(ನ್ಯೂಸ್ ಕಡಬ) newskadaba.com ಕಡಬ, ಮಾ.28. ಹಿಂದಿನ ಕಾಲದಲ್ಲಿ ದೇವರನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸು, ಯಾಗ ಯಜ್ಞಾದಿಗಳನ್ನು ಮಾಡಬೇಕಿತ್ತು. ಆದರೆ ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಸಂಕೀರ್ತನೆ ಸುಲಭಮಾರ್ಗ. ಅದರಲ್ಲಿಯೂ ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿಯಾಗಲು ಸಾಧ್ಯ ಎಂದು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 57ನೇ ವರ್ಷದ ಏಕಾಹ ಭಜನೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಭಜನೆ ಎಂಬುದು ದೇವರನ್ನು ಸಂತೃಪ್ತಿ ಪಡಿಸಲು ಇರುವ ಅತ್ಯಂತ ಸುಲಭದ ಮಾರ್ಗ. ಅದರಲ್ಲಿಯೂ ದಾಸರ ಪದಗಳನ್ನು ಹಾಡಿ ದೇವರನ್ನು ಸ್ತುತಿಸಿದರೆ ಅದಕ್ಕೆ ಹೆಚ್ಚಿನ ಮಹತ್ವವಿದೆ. ಸೂರ್ಯೊದಯ ಮತ್ತು ಸೂರ್ಯಾಸ್ತದ ವೇಳೆ ದೇವರ ನಾಮ ಹಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಹಿಂದೆ ಪ್ರತಿ ಮನೆಗಳಲ್ಲಿ ಸಂಜೆಯ ವೇಳೆ ಮನೆಯ ಎಲ್ಲರೂ ಸೇರಿ ದೇವರ ಭಜನೆ ಹಾಡುಗಳನ್ನು ಹಾಡುವ ಸಂಪ್ರದಾಯವಿತ್ತು. ಆದರೆ ಇಂದಿನ ಆಧುನಿಕತೆಯ ಭರಾಟೆಯಲ್ಲಿ ಅದು ನಶಿಸಿಹೋಗುತ್ತಿರುವುದು ವಿಷಾದನೀಯ. ಈ ರೀತಿಯ ಸತ್ಸಂಪ್ರದಾಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಹೆತ್ತವರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಏಕಾಹ ಭಜನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಪೆಲತ್ತೋಡಿ, ಕಾರ್ಯದರ್ಶಿ ಧರಣೇಂದ್ರ ಜೈನ್ ಬೆದ್ರಾಜೆ, ಕೋಶಾಧಿಕಾರಿ ನೀಲಾವತಿ ಶಿವರಾಂ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಶಾಲಿನಿ ಸತೀಶ್ ನಾೖಕ್, ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್ ಕಡಬ, ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಶ್ರೀಕಂಠಸ್ವಾಮಿ ಶ್ರೀಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಅಲುಂಗೂರು, ಕಾರ್ಯದರ್ಶಿ ಮೋಹನದಾಸ್ ಮೂರಾಜೆ , ಕಡಬ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಸುಂದರ ಗೌಡ ಮಂಡೆಕರ ಮೊದಲಾದವರು ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಸ್ವಾಗತಿಸಿ, ದಯಾನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.