(ನ್ಯೂಸ್ ಕಡಬ) newskadaba.com, ಆ.17: ತರುಣ್ ಸುಧೀರ್ ನಿರ್ಮಾಣದ ಏಳುಮಲೆ ಸಿಸಿಮಾದ ಹಾಡುಗಳು ಹಾಗೂ ಟೈಟಲ್ ಟೀಸರ್ ಮೂಲಕ ಈಗಾಗಲೇ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ನಡುವೆ ಚಿತ್ರತಂಡ ಸಿಹಿಸುದ್ದಿ ನೀಡಿದೆ. ಏಳುಮಲೆ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಈ ಸಿನಿಮಾ ಸೆ.5ರಂದು ತೆರೆಕಾಣಲಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ಕರ್ನಾಟಕ–ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಗಿರುವ ಏಳುಮಲೆ ಸಿನಿಮಾದಲ್ಲಿ ನಟಿ ರಕ್ಷಿತಾ ಸಹೋದರ ರಾಣಾ ಕನ್ನಡ ಹುಡುಗ ಹರೀಶ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ಪ್ರಿಯಾಂಕಾ ಆಚಾರ್ ತಮಿಳು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾವು ನೈಜ ಘಟನೆಯನ್ನು ಆಧರಿಸಿದ್ದು, ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿರಲಿದೆ. ಚೌಕ ಹಾಗೂ ಕಾಟೇರ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.















