ಎಣ್ಮೂರು ಶ್ರೀ ನಾಗಬ್ರಹ್ಮ ಆದಿ ಬೈದೇರುಗಳ ಗರಡಿ

(ನ್ಯೂಸ್ ಕಡಬ) newskadaba.com ಎಣ್ಮೂರು, ಮಾ.29. ಸುಮಾರು 5 ಶತಮಾನಗಳ ಇತಹಾಸವಿರುವ ಎಣ್ಮೂರು ನಾಗಬ್ರಹ್ಮ ಆದಿ ಬೈದ್ಯರುಗಳ ಗರಡಿಯ ನೇಮೋತ್ಸವವು ಪೂರ್ವಪದ್ಧತಿ ಪ್ರಕಾರ ಪ್ರತಿ ವರ್ಷದಂತೆ ಈ ವರ್ಷವು ಸುಗ್ಗಿಯ ಪುವ್ವೆ (ಹೂವೆ) ಯಂದು ತಾ. 30-03-2018 ಶುಕ್ರವಾರದಂದು ನಡೆಯಲಿದೆ.

ಅಜಿಪತ್ತಾಜಿ ಗರಡಿ ಮುಪ್ಪತ್ತ ಮೂಜಿ ತಾವು ಮೇಲಾಯಿ ಗರಡಿ ಎಣ್ಮೂರು ಗರಡಿ (ಆರುವತ್ತಾರು ಗರಡಿ ಮೂವತ್ತ ಮೂರು ಕಡೆ ನೆಲೆ ಊರಿದ ) ಎಂಬ ನುಡಿಗಟ್ಟಿನಂತೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ನೆಲೆಯೂರಿದ ಆದಿ  ಸ್ಥಳ – ಆದಿ ಗರಡಿ ಎಣ್ಮೂರು ಇತಿಹಾಸ ಪ್ರಸಿದ್ಧವಾಗಿದೆ.

ಐತಿಹ್ಯ: ದೇವಂಶ ಸಂಭೂತಳಾದ ತಾಯಿ ದೇಯಿ ಬೈದೆತಿಯು ನಾಟಿ ವೈದ್ಯೆಯಾಗಿದ್ದು ಪಟುಮಲೆ ಪೆರುಮಾಲ್ ಬಲ್ಲಾಳರ ಶೂಶ್ರೂಷೆಗೆಂದು ಬಂದ ಸಂದರ್ಭದಲ್ಲಿ ಬೀಡಿನಲ್ಲಿಯೇ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುತ್ತಾಳೆ. ಕೋಟೇಶ್ವರ ದೇವರ ಹೆಸರನ್ನೇ ಕೋಟಿ ಚೆನ್ನಕೇಶ್ವರ ದೇವರ ಹೆಸರಿನಲ್ಲಿ ಚೆನ್ನಯ ಎಂದು ಮಕ್ಕಳು ಹೆಸರು ಪಡೆಯುತ್ತಾರೆ. ಈ ಮಕ್ಕಳು ಅತಿಮಾನುಷ ಯೋಗದವರಾಗಿದ್ದು ಮುಂದೆ ಕಾರಣಿಕ ಪುರುಷರಾಗುತ್ತಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿಯುತ್ತಾರೆ. ಕೆಲವೇ ದಿನಗಳಲ್ಲಿ ದೇಯಿ ಬೈದೆತಿ ಇಹಲೋಕವನ್ನು ತ್ಯಜಿಸಿದಾಗ ಬಲ್ಲಾಳರ ರಾಜಾಶ್ರಯದಲ್ಲಿ ಬೆಳೆದ ಈ ಮಕ್ಕಳು ವಿದ್ಯಾಪಾರಂಗತರಾಗುತ್ತಾರೆ. ಮಲ್ಲ ಯುದ್ಧದಲ್ಲೂ ಪ್ರವೀಣರಾಗಿ ಖ್ಯಾತಿಯನ್ನು ಪಡೆಯುತ್ತಾರೆ. ಬೆಳೆದು ದೊಡ್ಡವರಾಗಿ ನ್ಯಾಯ ಧರ್ಮಕ್ಕಾಗಿ ಹೋರಾಡಿದ ಈ ಅವಳಿ ವೀರರಿಗೂ ದುಷ್ಟ ಮಂತ್ರಿ ಬುದ್ಯಂತನಿಗೂ ಮುಂದೊಂದು ದಿನ ಜಗಳವಾಗಿ ಬುದ್ಯಂತನು ಕೊಲೆಯಾಗುತ್ತಾನೆ. ಬಲ್ಲಾಳರು ಕೋಟಿ ಚೆನ್ನಯರನ್ನು ಪಡುಮಲೆಯಿಂದ ಗಡಿಪಾರು ಘೋಷಿಸಿದಾಗ ಸತ್ಯಕ್ಕಾಗಿ ಹೋರಾಡುತ್ತೇವೆ ಎಂದು ಸಿಡಿದೆದ್ದು ಕೋಟಿ ಚೆನ್ನಯರು ಶಪಥಮಾಡಿ ಹುಟ್ಟೂರನ್ನು ತೊರೆಯುತ್ತಾರೆ. ಅಲ್ಲಿಂದ ಹೊರಟ ಕೋಟಿ-ಚೆನ್ನಯರು ತಾಯಿಯ ಹರಕೆ ಸಲ್ಲಿಸಲು ತಮ್ಮ ಕುಲ ದೈವ ಕೆಮ್ಮಲಾಜೆ ನಾಗಬ್ರಹ್ಮ ಬಳಿಗೆ ಬಂದಾಗ ಅರ್ಚಕರು ಪೂಜೆ ಮುಗಿಸಿ ಬಾಗಿಲು ಹಾಕಿ ಹೊರಡುತ್ತಾರೆ. ಪುನಃ ಬಾಗಿಲು ತೆಗೆಯಲು ಅರ್ಚಕರು ನಿರಾಕರಿಸುತ್ತಾರೆ. ಕೋಟಿ ಚೆನ್ನಯರು ತಮ್ಮ ಕುಲದೈವವನ್ನು ಮೊರೆಯಿಟ್ಟಾಗ ಗುಂಡದ ಬಾಗಿಲು ತೆರೆಯುತ್ತದೆ. ಗಂಟೆಯ ನಿನಾದ ಕೇಳಿ ಬರುತ್ತದೆ. ಅಂದಿನಿಂದ ಕೋಟಿ ಚೆನ್ನಯರು ಕಾರಣಿಕೆ ಪುರುಷರೆಂದು ತಿಳಿದು ಬರುತ್ತದೆ. ನಾಗಬ್ರಹ್ಮನ ಅನುಗ್ರಹ ಪಡೆದ ಕೋಡಿ ಚೆನ್ನಯರು ಅಕ್ಕ ಕಿನ್ನಿದಾರುವನ್ನು ನೋಡಲು ದೋಳ ಎಂಬಲ್ಲಿಗೆ ಬಂದು ಅಕ್ಕನ ಆತಿಧ್ಯ ಪಡೆಯುತ್ತಾರೆ. ಅಲ್ಲಿಂದ ಅವರ ಬಾವ ಪೈಯ್ಯ ಬೈದನ ತಮ್ಮ ಚಂದುಗುಡಿ ಸೇನಾಧಿಪತಿಯಾಗಿರುವ ಪಂಜ ಕೇಮರ ಬಲ್ಲಾಳರ ಆಶ್ರಯಕ್ಕಾಗೆ ಹೋಗುತ್ತಾರೆ. ಆದರೆ ಚಂದುಗುಡಿಯ ಕುತಂತ್ರದಿಂದ ಕೇಮರ ಬಲ್ಲಾಳರು ಕೋಟಿ ಚೆನ್ನಯರನ್ನು ಸೆರೆಮನೆಗೆ ತಳ್ಳುತ್ತಾರೆ. ಖಿತ್ಪಿಭ್ರಹ್ಮನ ಕೃಪೆಯಿಂದ ಸೆರೆಮನೆಯ ಬಾಗಿಲು ತೆರೆದು ಅಲ್ಲಿಯೂ ಪಾರಾಗಿ ಮುಂದೆ ಧರ್ಮಾತ್ಮನೂ ಸತ್ಯವಂತನೂ ಆದ ಎಣ್ಮೂರು ದೇವಣ್ಣ ಬಲ್ಲಾಳರ ಆಶ್ರಯ ಪಡೆಯುತ್ತಾರೆ. ಕೋಟಿ ಸೇನಾಧಿಯಾಗುತ್ತಾನೆ. ಬಲ್ಲಾಳರು ಕೋಟಿ ಚೆನ್ನಯರಿಗೆ ಎಣ್ಮೂರಿನ ಐಯ್ಯನ್ನೂರು (ಐವತ್ತೊಕ್ಲು) – ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡು ಬ್ರಹ್ಮ ಕಲಶೋತ್ಸವ ಆದ ನಿಡ್ವಳ ಶ್ರೀ ಮಹಾವಿಷ್ಣು ದೇವರು ಕೋಟಿ ಚೆನ್ನಯರು ಆರಾಧಿಸುತ್ತಿದ್ದ ದೇವರಾಗಿದ್ದರು. ಹಾಗೂ ಗುತ್ತು ಎಂಬ ಭೂಮಿಗಳನ್ನು ಉಂಬಳಿ ನೀಡುತ್ತಾರೆ. ಎಣ್ಮೂರು ಬಲ್ಲಾಳರಿಗೂ ಪಂಜ ಕೇಮರ ಬಲ್ಲಾಳರಿಗೂ ಯುದ್ಧ ನಡೆಯುತ್ತದೆ. ಧರ್ಮ ಯುದ್ಧದಲ್ಲಿ ಕೋಟಿ ಚೆನ್ನಯರು ಎಣ್ಮೂರು ಬಲ್ಲಾಳರಿಗೆ ಜಯವನ್ನು ತಂದು ಕೊಡುತ್ತಾರೆ. ಆದರೆ ವೈರಿಗಳ ಕುತಂತ್ರದಿಂದ ಸಾಕಿದ ಪೆರುಮಾಳ ಬಲ್ಲಾಳರೇ ಹಿಂದಿನಿಂದ ಕೋಟಿಯ ಬೆನ್ನಿಗೆ ಬಾಣ ಬಿಟ್ಟು ಕೊಲ್ಲುತ್ತಾರೆ. ಕೋಟಿಯು ತನ್ನ ಪ್ರಾಣ ತ್ಯಾಗ ಮಾಡುವಾಗ ಮೂವರೂ ಬಲ್ಲಾಳರನ್ನು ಕರೆದು ನೀವು ಒಗ್ಗಟ್ಟಾಗಿರಬೇಕು ತುಳುನಾಡಿನ ಕೀರ್ತಿಯನ್ನು ಬೆಳಗಬೇಕು ಎಂದು ಅಭಯನೀಡಿ ಕೊನೆಯುಸಿರೆಳೆಯುತ್ತಾನೆ. ಅಣ್ಣನ ಅಗಲಿಕೆಯನ್ನು ಸಹಿಸದ ಚೆನ್ನಯನು ಪ್ರಾಣಾರ್ಪಣೆ ಮಾಡುತ್ತಾನೆ. ದೇವಣ್ಣ ಬಲ್ಲಾಳರು ಕೋಟಿ ಚೆನ್ನಯರ ಅಂತ್ಯ ಸಂಸ್ಕಾರವನ್ನು ರಾಜ ಮರ್ಯಾದೆಯಲ್ಲಿ ನೆರವೇರಿಸುರತ್ತಾರೆ. ಪ್ರತೀತಿಯಂತೆ ಮುಂದೊಂದು ದಿನ ಬಲ್ಲಾಳರಿಗೆ ಸ್ವಪ್ನವೊಂದು ಬೀಳುತ್ತದೆ. ಸ್ವಪ್ನದಲ್ಲಿ ಕೋಟಿಚೆನ್ನಯರು “ ಓ ಬಲ್ಲಾಳರೆ ನಾವು ಕೋಟಿಚೆನ್ನಯರು, ನಾವು ನಿಮ್ಮ ಏಳುಕೈ ಕೊಪ್ಪರಿಗೆಯ ಹಾಲು ಕುಡಿದವರು, ನಾವು ಕಾಯ ಬಿಟ್ಟು, ಮಾಯ ಸೇರಿದ್ದೇವೆ. ಇನ್ನು ಮುಂದೆ ನಾವು ಎಣ್ಮೂರಿನಲ್ಲಿ ಬೈದೇರುಗಳಾಗಿ ಕಾರಣಿಕ ಪುರುಷರಾಗೆ ನೆಲೆನಿಲ್ಲುತೇವೆ. ಬಲ್ಲಾಳರೆ ನಮಗೆ ಗರಡಿ ಕಟ್ಟಿಸಿ, ಚಪ್ಪರ ಕೋಂಬು ಮಾಡಿಸಿ, ರಾಮ ಲಕ್ಷ್ಮಣ ಸುರಿಯ (ಖಡ್ಗ) ಮಾಡಿಸಿ, ಎಣ್ಮೂರು ಬೀಡಿನ ಉಳ್ಳಕ್ಕುಳ ಸ್ಥಾನದಿಂದ ಭಂಡಾರ ತೆಗೆಸಿ ಪ್ರತಿ ವರ್ಷ ಸುಗ್ಗಿ ತಿಂಗಳ ಪುವೆಯಂದು ನೇಮ ನಡಾವಳಿಗಳನ್ನು ನಡೆಸಬೇಕು. ಪ್ರಾತಃಕಾಲ ಬೀಡಿನಲ್ಲಿ ಹಾಲು ಕೊಡಬೇಕು ಎಂದು ನುಡಿದು ಅಂತರ್ದಾನರಾಗುತ್ತಾರೆ. ಎಣ್ಮೂರು ಬಲ್ಲಾಳರು ಅಸ್ಥಾನ ಜ್ಯೋತಿಷ್ಯರ ಮೂಲಕ ಚಿಂತಿಸಿ ಕೋಟಿಚೆನ್ನಯರಿಗೆ ಗೋರಿಕಟ್ಟಿಸಿ ಗೋರಿಯ ಪಕ್ಕದಲ್ಲೇ ಗರಡಿ ಕಟ್ಟಿಸುತ್ತಾರೆ. ಅಂದಿನಿಂದ ನೇಮ ನಡಾವಳಿಯನ್ನು ನಡೆಸಿಕೊಂಡು ಬರುತ್ತದ್ದರು.

Also Read  ಕೊವೀಡ್ ಗೆ ಪತ್ರಕರ್ತ ಪವನ್ ಹೆತ್ತೂರು ನಿಧನ

ನೇಮೋತ್ಸವ: ಬಲ್ಲಾಳರ ವಂಶ ನಿಸಂತತಿಗೊಂಡಾಗ ಬಲ್ಲಾಳರು ಕಟ್ಟ ಕುಟುಂಬದವರಿಗೆ ಎಣ್ಮೂರು ಊರಿನ ಸರ್ವಾಧಿಕಾರವನ್ನು ನೀಡಿ ಸಕಲ ಆಡಳಿತವನ್ನು ಹಸ್ತಾಂತರಿಸುತ್ತಾರೆ. ಹೀಗೆ ಶತಮಾನಗಳಿಂದ ಕಟ್ಟಬೀಡು ಮನೆತನದವರ ಆಡಳಿತದಲ್ಲಿ ಬೈದೇರುಗಳ ನೇಮೋತ್ಸವವು ನಡೆಯುತ್ತಾ ಬಂದಿದೆ. ಪ್ರಕೃತ ಎಣ್ಮೂರು ಕಟ್ಟ ಹಿರಿಯರಾದ ಶ್ರೀ ರಾಮಕೃಷ್ಣ ಶೆಟ್ಟಿಯರು ಅನುವಂಶಿಕ ಆಡಳಿತದಾರರಾಗಿದ್ದಾರೆ.

Also Read  ರಾಮಕುಂಜ: ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ ಉದ್ಘಾಟನೆ

ಈ ಹಿಂದೆ 32 ವರ್ಷಗಳ ಸುದೀರ್ಘ ಆಡಳಿತವನ್ನು ನಡೆಸಿದ ಕಟ್ಟ ಲಕ್ಷ್ಮೀ ನಾರಾಯಣ ರೈ ಯವರ ಆಡಳಿತಾವಧಿಯಲ್ಲಿ ನೂತನ ಗರಡಿ ನಿರ್ಮಾಣಗೊಂಡು ಬ್ರಹ್ಮ ಕಲಶವಾಗಿ ಮುಂದೆ ಕೋಟಿಚೆನ್ನಯರು ಆರಾಧಿಸುತ್ತಿದ್ದ ಶ್ರೀ ಮಹಾವಿಷ್ನು ದೇವಸ್ಥಾನದ ಜೀಣೋದ್ಧಾರದ ಕೆಲಸವೂ ಆರಂಭವಾಗಿತ್ತು. ಪ್ರಕೃತ ಶ್ರೀ ಕೆ. ರಾಮಕೃಷ್ಣ ಶೆಟ್ಟಿ ಶ್ರೀ ಕೋಟಿ ಚೆನ್ನಯರ ಗರಡಿಯ ಆಡಳಿತವನ್ನು ವಹಿಸಿಕೊಂಡ ಬಳಿಕ ನೇಮೋತ್ಸವನ್ನು ಬಹಳ ವಿಜೃಂಭಣೆಯಿಂದ ಮತ್ತು ನೇಮೋತ್ಸವ ದಿನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಾಧಕರಿಗೆ ವ್ಯಕ್ತಿಗಳಿಗೆ ಸನ್ಮಾನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮೊದಲಾದ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ. ಅಲ್ಲದೆ ಶ್ರೀ ಕೋಟಿ ಚೆನ್ನಯರು ಆರಾಧಿಸುತ್ತಿದ್ದ ಶ್ರೀ ಮಹಾವಿಷ್ಣು ದೇವಸ್ಥಾನ ನಿಡ್ವಾಳ, ಎಣ್ಮೂರು ಐವತ್ತೊಕ್ಲು ಇದರ ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಊರವರ ಸಹಕಾರದೊಂದಿಗೆ ಕೋಟಿ ಚೆನ್ನಯರು ಗರಡಿಯ ಅಧಿಕಾರ ವಹಿಸಿಕೊಂಡ ಬಳಿಕ ಒಂದೇ ವರ್ಷದೊಳಗೆ ಶ್ರೀ ಮಹಾವಿಷ್ಣು ದೇವರ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಿದ ಸಾಧನಶೀಲ ವ್ಯಕ್ತಿಯಾಗಿದ್ದಾರೆ.ಊರಿನ ಗ್ರಾಮ ದೈವದ ವರ್ಷಾವಧಿ ನೇಮ ನಡವಳಿಗಳೂ ಶ್ರೀಯುತ ರಾಮಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ನಡೆಯುತ್ತದೆ.

ಕ್ಷೇತ್ರ ವಿಶೇಷತೆ:

1). ಎಣ್ಮೂರು ಮೂಲ ಅದಿಗರಡಿಯ ಪಕ್ಕದಲ್ಲೇ ಕೋಟಿಚೆನ್ನಯರ ಅವಳಿ ಗೋರಿ ಇದೆ. ಸುಮಾರು ಏಳು ಅಡಿ ಚೌಕದ ಹದಿನೈದು ಅಡಿ ಎತ್ತರವಿರುವ ಗೋವುಕಾಕೃತಿಯ ರೂಪದಲ್ಲಿ ಇರುವ ಈ ಸಮಾಧಿಯ ಪಕ್ಕದಲ್ಲೇ ಅವರ ಆಯುಧಗಳನ್ನು ಮಣ್ಣಿನ ಅಡಿಯಲ್ಲಿ ಇಡಲಾಗಿದೆ. ಸದ್ರಿ ಹುತ್ತದಲ್ಲಿ ವಾಸ್ತವ್ಯ ನಾಗ ಸದಾ ಇದೆ.
2). ಅಣ್ಣ- ತಮ್ಮಂದಿರ ಕಳೇಬರವನ್ನು ಇಟ್ಟಿದ್ದ ಮಂಜಲ್ ಪಾದೆ.
3). ಎಣ್ಮೂರು – ಪಂಜ ವಿವಾದಿತ ಗಡಿಕಲ್ಲು
4). ಕೆಮ್ಮ್ಮಲೆಯ ನಾಗಬ್ರಹ್ಮ ಗುಡಿ
5). ಹತ್ತಿರದ ಎಡಮಂಗಲ ಗ್ರಾಮ ದೋಲ ಎಂಬಲ್ಲಿ ಶತಮಾನಗಳ ಹಿಂದಿನ ಪುರಾತನ ಮುಳಿಹುಲ್ಲಿನ ಮನೆ ಈಗಲೂ ಇದ್ದು. ಅಲ್ಲಿ ಕೋಟಿಚೆನ್ನಯರು ಕುಳಿತು ಹಾಲುಕುಡಿದ ತೂಗು ಉಯ್ಯಾಲೆ ಇವುಗಳನ್ನು ಈಗಲೂ ಎಣ್ಮೂರು ಪರಿಸರದಲ್ಲಿ ಕಾಣಬಹುದು.

Also Read  ಉಡುಪಿ ನೂತನ ಎಸ್ಪಿಯಾಗಿ ಅಕ್ಷಯ್ ಮಚ್ಚೀಂದ್ರ

 

error: Content is protected !!
Scroll to Top