(ನ್ಯೂಸ್ ಕಡಬ) newskadaba.com, ಆ.23: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುಧಾರಿಯ ಬಂಧನ ಆಗಿರುವುದು ನಿಜ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದರು.
ಮುಸುಕುಧಾರಿ ಈಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಅಧಿಕಾರಿಗಳು ತನಿಖೆ ಮುಂದುವರಿಸುತ್ತಾರೆ. ಎಸ್ಐಟಿಯಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇನೆ. ಇದರ ಹಿಂದೆ ಯಾವ ಜಾಲ ಇದೆ ಎನ್ನುವುದನ್ನು ಪತ್ತೆ ಮಾಡಲಾಗುವುದು ಎಂದರು.
ಎಸ್ಐಟಿ ತನಿಖೆಯ ಮುಕ್ತಾಯ ಆಗುತ್ತಾ ಎಂದು ಹೇಳಲು ಬರುವುದಿಲ್ಲ. ಜೊತೆಗೆ ಬಂಧಿತನಿಗೆ ಮಂಪರು ಪರೀಕ್ಷೆ ಮಾಡಬೇಕೋ ಅಥವಾ ಬೇಡವೋ ಎನ್ನುವುದನ್ನು ಎಸ್ಐಟಿ ತೀರ್ಮಾನ ಮಾಡುತ್ತದೆ. ಅಲ್ಲದೇ ಸುಜಾತ ಭಟ್ ವಿಚಾರ ಕೂಡ ತನಿಖೆಯಲ್ಲಿದೆ. ತನಿಖೆಯ ವರದಿಗಳು ಬರುವವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಆಗುವುದಿಲ್ಲ. ವಿಚಾರ ಬಹಿರಂಗಗೊಂಡರೆ ಎಸ್ಐಟಿ ತನಿಖೆಗೆ ಅಡ್ಡಿಯಾಗುತ್ತದೆ ಎಂದು ತಿಳಿಸಿದರು.












