(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.14. ಬೆಳ್ತಂಗಡಿ ತಾಲೂಕಿನ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜು ಬಳಿ, ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಂದಾಜು ಮೊತ್ತ 1 ಲಕ್ಷ ರೂ. ಮೌಲ್ಯದ ಗಾಂಜಾ ಜಫ್ತು ಮಾಡಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
ಬೆಳ್ತಂಗಡಿಯ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರದಂದು, ಪೊಲೀಸು ಉಪನಿರೀಕ್ಷಕರಾದ ಗಿರೀಶ್ ಕುಮಾರ್ ಎಸ್. ರವರು ತಮ್ಮ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ, ಮಾರುತಿ 800 ಕಾರಿನಲ್ಲಿ ಬಂದ ಆರೋಪಿಗಳು ವಾಹನ ತಪಾಸಣೆ ಮಾಡುತ್ತಿರುವುದನ್ನು ಕಂಡು ಕಾರನ್ನು ತಿರುಗಿಸಿ ಚಲಾಯಿಸತೊಡಗಿದರು. ಇದನ್ನು ಕಂಡು ಅನುಮಾನಗೊಂಡ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿ ನೋಡಿದಾಗ, ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಂದಾಜು ಮೊತ್ತ 1 ಲಕ್ಷ ರೂ. ಮೌಲ್ಯದ, 6.050 ಕಿಲೋ.ಗ್ರಾಂ ತೂಕದ ಮಾದಕ ಗಾಂಜಾ ಇರುವುದನ್ನು ಪತ್ತೆಮಾಡಿ, ಆರೋಪಿಗಳ ವಶದಲ್ಲಿದ್ದ ಗಾಂಜಾವನ್ನು ಪೋಲೀಸರು ಜಫ್ತು ಮಾಡಿದ್ದಾರೆ.
ಆರೋಪಿಗಳಿಂದ ಮಾದಕ ಗಾಂಜಾ, ರೂ 2175 ನಗದು, ಆರೊಪಿಗಳು ಬಳಕೆ ಮಾಡಿದ್ದ ಮಾರುತಿ 800 ಕಾರು ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಪಡಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.