(ನ್ಯೂಸ್ ಕಡಬ) newskadaba.com, ಆ.17: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆ ಸದನದಲ್ಲಿ ಉತ್ತರ ನೀಡುತ್ತೇನೆ ಎಂದು ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ಸಂಬಂಧ ಯಾರೂ ಕೂಡ ರಾಜಕೀಯ ಮಾಡಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ವಿಚಾರದ ಬಗ್ಗೆ ನಾವು ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಕೂಡ ಹೇಳಿದ್ದಾರೆ. ತನಿಖೆ ನಡೆಯುವ ವೇಳೆ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಧರ್ಮಸ್ಥಳ ಪ್ರಕರಣದ ಬಗ್ಗೆ ಮಧ್ಯಂತರ ವರದಿ ಕೊಡಬೇಕೇ ಅಥವಾ ಸಂಪೂರ್ಣ ತನಿಖೆಯ ನಂತರ ವರದಿ ಕೊಡಬೇಕೆ ಎನ್ನುವುದನ್ನು ಎಸ್ಐಟಿ ಅವರೇ ತೀರ್ಮಾನ ಮಾಡುತ್ತಾರೆ. ಬಿಜೆಪಿಯವರು ರಾಜಕೀಯ ದೃಷ್ಟಿಯಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಲ್ಲಿ ಧಾರ್ಮಿಕ ವಿಚಾರವಾಗಿ ಚರ್ಚೆಯಾಗುತ್ತಿಲ್ಲ. ಬದಲಾಗಿ ಓರ್ವ ವ್ಯಕ್ತಿ ದೂರು ನೀಡಿದಾಗ ತನಿಖೆ ನಡೆಸಲಾಗುತ್ತದೆ. ಅದೇ ರೀತಿ ಎಸ್ಐಟಿ ತನಿಖೆ ಮಾಡುತ್ತಿದೆ. ತನಿಖೆ ಮುಗಿದ ಬಳಿಕ ಸತ್ಯಾಸತ್ಯತೆ ಏನೆಂದು ಹೊರಬರಲಿದೆ ಎಂದು ಹೇಳಿದ್ದಾರೆ.













