ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. ಡೊನೆಟ್ಸ್ಕ್ ಪ್ರಾದೇಶಿಕ ಮುಖ್ಯಸ್ಥ ವಾಡಿಮ್ ಫಿಲಾಶ್ಕಿನ್ ಪ್ರಕಾರ, ಮೃತಪಟ್ಟವರಲ್ಲಿ 23 ಜನರು ವೃದ್ಧರು. ಗ್ರಾಮದ ನಿವಾಸಿ ಹೆನ್ನಾಡಿಯ್ ಟ್ರಶ್ ತಮ್ಮ ಪತ್ನಿಯು ಅತ್ತೆಯ ಪಿಂಚಣಿಗಾಗಿ ಕಾಯುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. “ಈ ದೃಶ್ಯವನ್ನು ವಿವರಿಸಲು ಪದಗಳಿಲ್ಲ” ಎಂದು ಟ್ರಶ್ ಹೇಳಿದ್ದಾರೆ. “ಹಿಂದೆ ದಾಳಿಗಳು ಗ್ರಾಮದ ಹೊರವಲಯದಲ್ಲಿ ನಡೆಯುತ್ತಿದ್ದವು, ಈ ಬಾರಿ ಕೇಂದ್ರದಲ್ಲೇ ಆಯಿತು” ಎಂದು ಅವರು ತಿಳಿಸಿದ್ದಾರೆ.













