(ನ್ಯೂಸ್ ಕಡಬ) newskadaba.com, ಆ.28: ಮುಂದಿನ ಸೀಸನ್ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಹೊಸ ನಾಯಕನ ಹುಡುಕಾಟದಲ್ಲಿದೆ. ಹಾಗಾಗಿ ಕೋಲ್ಕತ್ತಾ ಕೆಎಲ್ ರಾಹುಲ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮಾತುಕತೆ ಮುಂದುವರೆಸಿದೆ ಎಂದು ವರದಿಯಾಗಿದೆ.
ಕಳೆದ ಸೀಸನ್ನಲ್ಲಿ ಅಂಜಿಕ್ಯ ರಹಾನೆ ಮುಂದಾಳತ್ವದಲ್ಲಿ ಕಣಕ್ಕಿಳಿದಿದ್ದ ಕೆಕೆಆರ್ ನಿರೀಕ್ಷಿತವಾದ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಮುಂದಿನ ಐಪಿಎಲ್ ಹರಾಜಿಗೂ ಮುನ್ನ ಕೆಲ ಆಟಗಾರರನ್ನು ತಂಡದಿಂದ ಕೈಬಿಡಲು ತೀರ್ಮಾನಿಸಿದೆ.
ಮುಂದಿನ ಸೀಸನ್ಗೆ ಕೆಕೆಆರ್ ತಂಡಕ್ಕೆ ಉತ್ತಮ ನಾಯಕನ ಅವಶ್ಯಕತೆ ಇದೆ. ಇದರೊಂದಿಗೆ ವಿಕೆಟ್ ಕೀಪರ್ ಬ್ಯಾಟರ್ನ ಅಗತ್ಯವೂ ಇದೆ. ಅಲ್ಲದೇ, ತಂಡಕ್ಕೆ ಅತ್ಯುತ್ತಮ ಆರಂಭಿಕನ ಅವಶ್ಯಕತೆ ಇದೆ. ಕೆಎಲ್ ರಾಹುಲ್ ಅವರನ್ನು ಟ್ರೇಡ್ ಮಾಡಿಕೊಂಡರೆ ಈ ಮೂರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಹಾಗಾಗಿ ಇದೀಗ ಕೆಕೆಆರ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ನೊಂದಿಗೆ ಟ್ರೇಡಿಂಗ್ ಮಾತುಕತೆ ನಡೆಸುತ್ತಿದೆ. ಅಲ್ಲದೇ, ಕೆಎಲ್ ರಾಹುಲ್ ಅವರಿಗಾಗಿ ಕೋಲ್ಕತ್ತಾ ಫ್ರಾಂಚೈಸಿ ಬರೋಬ್ಬರಿ 25 ಕೋಟಿ ರೂ. ವ್ಯಯಿಸಲು ಸಿದ್ದವಾಗಿ ಎಂಬ ಮಾತುಗಳು ಕೇಳಿಬರುತ್ತಿವೆ.














