(ನ್ಯೂಸ್ ಕಡಬ) newskadaba.com, ಆ.06: ಸೆ.9ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಟೀಂ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುಂದುವರಿಸಲಿದ್ದಾರೆ. ಮುಂಬರುವ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದ್ದು, ಹಾಗಾಗಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಅವರನ್ನೇ ಕ್ಯಾಪ್ಟನ್ ಆಗಿ ಮುಂದುವರಿಸಲು ತೀರ್ಮಾನಿಸಲಾಗಿದೆ.
ಇನ್ನು ಶುಭ್ಮನ್ ಗಿಲ್ ಅವರಿಗೆ ಉಪನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆ ಅಕ್ಷರ್ ಪಟೇಲ್ ಅವರು ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ, ಇದೀಗ ಉಪನಾಯಕನನ್ನು ಬದಲಿಸಲು ಬಿಸಿಸಿಐ ಚಿಂತಿಸಿದೆ ಎನ್ನಲಾಗಿದೆ.
ಸೆ.9ರಂದು ಏಷ್ಯಾಕಪ್ನ ಉದ್ಘಾಟನಾ ಪಂದ್ಯ ಅಬುಧಾಬಿಯ ಶೇಖ್ ಝಾಯ್ದ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಒಮಾನ್ ಹಾಗೂ ಹಾಂಗ್ ಕಾಂಗ್ ತಂಡಗಳು ಕಣಕ್ಕಿಳಿಯಲಿವೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಸೆ.10ರಂದು ಆಡಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಯುಎಇ ತಂಡವನ್ನು ಎದುರಿಸಲಿದೆ.
ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯವು ಸೆ.28ರಂದು ನಡೆಯಲಿದ್ದು, ಈ ಪಂದ್ಯ ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.














