ಕೌಟುಂಬಿಕ ಮೌಲ್ಯ ತುಂಬಲು ದೈವಾರಾಧನೆ ಮೂಲ ಪ್ರೇರಣೆ: ಬಲ್ಯ ರಾಜನ್ ದೈವ ಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಕತ್ತಲ್ ಸಾರ್

(ನ್ಯೂಸ್ ಕಡಬ) newskadaba.com ಕಡಬ, ಎ.13. ತುಳುನಾಡಿನ ದೈವಾರಧನೆ, ನಾಗಾರಾಧನೆ, ದೇವತಾರಾಧನೆ ಕಾರ್ಯಗಳಲ್ಲಿ ಭಕ್ತಿ ಶೃದ್ಧೆಗಳಿಂದ ಭಾಗವಹಿಸುವುದರಿಂದ ಕೌಟುಂಬಿಕ ಮೌಲ್ಯವೃದ್ಧಿಗೆ ಮೂಲ ಪ್ರೇರಣೆಯಾಗುತ್ತದೆ ಎಂದು ತುಳುವ ಬೊಳ್ಳಿ, ರಾಜ್ಯ ಸಂಸ್ಕಾರ ಭಾರತಿ ಲೋಕಕಲಾ ವಿಭಾಗ ಪ್ರಮುಖ ದಯಾನಂದ ಕತ್ತಲ್ ಸಾರ್ ಹೇಳಿದರು.

ಅವರು ಬುಧವಾರ ರಾತ್ರಿ ಬಲ್ಯ-ಪಡ್ನೂರು ಶ್ರೀರಾಜನ್ ದೈವ ಹಾಗೂ ಪರಿವಾರ ದೈವಗಳ ನವೀಕರ, ಪುನರ್ಪ್ರತಿಷ್ಠೆ, ಕಲಶಾಭಿಷೇಕ ಮಹೋತ್ಸವ ಹಾಗೂ ನೇಮೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದರು. ತುಳುನಾಡು ದೈವದೇವರುಗಳ ನೆಲೆವೀಡು, ದೈವ ದೇವರುಗಳಿಗೆ ಕಾಲಕಾಲಕ್ಕೆ ತಂಬಿಲ ಸೇವೆ, ಕೋಲ, ನೇಮ, ಪುಜಾ ವಿಧಿವಿಧಾನಗಳು ಧಾರ್ಮಿಕ ಶ್ರದ್ಧೆಯಿಂದ ನಡೆಯುತ್ತಿರುವುರಿಂದ ಇಲ್ಲಿ ಅನ್ಯಾಯ, ಅನಾಚಾರ, ದುಷ್ಟ ಕಾರ್ಯಗಳು ಇದ್ದರೂ ಯಾವುದೇ ಪೃಕೃತಿ ವಿಕೋಪಗಳು ನಮಗೆ ಸಂಭವಿಸುವುದಿಲ್ಲ, ನಾವು ಕ್ಷೇಮವಾಗಿ ನೆಮ್ಮದಿಯಿಂದ ಬದುಕುತ್ತಿದ್ದೇವೆ, ನಮ್ಮ ಹಿರಿಯರು ಮಾಡಿರುವ ಪುಣ್ಯದ ಕಾರ್ಯಗಳು ನಮ್ಮನ್ನು ರಕ್ಷಿಸುತ್ತಾ ಬಂದಿವೆ, ಆದರೆ ಇಂದು ನಾವು ಮಾಡುವ ದೈವದ ಹಾಗೂ ದೇವರ ಧಾರ್ಮಿಕ ಕಾರ್ಯಗಳನ್ನು ವೈಭವದಿಂದ ಡಂಬಾಚಾರದಿಂದ ನಡೆಯುತ್ತಿದೆ, ಎಲ್ಲವೂ ಹಣಬಲದಿಂದ ಕಾಣಲಾಗುತ್ತಿದೆ. ಇದರಿಂದಾಗಿ ನಮ್ಮ ನಡವಳಿಕೆಗಳು ತೋರ್ಪಡಿಕೆಗೆ ಸೀಮಿತವಾಗುತ್ತಿದೆ. ಕುಟುಂಬ ಸದಸ್ಯರು ದೈವದೇವರ ಕಾರ್ಯಗಳಲ್ಲಿ ನಿಷ್ಠೆಯಿಂದ ಭಾಗವಹಿಸುವುದರಿಂದ ರೋಗ ರುಜಿನಗಳು ದೂರವಾಗುತ್ತದೆ ಎನ್ನುವುದುದಕ್ಕೆ ನಮ್ಮಲ್ಲಿ ಉದಾಹರಣೆಗಳಿವೆ, ನಮ್ಮಲ್ಲಿ ಧರ್ಮ ಮಾರ್ಗದ ಜೀವನ, ಸತ್ಯ ನಿಷ್ಟೆಯ ಬದುಕು ಸಮಾಜದಲ್ಲಿ ಉನ್ನತ ಸ್ಥಾನಮಾನಕ್ಕೆ ಪ್ರೇರಣಯಾಗುತ್ತದೆ ಎಂದು ಕತ್ತಲ್ ಸಾರ್ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಲಂಕಾರು ಬುಡೇರಿಯಾ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಪ್ರಮುಖ ಈಶ್ವರ ಗೌಡ ಪಜ್ಜಡ್ಕ ಮಾತನಾಡಿ ಒಂದು ಕ್ಷೇತ್ರವನ್ನು ಬ್ರಹ್ಮಕಲಶ ಮಾಡುವ ಮಹತ್ಕಾರ್ಯದೊಂದಿಗೆ ಕ್ಷೇತ್ರದ ಸಾನಿಧ್ಯ ವೃದ್ಧಿಗೆ ಊರಿನ ಭಕ್ತರು ಪ್ರಾಂಜಲ ಮನಸ್ಸಿನಿಂದ ನಿರಂತರ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿರಬೇಕು ಎಂದರು. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಚಕ್ರೇಶ್ವರ ಆರಿಗ ಮೂಡಬಿದ್ರೆ ಅತಿಥಿಯಾಗಿ ಮಾತನಾಡಿದರು. ಶ್ರೀರಾಜನ್ ದೈವ ಸೇವಾ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ ಗೌಡ ಪನ್ಯಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಲ್ಯ ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಚಿತ್ತರಂಜನ್ ರೈ ಮಾಣಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೈವಸ್ಥಾನ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ದೇವದಾಸ್ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ರಾಜನ್ ದೈವ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕೊಲ್ಲಿಮಾರು ಕ್ಷೇತ್ರದ ಪರಿಚಯ ಮಾಡಿ ಹಾಗೂ ಸಹಕರಿಸಿದ ಮಹನೀಯರನ್ನು ಸ್ಮರಿಸಿದರು. ಶ್ರೀ ರಾಜನ್ ದೈವ ಸೇವಾ ಸಮಿತಿಯ ಅಧ್ಯಕ್ಷ ರವೀದ್ರ ಆರಿಗ ಪಡ್ನೂರು ಪ್ರಸ್ತಾವನೆಗೈದರು. ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಡಿ.ಬಿ.ಮೋಹನ್ ಗೌಡ ದೇರಾಜೆ ಸ್ವಾಗತಿಸಿದರು. ಸೇವಾ ಸಮಿತಿಯ ಕಾರ್ಯದರ್ಶಿ ಪುರ್ಣೇಶ್ ಗೌಡ ಬಾಬ್ಲುಬೆಟ್ಟು ವಂದಿಸಿದರು. ಶಿಕ್ಷಕ ಶೇಖರ ಗೌಡ ಪನ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group