(ನ್ಯೂಸ್ ಕಡಬ) newskadaba.com, ಆ.27: ಟೀಂ ಇಂಡಿಯಾದ ಲೆಜೆಂಡ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ನಿವೃತ್ತಿ ಘೋಷಿಸಿದ್ದಾರೆ. ಅಶ್ವಿನ್ ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ಗ್ ವಿದಾಯ ಹೇಳಿ ಐಪಿಎಲ್ನಲ್ಲಿ ಮುಂದುವರಿದಿದ್ದರು. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
ಕಳೆದ ಸೀಸನ್ನಲ್ಲಿ ಅಶ್ವಿನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಅವರು 9 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, 186 ಎಸೆತಗಳಲ್ಲಿ 283 ರನ್ ಬಿಟ್ಟು ಕೊಟ್ಟಿದ್ದರು. ಈ ನಡುವೆ 7 ವಿಕೆಟ್ ಕಬಳಿಸುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದರು.
ಇದೀಗ ರವಿಚಂದ್ರನ್ ಅಶ್ವಿನ್ ಅವರು ನಿವೃತ್ತಿ ಘೋಷಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭವಿರುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಇಂದು ಮುಕ್ತಾಯಗೊಳ್ಳುತ್ತದೆ. ಆದರೆ ವಿವಿಧ ಲೀಗ್ಗಳ ಸುತ್ತಲಿನ ಆಟದ ಅನ್ವೇಷಣೆ ಇಂದಿನಿಂದ ಪ್ರಾರಂಭವಾಗುತ್ತದೆ. ಇಲ್ಲಿಯವರೆಗಿನ ಅದ್ಭುತ ನೆನಪುಗಳು ಹಾಗೂ ಸಂಬಂಧಗಳಿಗಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಹಾಗೂ ಮುಖ್ಯವಾಗಿ ಐಪಿಎಲ್, ಬಿಸಿಸಿಐಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
2009ರಲ್ಲಿ ಐಪಿಎಲ್ ಕೆರಿಯರ್ ಆರಂಭಿಸಿದ್ದ ರವಿಚಂದ್ರನ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದರು.
ಅಶ್ವಿನ್ ಅವರು ಐಪಿಎಲ್ನಲ್ಲಿ ಈವರೆಗೆ 221 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 4710 ಎಸೆತಗಳನ್ನು ಎಸೆದಿರುವ ಅವರು ಒಟ್ಟು 187 ವಿಕೆಟ್ ಕಬಳಿಸಿದ್ದಾರೆ. ಅಲ್ಲದೇ, ಬ್ಯಾಟಿಂಗ್ ಮೂಲಕ 833 ರನ್ಗಳನ್ನು ನೀಡಿದ್ದಾರೆ. ಇದೀಗ ಅವರು 17 ವರ್ಷಗಳ ತಮ್ಮ ಸುದೀರ್ಘ ಐಪಿಎಲ್ ಕೆರಿಯರ್ನ್ನು ಅಂತ್ಯಗೊಳಿಸಿದ್ದಾರೆ.














