ಆಟಿ ತಿಂಗಳು ಎಂದರೆ ತುಳುನಾಡಿನ ಜನಜೀವನದಲ್ಲಿ ವಿಶೇಷವಾದ ಕಾಲ. ಹಿಂದೆ ನಿರಂತರ ಮಳೆ, ಕೃಷಿ ಚಟುವಟಿಕೆಗಳಲ್ಲಿನ ಅಡಚಣೆ, ಆಹಾರದ ಲಭ್ಯತೆಯ ಕೊರತೆ ಹಾಗೂ ವಿವಿಧ ಸಾಂಕ್ರಾಮಿಕ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳ ಸಾಧ್ಯತೆ ಈ ಅವಧಿಯನ್ನು ಕಷ್ಟಕರವಾಗಿಸುತ್ತಿದ್ದವು. ಹೀಗಾಗಿ ಈ ಕಾಲಕ್ಕೆ ತಕ್ಕ ಆಹಾರ ಮತ್ತು ಆರೋಗ್ಯ ಪದ್ಧತಿಗಳು ತಲೆಮಾರುಗಳಿಂದ ರೂಪುಗೊಂಡವು. ಸಂಶೋಧನೆಗಳೂ ದಕ್ಷಿಣ ಕನ್ನಡ ಸೇರಿದಂತೆ ದಕ್ಷಿಣ-ಪಶ್ಚಿಮ ಭಾರತದ ಪ್ರದೇಶಗಳಲ್ಲಿ ಋತುಮಾನಕ್ಕೆ ಅನುಗುಣವಾದ ಸಸ್ಯಾಧಾರಿತ ಆಹಾರ ಮತ್ತು ಔಷಧೀಯ ಪದ್ಧತಿಗಳು ಜನಪದ ಜ್ಞಾನದಲ್ಲಿ ಪ್ರಮುಖ ಸ್ಥಾನ ಪಡೆದಿದ್ದವು ಎಂದು ದಾಖಲಿಸಿವೆ.
ಕಹಿಯಾದ ಕಷಾಯದ ಹಿಂದೆ ಏನಿದೆ?
ಆಟಿ ಅಮಾವಾಸ್ಯೆಯಂದು ಸೇವಿಸುವ ಸಾಂಪ್ರದಾಯಿಕ ಆಟಿ ಕಷಾಯದಲ್ಲಿ ಪ್ರಮುಖವಾಗಿ *ಪಾಲೆ ಮರ ಅಥವಾ ಸಪ್ತಪರ್ಣ (Alstonia scholaris)*ದ ತೊಗಟೆಯನ್ನು ಬಳಸುವ ಪದ್ಧತಿ ಕರಾವಳಿ ಕರ್ನಾಟಕದಲ್ಲಿ ಕಂಡುಬರುತ್ತದೆ. ಕೆಲವು ಪ್ರದೇಶಗಳಲ್ಲಿ ಇದರೊಂದಿಗೆ ಕಾಳುಮೆಣಸು, ಶುಂಠಿ, ಓಮ ಅಥವಾ ಇತರ ಸ್ಥಳೀಯ ಮಸಾಲೆಗಳನ್ನು ಸೇರಿಸುವ ಪದ್ಧತಿಯೂ ಇದೆ. ತಯಾರಿಕೆಯ ವಿಧಾನ ಮತ್ತು ಪದಾರ್ಥಗಳಲ್ಲಿ ಸ್ಥಳೀಯವಾಗಿ ವ್ಯತ್ಯಾಸಗಳಿವೆ.
ವಿಶೇಷವಾಗಿ ಸಪ್ತಪರ್ಣದ ತೊಗಟೆಯ ಕಹಿ ಕಷಾಯವನ್ನು ಆಟಿ ಅಮಾವಾಸ್ಯೆಯಂದು ಸಾಮೂಹಿಕವಾಗಿ ಸೇವಿಸುವ ಪದ್ಧತಿ ಕರಾವಳಿ ಕರ್ನಾಟಕದ ಜನಪದ-ಔಷಧೀಯ ಪರಂಪರೆಯಲ್ಲಿ ದಾಖಲಾಗಿದೆ. ಈ ಆಚರಣೆಯು ಕೇವಲ ಧಾರ್ಮಿಕ ನಂಬಿಕೆಯಲ್ಲ; ಪ್ರಕೃತಿಯಲ್ಲಿ ದೊರೆಯುವ ಸಸ್ಯಗಳ ಬಳಕೆಯ ಕುರಿತು ಹಿಂದಿನ ಪೀಳಿಗೆಗಳ ಅನುಭವ ಜ್ಞಾನವನ್ನೂ ಪ್ರತಿಬಿಂಬಿಸುತ್ತದೆ.
“ಡಿಟಾಕ್ಸ್” ಎಂಬ ಆಧುನಿಕ ಪದಕ್ಕೆ ಹಳೆಯ ಉತ್ತರವೇ?
ಇಂದು “ಡಿಟಾಕ್ಸ್”, “ಇಮ್ಯುನಿಟಿ ಬೂಸ್ಟರ್”, “ಮೆಟಾಬಾಲಿಸಂ ಬೂಸ್ಟರ್” ಮುಂತಾದ ಪದಗಳು ಆರೋಗ್ಯ ಚರ್ಚೆಗಳಲ್ಲಿ ಸಾಮಾನ್ಯವಾಗಿವೆ. ಆದರೆ ಆಟಿ ಕಷಾಯವನ್ನು ಇಂತಹ ಆಧುನಿಕ ಪದಗಳೊಂದಿಗೆ ನೇರವಾಗಿ ಸಮೀಕರಿಸುವುದು ವೈಜ್ಞಾನಿಕವಾಗಿ ಸರಿಯಾಗುವುದಿಲ್ಲ.
ನಮ್ಮ ದೇಹದಲ್ಲಿ ಯಕೃತ್ತು ಮತ್ತು ಮೂತ್ರಪಿಂಡಗಳು ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸುವ ಪ್ರಮುಖ ಅಂಗಗಳಾಗಿವೆ. ಆದ್ದರಿಂದ ಯಾವುದೇ ಒಂದು ಕಷಾಯ ದೇಹದಲ್ಲಿರುವ ಎಲ್ಲಾ “ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ” ಎಂದು ಹೇಳಲು ಸಾಕಷ್ಟು ವೈಜ್ಞಾನಿಕ ಆಧಾರವಿಲ್ಲ.
ಆದರೆ ಅದರಿಂದ ಪರಂಪರೆಯ ಮೌಲ್ಯ ಕಡಿಮೆಯಾಗುವುದಿಲ್ಲ. ಸಸ್ಯಾಧಾರಿತ ಪದಾರ್ಥಗಳು ಮತ್ತು ಮಸಾಲೆಗಳ ಬಳಕೆ, ಋತುವಿಗೆ ಅನುಗುಣವಾಗಿ ಆಹಾರ ಪದ್ಧತಿಯನ್ನು ಬದಲಿಸುವುದು ಮತ್ತು ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಆರೋಗ್ಯದೊಂದಿಗೆ ಜೋಡಿಸುವುದು—ಇವೆಲ್ಲವೂ ನಮ್ಮ ಪಾರಂಪರಿಕ ಜ್ಞಾನ ವ್ಯವಸ್ಥೆಯ ಪ್ರಮುಖ ಅಂಶಗಳಾಗಿವೆ.
ಮಳೆಗಾಲ ಮತ್ತು ಆಹಾರ: ನಮ್ಮ ಹಿರಿಯರು ತಿಳಿದಿದ್ದದ್ದು
ಮಳೆಗಾಲದಲ್ಲಿ ಆಹಾರದ ಗುಣಮಟ್ಟ, ನೀರಿನ ಸುರಕ್ಷತೆ, ಸ್ವಚ್ಛತೆ ಮತ್ತು ಜೀರ್ಣಕ್ರಿಯೆಯ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ತೇವಾಂಶ ಹೆಚ್ಚಿರುವ ಪರಿಸರದಲ್ಲಿ ಆಹಾರವನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಹಾಳಾಗುವ ಸಾಧ್ಯತೆಯೂ ಹೆಚ್ಚುತ್ತದೆ.
ಇಂತಹ ಸಂದರ್ಭದಲ್ಲಿ ನಮ್ಮ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಆಹಾರ ಪದ್ಧತಿಗಳು ಬಹಳ ಕುತೂಹಲಕಾರಿ. ವಿವಿಧ ಸೊಪ್ಪುಗಳು, ಸ್ಥಳೀಯ ತರಕಾರಿಗಳು, ಬೇರು-ಗೆಡ್ಡೆಗಳು, ಸಾಂಪ್ರದಾಯಿಕ ಧಾನ್ಯಗಳು ಮತ್ತು ಋತುವಿಗೆ ಅನುಗುಣವಾದ ಸಿದ್ಧತೆಗಳು ಆಹಾರದಲ್ಲಿ ಸ್ಥಾನ ಪಡೆದಿದ್ದವು. ದಕ್ಷಿಣ-ಪಶ್ಚಿಮ ಕರಾವಳಿಯ ಸ್ಥಳೀಯ ಸಸ್ಯಗಳ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಬಳಕೆಯನ್ನು ದಾಖಲಿಸಿರುವ ಅಧ್ಯಯನಗಳೂ ಇವೆ.
ಆಟಿ ಕಷಾಯವೂ ಈ ವಿಶಾಲವಾದ “seasonal wellness” ಸಂಸ್ಕೃತಿಯ ಒಂದು ಭಾಗವಾಗಿ ನೋಡಬಹುದು.
ಕಷಾಯದ ನಂತರದ ಮೆಂತೆ ಗಂಜಿ
ಆಟಿ ಅಮಾವಾಸ್ಯೆಯ ಆಚರಣೆಯಲ್ಲಿ ಕಷಾಯದ ನಂತರ ಮೆಂತೆ ಗಂಜಿ ಸೇವಿಸುವ ಪದ್ಧತಿಯೂ ಹಲವು ಕುಟುಂಬಗಳಲ್ಲಿ ಕಂಡುಬರುತ್ತದೆ. ಮೆಂತೆ ಮತ್ತು ಅಕ್ಕಿಯನ್ನು ಆಧರಿಸಿದ ಈ ಸರಳ ಆಹಾರವು ಕಷಾಯದ ಕಹಿ ರುಚಿಯ ನಂತರ ಆಹಾರವಾಗಿ ಸೇವಿಸುವ ಪರಂಪರೆಯ ಭಾಗವಾಗಿದೆ.
ಇಲ್ಲಿ ಗಮನಿಸಬೇಕಾದ ಒಂದು ಸಂಗತಿ ಎಂದರೆ—ಪಾರಂಪರಿಕ ಆಹಾರ ಪದ್ಧತಿಯನ್ನು ಕೇವಲ “ಔಷಧಿ” ಎಂದು ನೋಡುವ ಬದಲು ಆಹಾರ, ಋತು ಮತ್ತು ಜೀವನಶೈಲಿಯ ಒಟ್ಟಾರೆ ವ್ಯವಸ್ಥೆಯಾಗಿ ಅರ್ಥಮಾಡಿಕೊಳ್ಳಬೇಕು.
ಸಂಪ್ರದಾಯವನ್ನು ಉಳಿಸೋಣ; ಆದರೆ ವೈಜ್ಞಾನಿಕ ಅರಿವಿನೊಂದಿಗೆ
ಇಂದಿನ ಪೀಳಿಗೆಗೆ ಆಟಿ ಕಷಾಯದ ಬಗ್ಗೆ ತಿಳಿಸುವಾಗ ಎರಡು ಅತಿರೇಕಗಳನ್ನು ತಪ್ಪಿಸಬೇಕು.
ಒಂದೆಡೆ, “ಇದು ಹಳೆಯ ಪದ್ಧತಿ, ಆದ್ದರಿಂದ ಯಾವುದೇ ಮೌಲ್ಯವಿಲ್ಲ” ಎನ್ನುವುದು ತಪ್ಪು. ಮತ್ತೊಂದೆಡೆ, “ಇದು ಎಲ್ಲಾ ಕಾಯಿಲೆಗಳನ್ನು ಗುಣಪಡಿಸುತ್ತದೆ” ಅಥವಾ “ಎಲ್ಲರಿಗೂ ಯಾವುದೇ ಅಡ್ಡಪರಿಣಾಮವಿಲ್ಲದೆ ಔಷಧಿಯಂತೆ ಕೆಲಸ ಮಾಡುತ್ತದೆ” ಎನ್ನುವುದೂ ವೈಜ್ಞಾನಿಕವಾಗಿ ಸಮರ್ಥಿಸಲಾಗುವುದಿಲ್ಲ.
ಸಸ್ಯಾಧಾರಿತ ಕಷಾಯಗಳಲ್ಲಿರುವ ಸಕ್ರಿಯ ಸಂಯುಕ್ತಗಳು, ಅವುಗಳ ಪ್ರಮಾಣ, ದೇಹದ ಮೇಲೆ ಆಗುವ ಪರಿಣಾಮ, ಔಷಧಿಗಳೊಂದಿಗೆ ಸಂಭವಿಸಬಹುದಾದ ಪರಸ್ಪರ ಕ್ರಿಯೆಗಳು ಮತ್ತು ವಿವಿಧ ವಯಸ್ಸಿನ ಹಾಗೂ ಆರೋಗ್ಯ ಪರಿಸ್ಥಿತಿಗಳಲ್ಲಿನ ಸುರಕ್ಷತೆಯ ಕುರಿತು ಇನ್ನಷ್ಟು ಸಂಶೋಧನೆ ಅಗತ್ಯವಿದೆ. ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಔಷಧೀಯ ಸಸ್ಯ ಬಳಕೆಯ ಕುರಿತು ವೈಜ್ಞಾನಿಕ ಅಧ್ಯಯನಗಳು ಈಗಾಗಲೇ ನಡೆದಿದ್ದರೂ, ಪ್ರತಿಯೊಂದು ಜನಪದ ಚಿಕಿತ್ಸಾ ಪದ್ಧತಿಯ ಪರಿಣಾಮಕಾರಿತ್ವವನ್ನು ಪ್ರತ್ಯೇಕವಾಗಿ ವೈಜ್ಞಾನಿಕವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.
ವಿಶೇಷವಾಗಿ ಗರ್ಭಿಣಿಯರು, ಮಕ್ಕಳು, ವೃದ್ಧರು, ದೀರ್ಘಕಾಲದ ಕಾಯಿಲೆ ಇರುವವರು ಅಥವಾ ನಿಯಮಿತವಾಗಿ ಔಷಧಿಗಳನ್ನು ಸೇವಿಸುವವರು ಇಂತಹ ಕಷಾಯಗಳನ್ನು ಔಷಧಿಯ ಪರ್ಯಾಯವಾಗಿ ಬಳಸುವ ಮೊದಲು ವೈದ್ಯರು ಅಥವಾ ಅರ್ಹ ಆಯುರ್ವೇದ ತಜ್ಞರ ಸಲಹೆ ಪಡೆಯುವುದು ಸೂಕ್ತ.
ನಮ್ಮ ಅಡುಗೆ ಮನೆಯಲ್ಲಿರುವ ಪರಂಪರೆಯ ವಿಜ್ಞಾನ
ಆಟಿ ಕಷಾಯದ ನಿಜವಾದ ಮಹತ್ವ ಬಹುಶಃ ಅದರ ಕಹಿ ರುಚಿಯಲ್ಲಿ ಮಾತ್ರವಿಲ್ಲ. ಅದು ನಮ್ಮ ಹಿರಿಯರು ಪ್ರಕೃತಿಯನ್ನು ಗಮನಿಸಿ, ಋತುಮಾನಕ್ಕೆ ತಕ್ಕಂತೆ ಆಹಾರ ಪದ್ಧತಿಯನ್ನು ರೂಪಿಸಿ, ಸ್ಥಳೀಯ ಸಸ್ಯಗಳ ಗುಣಗಳನ್ನು ಅನುಭವದ ಮೂಲಕ ತಿಳಿದುಕೊಂಡಿದ್ದ ಪರಂಪರೆಯ ಸಂಕೇತವಾಗಿದೆ.
ಇಂದು ನಾವು ಆಧುನಿಕ ವಿಜ್ಞಾನವನ್ನು ಆಧಾರವಾಗಿಸಿಕೊಂಡು ಈ ಜ್ಞಾನವನ್ನು ಮರುಪರಿಶೀಲಿಸುವ ಅಗತ್ಯವಿದೆ. ಯಾವುದು ವೈಜ್ಞಾನಿಕವಾಗಿ ಸಾಬೀತಾಗಿದೆ? ಯಾವುದು ಜನಪದ ನಂಬಿಕೆ? ಯಾವುದು ಇನ್ನೂ ಸಂಶೋಧನೆಗೆ ಒಳಪಡಬೇಕಿದೆ? ಎಂಬ ಪ್ರಶ್ನೆಗಳನ್ನು ಕೇಳುತ್ತಲೇ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು.
ಆಟಿ ಕಷಾಯವನ್ನು ಕೇವಲ ಒಂದು ಕಹಿ ಪಾನೀಯವೆಂದು ನೋಡದೆ, ತುಳುನಾಡಿನ ಪ್ರಕೃತಿ, ಆಹಾರ, ಆರೋಗ್ಯ ಮತ್ತು ಸಂಸ್ಕೃತಿಯನ್ನು ಒಂದೇ ಪಾತ್ರೆಯಲ್ಲಿ ಬೆಸೆದಿರುವ ಪಾರಂಪರಿಕ ಜ್ಞಾನದ ಸಂಕೇತವೆಂದು ನೋಡಿದಾಗ ಅದರ ನಿಜವಾದ ಮಹತ್ವ ನಮಗೆ ಅರ್ಥವಾಗುತ್ತದೆ.
ಪರಂಪರೆಯನ್ನು ಉಳಿಸೋಣ—ಅದನ್ನು ವಿಜ್ಞಾನದ ಬೆಳಕಿನಲ್ಲಿ ಅರ್ಥಮಾಡಿಕೊಂಡು ಮುಂದಿನ ಪೀಳಿಗೆಗೆ ತಲುಪಿಸೋಣ.
ಡಾ. ಅಜಿತ್ ಕೆ. ಕೋಡಿಂಬಾಳ
ಆಹಾರ ಮತ್ತು ಪೌಷ್ಟಿಕತಜ್ಞರು ಹಾಗೂ ಪ್ರಾಧ್ಯಾಪಕರು
ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗ
ಯೆನೆಪೋಯ (ಡೀಮ್ಡ್ ಟು ಬಿ ವಿಶ್ವವಿದ್ಯಾಲಯ), ಮಂಗಳೂರು
ಮಹಿಳೆಯರು ಎದುರಿಸುತ್ತಿರುವ ಮಾನಸಿಕ ಒತ್ತಡ ಹಾಗೂ ಮೆನೋಪಾಸ್ (ಋತುಬಂಧ) ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಹಿಳಾ ವೈದ್ಯಕೀಯ ತಜ್ಞೆ ಡಾ. ಜೋಸ್ನಾ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ. ಈ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ.
ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಮಹಿಳೆಯರ ಆರೋಗ್ಯದ ಕುರಿತು ಡೇಟಾ ಸಂಗ್ರಹಿಸಲಿದ್ದಾರೆ.ಪ್ರೀ-ಮೆನೋಪಾಸ್ ಹಾಗೂ ಪೋಸ್ಟ್-ಮೆನೋಪಾಸ್ ಹಂತಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಜೀವನಶೈಲಿ ಮತ್ತು ಚಿಕಿತ್ಸೆ ಬಗ್ಗೆ ಮಹಿಳೆಯರಿಗೆ ಸಮಗ್ರ ತಿಳಿವಳಿಕೆ ನೀಡಲಾಗುತ್ತದೆ.
ಮೆನೋಪಾಸ್ ಕುರಿತು ಸೂಕ್ತ ಕ್ರಮಕ್ಕೆ ನಟಿ ರಮ್ಯಾ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಸಚಿವ ಯು.ಟಿ. ಖಾದರ್, ನಟಿ ರಮ್ಯಾ ಹಾಗೂ ವೈದ್ಯಕೀಯ ತಜ್ಞರು ನಡೆಸಿದ ಸುದೀರ್ಘ ಸಂವಾದದಲ್ಲಿ ಬಂದ ಸಲಹೆಗಳ ಆಧಾರದ ಮೇಲೆ ಸರ್ಕಾರ ಈ ಪ್ರಮುಖ ನಿರ್ಧಾರ ಕೈಗೊಂಡಿದೆ.
]]>
ಆದರೆ ಇಂದು ಗ್ರಾಮೀಣ ಪ್ರದೇಶಗಳಲ್ಲಿಯೂ ಅಡುಗೆ ಮನೆಯ ಚಿತ್ರ ನಿಧಾನವಾಗಿ ಬದಲಾಗುತ್ತಿದೆ. ಇದು ನಗರೀಕರಣದ ಪರಿಣಾಮ ಮಾತ್ರವಲ್ಲ; ಸಮಯದ ಅಭಾವ, ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಸಂಸ್ಕರಿತ ಆಹಾರಗಳು, ಜಾಹೀರಾತುಗಳ ಪ್ರಭಾವ, ಅನುಕೂಲಕರ ಜೀವನಶೈಲಿ ಮತ್ತು ಬದಲಾಗುತ್ತಿರುವ ಆಹಾರ ಅಭ್ಯಾಸಗಳು ಈ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ.
ಈ ಬದಲಾವಣೆಗಳನ್ನು ನಾವು ಸಣ್ಣ ವಿಷಯಗಳೆಂದು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ, ಬೊಜ್ಜು, ಕೊಬ್ಬಿನ ಯಕೃತ್ (Fatty Liver), ಜೀರ್ಣಕ್ರಿಯೆಯ ತೊಂದರೆಗಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಮತ್ತಷ್ಟು ಹೆಚ್ಚಾಗಬಹುದು.
೧. ಮನೆಯ ಮಸಾಲೆಯ ಬದಲು ಪ್ಯಾಕೆಟ್ ಮಸಾಲೆ
ಇಂದು ಅನೇಕ ಮನೆಗಳಲ್ಲಿ ಸಾಂಬಾರ ಪುಡಿ, ಮೀನು ಫ್ರೈ ಮಸಾಲೆ, ಚಿಕನ್ ಮಸಾಲೆ, ಕಬಾಬ್ ಮಸಾಲೆ, ಬಿರಿಯಾನಿ ಮಸಾಲೆ – ಎಲ್ಲವೂ ಪ್ಯಾಕೆಟ್ ನಿಂದಲೇ ಬರುತ್ತಿವೆ.
ಎಲ್ಲಾ ಪ್ಯಾಕೆಟ್ ಮಸಾಲೆಗಳು ಹಾನಿಕಾರಕವೆಂದು ಹೇಳುವುದು ಸರಿಯಲ್ಲ. ಆದರೆ ಕೆಲವು ಉತ್ಪನ್ನಗಳಲ್ಲಿ ಹೆಚ್ಚು ಉಪ್ಪು, ಕೃತಕಬಣ್ಣ, ರುಚಿವರ್ಧಕಗಳು, ಸಂರಕ್ಷಕಗಳು ಹಾಗೂ ಹೆಚ್ಚು ಸೋಡಿಯಂ ಇರಬಹುದು. ದಿನನಿತ್ಯ ಇವುಗಳ ಮೇಲೆ ಸಂಪೂರ್ಣ ಅವಲಂಬಿತರಾದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಿಂದೆ ಮನೆಯಲ್ಲೇ ಧನಿಯಾ, ಜೀರಿಗೆ, ಮೆಣಸು, ಅರಿಶಿನ, ಮೆಣಸಿನಕಾಯಿ, ಕರಿಬೇವು, ಮೆಂತ್ಯೆ ಇತ್ಯಾದಿಗಳನ್ನು ಹುರಿದು ರುಬ್ಬಲಾಗುತ್ತಿತ್ತು. ಇವು ರುಚಿಯ ಜೊತೆಗೆ ಪೋಷಕಾಂಶ ಹಾಗೂ ನೈಸರ್ಗಿಕ ಸುವಾಸನೆಯನ್ನು ನೀಡುತ್ತಿದ್ದವು.
೨. “ಬೇಗ ಬೇಯಬೇಕು” ಎನ್ನುವ ಕಾರಣಕ್ಕೆ ಹೆಚ್ಚು ಪಾಲಿಶ ಮಾಡಿದ ಅಕ್ಕಿ
ಇಂದು ಅಕ್ಕಿ ಆಯ್ಕೆ ಮಾಡುವಾಗ ಬಹುತೇಕ ಜನರು ಕೇಳುವ ಪ್ರಶ್ನೆ – “ಬೇಗ ಬೇಯುತ್ತದೆಯೇ?”
ಈ ಒಂದು ಪ್ರಶ್ನೆಯೇ ನಮ್ಮ ಆಹಾರದ ಗುಣಮಟ್ಟವನ್ನು ಬದಲಾಯಿಸಿದೆ.
ಅಕ್ಕಿಯನ್ನು ಹೆಚ್ಚು ಪಾಲಿಶ್ ಮಾಡಿದಂತೆ ಅದರ ಮೇಲ್ಭಾಗದಲ್ಲಿರುವ ನಾರಿನಾಂಶ, ಬಿ-ವಿಟಮಿನ್ಗಳು ಹಾಗೂ ಕೆಲವು ಖನಿಜಾಂಶಗಳು ಕಡಿಮೆಯಾಗುತ್ತವೆ. ಪರಿಣಾಮವಾಗಿ ಹೊಟ್ಟೆ ಬೇಗ ತುಂಬಿದರೂ ದೇಹಕ್ಕೆ ಸಿಗುವ ಪೋಷಕಾಂಶ ಕಡಿಮೆಯಾಗುತ್ತದೆ.
ಕಡಿಮೆ ಪಾಲಿಶ್ ಮಾಡಿದ ಅಕ್ಕಿ, ಕೆಂಪು ಅಕ್ಕಿ ಅಥವಾ ವಾರದಲ್ಲಿ ಕೆಲವು ದಿನ ಸಿರಿಧಾನ್ಯಗಳನ್ನು ಬಳಸುವುದು ಆರೋಗ್ಯಕರ ಆಯ್ಕೆಯಾಗಿದೆ.
೩. ತರಕಾರಿಗಳ ಜಾಗದಲ್ಲಿ ಮಾಂಸಾಹಾರ
ಹಿಂದೆ ಮಾಂಸಾಹಾರವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಇತ್ತು. ಇಂದು ಅನೇಕ ಮನೆಗಳಲ್ಲಿ ವಾರದಲ್ಲಿ ನಾಲ್ಕೈದು ದಿನ ಮಾಂಸಾಹಾರ ಸಾಮಾನ್ಯವಾಗಿದೆ.
ಮಾಂಸಾಹಾರ ಪ್ರೋಟೀನ್ನ ಉತ್ತಮ ಮೂಲ. ಆದರೆ ಪ್ರತಿದಿನ ಹೆಚ್ಚು ಎಣ್ಣೆಯಲ್ಲಿ ಕರಿದ ಅಥವಾ ಮಸಾಲೆ ಹೆಚ್ಚಿರುವ ಮಾಂಸಾಹಾರ ಸೇವಿಸಿ, ತರಕಾರಿಗಳು ಹಾಗೂ ಬೇಳೆಗಳನ್ನು ಕಡೆಗಣಿಸುವುದು ಸಮತೋಲನ ಆಹಾರವಲ್ಲ. ಒಂದು ಆರೋಗ್ಯಕರ ತಟ್ಟೆಯಲ್ಲಿ ಅರ್ಧಭಾಗ ತರಕಾರಿ, ಕಾಲು ಭಾಗ ಧಾನ್ಯ ಹಾಗೂ ಉಳಿದ ಕಾಲು ಭಾಗ ಪ್ರೋಟೀನ್ ಇರಬೇಕು.
೪. ಒಂದೇ ರೀತಿಯ ಆಹಾರ – ಪೋಷಕಾಂಶದ ಕೊರತೆಗೆ ಆಹ್ವಾನ
“ಪ್ರತಿದಿನ ಅನ್ನ, ಸಾರು, ಮೀನು” ಅಥವಾ “ಅನ್ನ, ಚಿಕನ್” – ಇದೇ ಆಹಾರ ಪದ್ಧತಿ ಅನೇಕ ಮನೆಗಳಲ್ಲಿ ಕಂಡುಬರುತ್ತಿದೆ.
ಮಾನವ ದೇಹಕ್ಕೆ 40 ಕ್ಕೂ ಹೆಚ್ಚು ಅಗತ್ಯ ಪೋಷಕಾಂಶಗಳು ಬೇಕಾಗುತ್ತವೆ. ಒಂದೇ ರೀತಿಯ ಆಹಾರದಿಂದ ಅವೆಲ್ಲವೂ ದೊರೆಯುವುದಿಲ್ಲ.
ಪ್ರತಿದಿನ ಬೇರೆ ಬೇರೆ ತರಕಾರಿ, ಸೊಪ್ಪು, ಬೇಳೆ, ಹಣ್ಣು ಹಾಗೂ ಧಾನ್ಯಗಳನ್ನು ಸೇರಿಸುವುದೇ ನಿಜವಾದ ಸಮತೋಲನ ಆಹಾರ.
೫. ಬೆಳಗ್ಗೆಖಾಲಿ ಹೊಟ್ಟೆಯಲ್ಲಿ ಸಿಹಿ ಚಹಾ
ಬಹುತೇಕ ಜನರು ಬೆಳಗ್ಗೆ ನೀರು ಕುಡಿಯುವ ಮೊದಲು ಚಹಾ ಕುಡಿಯುತ್ತಾರೆ.
ಖಾಲಿ ಹೊಟ್ಟೆಯಲ್ಲಿ ಗಟ್ಟಿ ಚಹಾ ಕುಡಿಯುವುದರಿಂದ ಕೆಲವರಲ್ಲಿ ಅಸಿಡಿಟಿ, ಹೊಟ್ಟೆ ಉರಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳು ಹೆಚ್ಚಾಗಬಹುದು. ಜೊತೆಗೆ ಹೆಚ್ಚು ಸಕ್ಕರೆ ಸೇರಿಸಿದರೆ ದೇಹಕ್ಕೆ ಅನಗತ್ಯ ಕ್ಯಾಲೊರಿಗಳು ಸೇರುತ್ತವೆ.
ಮೊದಲು ಒಂದು ಲೋಟ ನೀರು ಕುಡಿಯುವುದು, ನಂತರ ಹಣ್ಣು ಅಥವಾ ಲಘು ಉಪಹಾರ ಸೇವಿಸಿ ಚಹಾ ಕುಡಿಯುವುದು ಉತ್ತಮ ಅಭ್ಯಾಸ.
೬. ಅಡುಗೆ ಪಾತ್ರೆಗಳಲ್ಲಿಯೂ ಬದಲಾವಣೆ
ಹಿಂದೆ ಕಬ್ಬಿಣದ ಪಾತ್ರೆ, ಮಣ್ಣಿನ ಮಡಿಕೆ, ಪಿತ್ತಳ ಹಾಗೂ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳ ಬಳಕೆ ಸಾಮಾನ್ಯವಾಗಿತ್ತು.
ಇಂದು ನಾನ್- ಸ್ಟಿಕ್ ಪಾತ್ರೆಗಳು ಹಾಗೂ ಅಲ್ಯೂಮಿನಿಯಂ ಪಾತ್ರೆಗಳ ಬಳಕೆ ಹೆಚ್ಚಾಗಿದೆ.
ನಾನ್-ಸ್ಟಿಕ್ ಪಾತ್ರೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಸಾಮಾನ್ಯವಾಗಿ ಸುರಕ್ಷಿತ. ಆದರೆ ಗೀರು ಬಿದ್ದ ಅಥವಾ ಹಾಳಾದ ನಾನ್-ಸ್ಟಿಕ್ ಪಾತ್ರೆಗಳನ್ನು ಬಳಸಬಾರದು.
ಅದೇ ರೀತಿ, ಹಳೆಯ ಅಥವಾ ಹಾನಿಗೊಂಡ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಹೆಚ್ಚು ಹುಳಿ ಆಹಾರವನ್ನು ಪದೇ ಪದೇ ಬೇಯಿಸುವುದನ್ನು ತಪ್ಪಿಸುವುದು ಉತ್ತಮ.
೭. ಎಣ್ಣೆಯ ಮರು ಬಳಕೆ – ಮೌನದ ಅಪಾಯ
ಹಲವು ಮನೆಗಳಲ್ಲಿ ಮೀನು ಅಥವಾ ಚಿಕನ್ ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವ ಅಭ್ಯಾಸವಿದೆ.
ಒಂದೇ ಎಣ್ಣೆಯನ್ನು ಮರು ಮರು ಬಿಸಿ ಮಾಡಿದರೆ ಅದರ ಗುಣಮಟ್ಟ ಕುಸಿಯಬಹುದು ಮತ್ತು ಆರೋಗ್ಯಕ್ಕೆ ಹಾನಿಕಾರಕ ಸಂಯುಕ್ತಗಳು ರೂಪುಗೊಳ್ಳುವ ಸಾಧ್ಯತೆ ಇದೆ.
೮. ಪ್ಯಾಕೆಟ್ಆಹಾರಗಳತ್ತಮಕ್ಕಳಒಲವು
ಬಿಸ್ಕಟ್, ಚಿಪ್ಸ್, ವೇಫರ್, ಕಲರ್ ಕ್ಯಾಡಿ, ಸಾಫ್ಟ್ ಡ್ರಿಂಕ್ಸ್ – ಇವು ಮಕ್ಕಳ ದಿನ ನಿತ್ಯದ ಆಹಾರವಾಗುತ್ತಿವೆ.
ಇವುಗಳ ಬದಲು ಕಡಲೆ, ಶೇಂಗಾ, ಹಣ್ಣು, ಮೊಳಕೆ ಕಾಳು, ರಾಗಿ ಉಂಡೆ, ಅವಲಕ್ಕಿ, ಮನೆಯಲ್ಲೇ ತಯಾರಿಸಿದ ಆರೋಗ್ಯಕರ ತಿಂಡಿಗಳನ್ನು ನೀಡುವುದು ಉತ್ತಮ.
೯. ನಮ್ಮ ತಟ್ಟೆಯಿಂದ ಕಾಣೆಯಾಗುತ್ತಿರುವ ಸಿರಿಧಾನ್ಯಗಳು
ರಾಗಿ, ನವಣೆ, ಸಜ್ಜೆ, ಜೋಳ, ಸಾಮೆ – ಇವು ಒಂದು ಕಾಲದಲ್ಲಿ ಗ್ರಾಮೀಣ ಜೀವನದ ಭಾಗವಾಗಿದ್ದವು.
ಇಂದು ಅವುಗಳ ಸ್ಥಾನವನ್ನು ಕೇವಲ ಬಿಳಿ ಅಕ್ಕಿ ಪಡೆದುಕೊಂಡಿದೆ.
ಸಿರಿಧಾನ್ಯಗಳು ನಾರಿನಾಂಶ, ಖನಿಜಾಂಶ ಹಾಗೂ ನಿಧಾನವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ಗಳ ಉತ್ತಮ ಮೂಲವಾಗಿವೆ.
೧೦. ಜಾಹೀರಾತುಗಳು ಆಹಾರವನ್ನು ನಿರ್ಧರಿಸುತ್ತಿವೆಯೇ?
ಇಂದು ಯಾವ ಆಹಾರ ಆರೋಗ್ಯಕರ ಎಂಬುದನ್ನು ಅಜ್ಜ-ಅಜ್ಜಿಯರು ಹೇಳುವುದಕ್ಕಿಂತ ಜಾಹೀರಾತುಗಳು ಹೇಳುತ್ತಿರುವ ಪರಿಸ್ಥಿತಿ ಬಂದಿದೆ.
“ಇನ್ ಸ್ಟಂಟ್”, “ರೆಡಿ ಟು ಕುಕ್”, “ಎರಡು ನಿಮಿಷ”, “ಹೋಟೆಲ್ ರುಚಿ” ಎಂಬ ಪದಗಳು ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ ಆಹಾರವನ್ನು ಆಯ್ಕೆ ಮಾಡುವಾಗ ಅದರ ಪೋಷಕಾಂಶ, ಉಪ್ಪು, ಸಕ್ಕರೆ ಹಾಗೂ ಕೊಬ್ಬಿನ ಪ್ರಮಾಣವನ್ನು ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಪೂರ್ವಜರ ಆಹಾರ ಪದ್ಧತಿಯಲ್ಲಿ ಅಡಗಿದ್ದ ವಿಜ್ಞಾನ
ನಮ್ಮ ಹಿರಿಯರು “ಸಮತೋಲನ ಆಹಾರ” ಎಂಬ ಪದವನ್ನು ಬಳಸಿರಲಿಲ್ಲ. ಆದರೆ ಅವರ ಆಹಾರ ಪದ್ಧತಿಯಲ್ಲಿ ಅದರ ತತ್ವ ಅಡಗಿತ್ತು.
ಇವೆಲ್ಲವೂ ಆರೋಗ್ಯಕರ ಜೀವನಶೈಲಿಯ ಆಧಾರಸ್ತಂಭಗಳಾಗಿದ್ದವು.
ನಾವು ಏನು ಮಾಡಬೇಕು?
ಆಧುನಿಕತೆಯನ್ನು ವಿರೋಧಿಸುವ ಅಗತ್ಯವಿಲ್ಲ. ಹೊಸ ತಂತ್ರಜ್ಞಾನ, ಹೊಸ ಅಡುಗೆ ವಿಧಾನಗಳು ಮತ್ತು ಅನುಕೂಲಕರ ಆಹಾರಗಳು ನಮ್ಮ ಜೀವನವನ್ನು ಸುಲಭಗೊಳಿಸಿವೆ. ಆದರೆ ಸೌಲಭ್ಯಕ್ಕಾಗಿ ಆರೋಗ್ಯವನ್ನು ಬಲಿಕೊಡಬಾರದು.
ಗ್ರಾಮೀಣ ಅಡುಗೆ ಮನೆಗಳ ನಿಜವಾದ ಶಕ್ತಿ ಪ್ಯಾಕೆಟ್ಗಳಲ್ಲಿ ಇರಲಿಲ್ಲ; ಅದು ಮನೆಯ ಮಸಾಲೆಯ ಸುವಾಸನೆಯಲ್ಲಿ, ತಾಜಾ ತರಕಾರಿಗಳ ಬಣ್ಣದಲ್ಲಿ, ಸಿರಿಧಾನ್ಯಗಳ ಪೌಷ್ಟಿಕತೆಯಲ್ಲಿ, ತಾಯಿಯ ಕೈಯಿಂದ ತಯಾರಾದ ಆಹಾರದಲ್ಲಿ ಮತ್ತು ಸಮತೋಲನದ ಊಟದಲ್ಲಿ ಅಡಗಿತ್ತು.
ನಾವು ಮರೆಯುತ್ತಿರುವುದು ಕೇವಲ ಒಂದು ಆಹಾರ ಪದ್ಧತಿಯಲ್ಲ; ಆರೋಗ್ಯಕರ ಜೀವನಶೈಲಿಯ ಪರಂಪರೆಯನ್ನೇ. ಆ ಪರಂಪರೆಯನ್ನು ಉಳಿಸುವುದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಡಾ.ಅಜಿತ್ ಕೊಡಿಂಬಾಳ
]]>
ಪ್ರತಿ ವರ್ಷ ಆಷಾಡ ಮಾಸದ ಶುಕ್ಲ ಪಕ್ಷದ ಮೊದಲ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಈ ದಿನದಂದು ವೇದವ್ಯಾಸರು ಅವತರಿಸಿದರು ಎಂಬ ಪ್ರತೀತಿ ಇದೆ. ಒಟ್ಟಿನಲ್ಲಿ ವೇದ ವ್ಯಾಸರ ನೆನಪಲ್ಲಿ, ಗುರು ಹಿರಿಯರಿಗೆ ನಮಿಸುವ, ಸ್ಮರಿಸುವ ಮತ್ತು ಸತ್ಕರಿಸುವ ಸುದಿನ ಎಂದರೂ ತಪ್ಪಲ್ಲ.
ವ್ಯಾಸರು ಪರಾಶರ ಮತ್ತು ಸತ್ಯವತಿದೇವಿಯ ಮಗನಾಗಿ ಜನಿಸಿದರು. ಹುಟ್ಟು ಕಪ್ಪು ವರ್ಣದಿಂದ ಕೂಡಿದ್ದರಿಂದ ವ್ಯಾಸ ಎಂದು ಕರೆಯಲ್ಪಟ್ಟರು. ತಂದೆಯಂತೆ ಅಪಾರ ಮೇಧಾವಿಯಾಗಿದ್ದ ವ್ಯಾಸರು, ತಂದೆಯೊಡನೆ ಹೆಚ್ಚಿನ ಜ್ಞಾನಾರ್ಜನೆಗೆಂದು ಹಿಮಾಲಯಕ್ಕೆ ತಪ್ಪಸ್ಸಿಗೆ ಹೊರಡುತ್ತಾರೆ. ಆದರೆ ಬದರಿಕ್ಷೇತ್ರದಲ್ಲಿಯೇ ನೆಲೆಸುತ್ತಾರೆ. ಆ ಕಾರಣದಿಂದಲೇ ಅವರಿಗೆ ಬಾದರಾಯಣ ಎಂಬ ಹೆಸರೂ ಬಂದಿದೆ. ಈಗಲೂ ಬದರಿ ಕ್ಷೇತ್ರದಲ್ಲಿ ವ್ಯಾಸ ಗುಹೆ ಇದೆ ಎಂಬ ಪ್ರತೀತಿ ಇದೆ. ಇಲ್ಲಿಯೇ ಭಾರತದ ಶ್ರೇಷ್ಠ ಇತಿಹಾಸ ಗ್ರಂಥವಾದ ಮಹಾಭಾರತವನ್ನು ವ್ಯಾಸಮುನಿಗಳು ಗಣೇಶನ ಸಹಾಯದಿಂದ ರಚಿಸುತ್ತಾರೆ. ಸಮಗ್ರವಾದ ವೇದರಾಶಿಯನ್ನು ವಿದ್ಯಾರ್ಥಿಗಳು ಕಲಿಯಲು ಪರದಾಡುವುದನ್ನು ಕಂಡು ಅದನ್ನು ವಿಂಗಡಿಸಿ ತಮ್ಮ ನಾಲ್ಕು ಶಿಷ್ಯರಿಗೆ ಭೋಧಿಸಿದರು ಈ ರೀತಿ ವೇದ ವಿಂಗಡಿಸಿ ವೇದ ಪರಂಪರೆಯನ್ನು ಮುಂದುವರಿಸಿದ ಕಾರಣದಿಂದಲೇ ಅವರಿಗೆ ವೇದವ್ಯಾಸ ಎಂಬ ಹೆಸರನ್ನು ಪಡೆದರು.
ತಲೆತಲಾಂತರಗಳಿಂದಲೂ, ವೇದಗಳ ಕಾಲದಿಂದಲೂ ಗುರುವಿಗೆ ಒಂದು ವಿಶಿಷ್ಠ ಸ್ಥಾನವಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. ಯಾವುದೇ ಶುಭಕಾರ್ಯವನ್ನು ಮಾಡುವ ಮೊದಲು ಗುರುವನ್ನು ಸ್ಮರಿಸುವ ಸತ್ ಸಂಪ್ರದಾಯ ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ವೇದ ಮಂತ್ರಗಳನ್ನು ಉಚ್ಚರಿಸುವ ಮೊದಲು ಶ್ರೀಗುರು ಭ್ಯೋ ನಮಃ ಹರಿಃ ಓಂ ಎಂದು ಹೇಳಿಯೇ ಪ್ರಾರಂಭಿಸಿಸಲಾಗುತ್ತದೆ. ಇದು ವೇದಗಳನ್ನು ವಿಂಗಡಿಸಿದ ವೇದ ವ್ಯಾಸರಿಗೆ ಸಲ್ಲಿಸುವ ಗೌರವ ಎಂದರೂ ತಪ್ಪಲ್ಲ. ಮೊದಲ ವೇದ ಒಂದೇ ಆಗಿರುತ್ತಂತೆ. ಆ ವೇದವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿದವರು ವ್ಯಾಸರಾಯರು. ವ್ಯಾಸ ಎನ್ನುವ ಪದಕ್ಕೆ ವಿಂಗಡಿಸುವಿಕೆ ಎಂಬ ಅರ್ಥವೂ ಇದೆ. ಈ ಕಾರಣದಿಂದಲೇ ವೇದವನ್ನು ವಿಂಗಡಿಸಿದ ವ್ಯಾಸರು, ವೇದ ವ್ಯಾಸರಾದರು ಎಂಬ ಪ್ರತೀಯೂ ಇದೆ. ಇದೇನೇ ಇರಲಿ, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ವೇದವ್ಯಾಸರಿಗೆ ಮತ್ತು ಗುರುಗಳಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗುತ್ತದೆ.
“ಗುರುಃಬ್ರಹ್ಮಾ, ಗುರುಃವಿಷ್ಣು, ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮಂ, ತಸ್ಮೆ ಶ್ರೀ ಗುರುವೇ ನಮಃ ಈ ಶ್ಲೋಕ ದಿನವೂ ನಾವು ಪಠಿಸುತ್ತೇವೆ. ಇಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥದಿಂದ ತನ್ನ ಶಿಷ್ಯಂದಿರ ಒಳಿತಿಗೆ ಸದಾಕಾಲ ಚಿಂತಿಸುವ, ಯೋಚಿಸುವ ಮತ್ತು ಶ್ರೀಗಂಧವನ್ನು ಕೊರಡಿನಂತೆ ತನ್ನ ಜೀವನದ ಸರ್ವಸ್ವವನ್ನು ತನ್ನ ಶಿಷ್ಯರ ಒಳಿತಿಗೆ ಹಾರೈಸುವ ಗುರುಗಳನ್ನು ಬ್ರಹ್ಮವಿಷ್ಣು ಮಹೇಶ್ವರರಿಗೆ ಹೋಲಿಸಲಾಗುತ್ತದೆ. ಸರ್ವಸ್ವವೂ ಗುರುವೇ, ಎಲ್ಲವೂ ಗುರುಗಳ ಆಶೀರ್ವಾದದಿಂದಲೇ ಎಂಬ ಮಾತನ್ನು ಪುರಾಣದೆಲ್ಲೆಡೆ ಹೇಳಲಾಗಿದೆ. ಗುರು ಎಂದರೆ ನಮಗೆ ಕಲಿಸಲೇಬೇಕೆಂಬ ಅರ್ಥವಲ್ಲ. ಯಾರು ತಮ್ಮ ನಡವಳಿಕೆ, ಸಂಸ್ಕಾರ, ಆಚಾರ, ವಿಚಾರಗಳಿಂದ ಇತರರಿಗೆ ಮಾರ್ಗದರ್ಶಕರಾಗಿ, ಆದರ್ಶಪ್ರಾಯರಾಗಿ ಬದುಕುತ್ತಾರೋ ಅವರೇ ನಮ್ಮ ಜೀವನದ ನಿಜ ಗುರುಗಳಾಗುತ್ತಾರೆ. ‘ಗು’ ಎಂದರೆ ಅಜ್ಞಾನ, ರು ಎಂದರೆ ಹೋಗಲಾಡಿಸುವವನು. ಯಾರು ನಮ್ಮ ಮನಸ್ಸಿನ ಅಂಧಕಾರವನ್ನು ಅಜ್ಞಾನವನ್ನು ತೊಲಗಿಸುತ್ತಾನೆಯೋ ಅವನೇ ನಿಜವಾದ ಗುರುವಾಗಿರುತ್ತಾನೆ. ಯಾರು ತನ್ನ ನಯ ವಿನಯ ಆಚಾರ, ವಿಚಾರ ಮತ್ತು ಬದುಕಿನ ಬದುಕುವ ರೀತಿಯಿಂದ ಇತರರಿಗೆ ಬದುಕುವ ದಾರಿ ತೋರುತ್ತಾರೆಯೋ ಅವರೇ ನಿಜವಾದ ಅರ್ಥದಲ್ಲಿ ಗುರು ಎನ್ನಿಸಿಕೊಳ್ಳುತ್ತಾನೆ.
ಗುರು ಎನ್ನುವ ಶಬ್ದಕ್ಕೆ ‘ಶಿಕ್ಷಕ’ ಎಂಬರ್ಥವೂ ಇದೆ. ಹೆಚ್ಚಿನವರು ‘ಗುರು’ವನ್ನು ಶಿಕ್ಷಕರ ರೂಪದಲ್ಲಿ ಕಂಡುಕೊಳ್ಳಬಹುದು. ಕೆಲವರು ಗುರುವನ್ನು ಗ್ರಂಥಗಳಲ್ಲಿ, ಪುಸ್ತಕ ಭಂಡಾರದಲ್ಲಿ ಕಂಡುಕೊಂಡಿರಬಹುದು. ಇನ್ನು ಕೆಲವರು ಧರ್ಮವನ್ನು ಬೋಧಿಸುವ ಯತಿವರ್ಯರಲ್ಲಿ ಗುರುಸಾನ್ನಿಧ್ಯವನ್ನು ಅನುಭವಿಸಿರಲೂಬಹುದು. ಇನ್ನೂ ಕೆಲವರು ತಮ್ಮ ಸ್ನೇಹಿತರಲ್ಲಿ ಒಡನಾಡಿಗಳಲ್ಲಿ ಗುರುವನ್ನು ಕಂಡಿರಬಹುದು. ಒಟ್ಟಿನಲ್ಲಿ ಗುರು ಎನ್ನುವ ಪದಕೇವಲ ಶಿಕ್ಷಕ ಅಥವಾ ಪಾಠ ಹೇಳಿಕೊಟ್ಟವರಿಗೂ ಮಾತ್ರ ಸೀಮಿತವಾಗುವುದಿಲ್ಲ. ನಮ್ಮ ಮನಸ್ಸಿನ ಅಜ್ಞಾನವನ್ನು ತೊಡೆದು ಹಾಕಿ ನಮ್ಮನ್ನು ನಾವು ಅರಿತು ಕೊಳ್ಳುವ ಮತ್ತು ನಮ್ಮ ಆಂತರ್ಯ ಶುದ್ಧಿಮಾಡುವ ಅಥವಾ ನಮ್ಮಲ್ಲಿರುವ ಜ್ಞಾನದ ದೀವಿಗೆಯನ್ನು ಜಾಗೃತಿಗೊಳಿಸುವ ಅಥವಾ ಸುಪ್ತವಾಗಿರುವ ಜ್ಞಾನಕೋಶವನ್ನು ಹೊರ ಜಗತ್ತಿಗೆ ಪರಿಚಯಿಸುವ ಅಗೋಚರವಾದ ಸುಪ್ತಶಕ್ತಿಯನ್ನು ಬಡಿದೆಬ್ಬಿಸುವ ಒಂದು ವಿಶೇಷ ಶಕ್ತಿಯನ್ನು ಗುರು ಎಂದು ಕರೆಯಲಾಗುತ್ತದೆ. ಆ ಗುರುವನ್ನು ನಾವು ನಮ್ಮ ಶಿಕ್ಷಕರಲ್ಲಿ, ಸ್ನೇಹಿತರಲ್ಲಿ, ಅಣ್ಣ ತಮ್ಮಂದಿರಲ್ಲಿ, ಅಕ್ಕತಂಗಿಯರಲ್ಲಿ ಒಡನಾಡಿಗಳಲ್ಲಿ ಕಂಡುಕೊಳ್ಳಲೂಬಹುದು.
“ಅಜ್ಞಾನ” ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯ| ಚಕ್ಷರುನ್ಮೀಲತಂ ಯೇನ ತಸ್ಮೈ ಶ್ರೀ ಗುರುವೇ ನಮಃ”. ನಮ್ಮಲ್ಲಿನ ಅಜ್ಞಾನವೆಂಬ ಅಂಧಕಾರವನ್ನು ತಮ್ಮ ಜ್ಞಾನ ದೀವಿಗೆಯ ಮುಖಾಂತರ ತೊಲಗಿಸಿ, ನಮ್ಮ ಕಣ್ಣುತೆರೆಸಿ ಬದುಕಲು ದಾರಿ ಮತ್ತು ಗುರಿ ತೋರಿಸಿದ ಆ ಮಹಾನ್ ಗುರುವಿಗೆ ಸಾವಿರ ಪ್ರ್ರಣಾಮಗಳು. ಈ ಅಷಾಡ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಶುಭದಿನವಾದ ಗುರುಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯ ಶುಭಸಂದರ್ಭದಲ್ಲಿ ಎಲ್ಲಾ ಗುರುಹಿರಿಯರಿಗೆ, ಗುರು ಸಮಾನರಿಗೆ ಸುಖ, ಶಾಂತಿ, ನೆಮ್ಮದಿ ಆರೋಗ್ಯ ದೊರಕಲಿ ಎಂದು ತುಂಬು ಹೃದಯದಿಂದ ಹಾರೈಸೋಣ.
ಕೊನೆ ಮಾತು :
ವೇದವ್ಯಾಸರು ತಮ್ಮ ದೇಹವನ್ನು ತ್ಯಜಿಸುವ ಸಮಯದತ್ತ ಶಿಷ್ಯರು ಇವರನ್ನು ಇನ್ನು ಕಾಣಲು ಸಾಧ್ಯವಿಲ್ಲ ಎಂದು ದುಃಖಿಸುತ್ತಿರುವಾಗ ವೇದವ್ಯಾಸರು ಶಿಷ್ಯರನ್ನು ಕರೆದು ಶಿಷ್ಯರೇ, ನಾನು ಎಲ್ಲಾ ಜ್ಞಾನಿಗಳಲ್ಲಿ ನೆಲೆಸಿರುತ್ತೇನೆ. ನೀವು ಅವರನ್ನು ದರ್ಶಿಸಿ ಅರ್ಚಿಸಿದರೆ ನನ್ನನ್ನು ಪೂಜಿಸಿದಂತೆ ಆಗುತ್ತದೆ ಎಂದು ಸಮಾಧಾನಿಸಿದರು. ಈ ಕಾರಣದಿಂದಲೇ ವ್ಯಾಸಪೂರ್ಣಿಮೆಯಂದು ನಮಗೆಲ್ಲಾ ಪರಮ ಜ್ಞಾನವನ್ನು ನೀಡಿದ ಗುರುಗಳಿಗೆ ವಿಶೇಷವಾದ ಪೂಜೆ ಮಾಡುವ ವಾಡಿಕೆ ನಡೆದು ಬಂದಿದೆ. ಚುಡಾಮಣಿ ಗ್ರಂಥದಲ್ಲಿ ಗುರು ಆಚಾರ್ಯ ಪದದ ಬಗ್ಗೆ ಬಹಳ ಒಳ್ಳೆಯ ಧ್ಯಾನ ನೀಡಿದ್ದಾರೆ. ಪರಮ ತತ್ವವನ್ನು ಅರಿತು ನಿತ್ಯ ನಿರಂತರವಾಗಿ ಶಿಷ್ಯತನವನ್ನು ಬಯಸುವವರೇ ಗುರು ಎಂದು ವ್ಯಾಖ್ಯಾನಿಸಲಾಗಿದೆ. ಸ್ವಾರ್ಥ ತ್ಯಜಿಸಿ ಪರರ ಶ್ರೇಯಸ್ಸಿಗೆ ಸದಾ ಶ್ರಮಿಸುವವನೇ ನಿಜವಾದ ಗುರು ಎಂದು ಬಹಳ ಮಾರ್ಮಿಕವಾಗಿ ಗುರುಗಳ ಬಗ್ಗೆ ತಿಳಿಸಿದ್ದಾರೆ.
ಎಲ್ಲಾ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಧಾವಂತದ, ವೇಗದ ಬದುಕಿನ ಈ ಹೊತ್ತಿನಲ್ಲಿ, ಆಧುನಿಕತೆಯ ನೆಪದಲ್ಲಿ, ತತ್ವ ಮೌಲ್ಯಗಳು ಸಂಸ್ಕಾರಗಳು ವೇಗವಾಗಿ ಬದಲಾಗುತ್ತಿವೆ. ಜೀವನ ಶೈಲಿಯೂ ಬದಲಾಗುತ್ತಿದೆ. ಗುರು ಮತ್ತು ಶಿಷ್ಯರ ಸಂಬಂಧ ಹಳಸುತ್ತಿದೆ. ಹಿಂದಿನ ಕಾಲದಲ್ಲಿ ಇದ್ದ ಗುರುಕುಲ ಪದ್ಧತಿಯಂತೂ ನಿರ್ಣಾಮವಾಗಿ ಹೋಗಿದೆ.
ಗುರು ಶಿಷ್ಯರ ಸಂಬಂಧಕ್ಕೆ ಹೊಸ ಅರ್ಥವೇ ಬಂದಿದೆ. ಎಲ್ಲವೂ “ಮೌಲ್ಯಾಧಾರಿತ” ಸಂಬಂಧವಾಗಿ ಮಾರ್ಪಾಡಾಗಿದೆ. ಹಿಂದಿನ ಕಾಲದಲ್ಲಿ ಇರುತ್ತಿದ್ದ ಪ್ರೀತಿ, ಭಯ, ಭಕ್ತಿ, ಗೌರವಗಳು ಕೇವಲ ತೋರಿಕೆಯ ವಸ್ತುವಾಗಿ ಬದಲಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ನಮ್ಮನ್ನು ಪುನರ್ ವಿಮರ್ಷಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ಆದರೆ ಒಂದಂತೂ ಸತ್ಯ. ಸತ್ಯಕ್ಕೆಂದೂ ಸಾವಿಲ್ಲ. ಸತ್ಯವೇ ಪರಮ ಚಿರಂತನ. ನಾವು ನಂಬಿದ ತತ್ವ, ಮೌಲ್ಯ ಆಚಾರ, ವಿಚಾರ ಮಂಥನಗಳನ್ನು ಯಾವತ್ತೂ ಬಲಿಕೊಡದೆ ಗುರುವೇ ಸರ್ವಸ್ವ ಎಂದು ಪರಿಗಣಿಸುವುದಲ್ಲಿಯೇ ನಮ್ಮೆಲ್ಲರ ಒಳಿತು ಇದೆ. ನಮ್ಮ ಒಳಿತಿಗಾಗಿ ಚಿಂತಿಸುವ ಮಂಥಿಸುವ ಸರ್ವ ತ್ಯಾಗ ಮಾಡುವ ಗುರುಗಳು ನಮ್ಮ ಸಮಾಜದಲ್ಲಿ ಇನ್ನೂ ಇದ್ದಾರೆ. ಅಂತಹ ಗುರುವರೇಣ್ಯರಿಗೆ, ಪರಮ ಪೂಜ್ಯ ಗುರುಗಳಿಗೆ ಮತ್ತು ಗುರುಪರಂಪರೆಗೆ ನಮೋ ನಮಃ.
ಡಾ|| ಮುರಲೀ ಮೋಹನ್ ಚೂಂತಾರು
]]>
ಆದರೆ ಮತ್ತೊಂದೆಡೆ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 5ನೇ ಅಥವಾ 7ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರೀಕ್ಷಿಸುವ ಕುರಿತು ಪ್ರಸ್ತಾಪ ಬಂದಾಗ ಮಾತ್ರ ಅದನ್ನು ಮಕ್ಕಳ ಹಕ್ಕಿನ ಉಲ್ಲಂಘನೆ ಎಂದು ವಿರೋಧಿಸಲಾಗುತ್ತದೆ. ಈ ಎರಡು ನಿಲುವುಗಳ ನಡುವಿನ ವ್ಯತ್ಯಾಸವನ್ನು ಗಂಭೀರವಾಗಿ ಪರಿಶೀಲಿಸುವ ಸಮಯ ಬಂದಿದೆ. ಪ್ರವೇಶ ಪರೀಕ್ಷೆಯ ಉದ್ದೇಶ ಸೀಮಿತ ಆಸನಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು. ಆದರೆ ಕಲಿಕಾ ಮಟ್ಟದ ಮೌಲ್ಯಮಾಪನದ ಉದ್ದೇಶ ಮಕ್ಕಳನ್ನು ಹೊರಗಿಡುವುದಲ್ಲ; ಅವರು ನಿರೀಕ್ಷಿತ ಕಲಿಕಾ ಸಾಮರ್ಥ್ಯವನ್ನು ಗಳಿಸಿದ್ದಾರೆಯೇ ಎಂಬುದನ್ನು ತಿಳಿದು, ಅಗತ್ಯವಿದ್ದರೆ ಹೆಚ್ಚುವರಿ ಶೈಕ್ಷಣಿಕ ನೆರವು ಒದಗಿಸುವುದು.
ಒಬ್ಬ ವಿದ್ಯಾರ್ಥಿ 8ನೇ ತರಗತಿಗೆ ಬಂದಾಗಲೂ ಸರಿಯಾಗಿ ಓದಲು, ಬರೆಯಲು ಅಥವಾ ಮೂಲಭೂತ ಗಣಿತ ಮಾಡಲು ಸಾಧ್ಯವಾಗದಿದ್ದರೆ, ಅದು ಕೇವಲ ವಿದ್ಯಾರ್ಥಿಯ ವೈಫಲ್ಯವಲ್ಲ; ಅದು ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಮುಂದೆ ನಿಂತಿರುವ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ 5ನೇ ಅಥವಾ 7ನೇ ತರಗತಿಯಲ್ಲಿ ನಡೆಯುವ ಕಲಿಕಾ ಮೌಲ್ಯಮಾಪನವನ್ನು “ಪಾಸ್-ಫೇಲ್ ಪರೀಕ್ಷೆ” ಎಂದು ನೋಡುವ ಬದಲು, “ಶಿಕ್ಷಣದ ಗುಣಮಟ್ಟದ ಆರೋಗ್ಯ ತಪಾಸಣೆ” ಎಂದು ನೋಡಬೇಕಾಗಿದೆ.
ಇಂತಹ ಮೌಲ್ಯಮಾಪನದಿಂದ ಕೇವಲ ವಿದ್ಯಾರ್ಥಿಗಳ ಕಲಿಕೆಯ ಮಟ್ಟವೇ ತಿಳಿಯುವುದಲ್ಲ; ಪ್ರಾಥಮಿಕ ಶಾಲಾ ಶಿಕ್ಷಕರ ಬೋಧನಾ ಪರಿಣಾಮಕಾರಿತ್ವ, ತರಗತಿ ನಿರ್ವಹಣೆ ಮತ್ತು ಬೋಧನಾ ನೈಪುಣ್ಯತೆಯೂ ಪರೋಕ್ಷವಾಗಿ ಅಳೆಯಲ್ಪಡುತ್ತದೆ. ಉತ್ತಮ ಶಿಕ್ಷಕರಿಗೆ ಇದು ತಮ್ಮ ಶ್ರಮದ ಫಲಿತಾಂಶವನ್ನು ತೋರಿಸುವ ಅವಕಾಶವಾಗಬಹುದು; ಇನ್ನಷ್ಟು ಬೆಂಬಲ ಅಗತ್ಯವಿರುವ ಶಾಲೆಗಳಿಗೆ ಇದು ಸುಧಾರಣೆಯ ದಿಕ್ಕು ತೋರಿಸಬಹುದು. ಸರ್ಕಾರ ಪ್ರತಿ ವರ್ಷ ಶಿಕ್ಷಕರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡುತ್ತದೆ. FLN (Foundational Literacy and Numeracy), ಹೊಸ ಪಠ್ಯಕ್ರಮ, ಸಾಮರ್ಥ್ಯಾಧಾರಿತ ಶಿಕ್ಷಣ, ನಿರಂತರ ಮೌಲ್ಯಮಾಪನ, ಡಿಜಿಟಲ್ ಬೋಧನೆ, ಸಮಗ್ರ ಶಿಕ್ಷಣ – ಹೀಗೆ ಅನೇಕ ತರಬೇತಿಗಳಿಗೆ ಶಿಕ್ಷಕರು ಶಾಲಾ ಮಕ್ಕಳ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ. ಈ ತರಬೇತಿಗಳಿಗಾಗಿ ಶಿಕ್ಷಣ ಇಲಾಖೆಯೂ ಸಾಕಷ್ಟು ಮಾನವ ಸಂಪನ್ಮೂಲ, ಸಮಯ ಮತ್ತು ಸಾರ್ವಜನಿಕ ಹಣವನ್ನು ವೆಚ್ಚ ಮಾಡುತ್ತದೆ.
ಈ ತರಬೇತಿಗಳ ಪರಿಣಾಮ ಮಕ್ಕಳ ಕಲಿಕೆಯಲ್ಲಿ ಕಾಣಿಸುತ್ತಿದೆಯೇ?
ಶಿಕ್ಷಕರಿಗೆ ನೀಡಿದ ತರಬೇತಿಯ ಫಲವಾಗಿ ಮಕ್ಕಳ ಓದು, ಬರವಣಿಗೆ, ಗಣಿತ ಹಾಗೂ ಅರ್ಥೈಸುವ ಸಾಮರ್ಥ್ಯ ಹೆಚ್ಚಿದೆಯೇ? ಅಥವಾ ತರಬೇತಿ ಕೇವಲ ಹಾಜರಾತಿ ಮತ್ತು ಪ್ರಮಾಣಪತ್ರಕ್ಕೆ ಮಾತ್ರ ಸೀಮಿತವಾಗಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಯಾವುದಾದರೂ ವಸ್ತುನಿಷ್ಠ ಕಲಿಕಾ ಮೌಲ್ಯಮಾಪನ ಅಗತ್ಯ. ಅಂತಹ ಮೌಲ್ಯಮಾಪನವಿಲ್ಲದೆ ತರಬೇತಿಗಳ ಪರಿಣಾಮವನ್ನು ವೈಜ್ಞಾನಿಕವಾಗಿ ಅಳೆಯುವುದು ಕಷ್ಟ.
ಇಂತಹ ಪರೀಕ್ಷೆಗಳು ಇಲಾಖೆಗೂ ಕನ್ನಡಿಯಂತಾಗಬಹುದು. ಶಿಕ್ಷಣ ಇಲಾಖೆ ರೂಪಿಸುವ ನೀತಿಗಳು, ಪಠ್ಯಕ್ರಮಗಳು, ತರಬೇತಿಗಳು, ಮೇಲ್ವಿಚಾರಣೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ನಿಜವಾಗಿಯೂ ಮಕ್ಕಳಿಗೆ ತಲುಪುತ್ತಿವೆಯೇ ಎಂಬುದನ್ನು ತಿಳಿಯಲು ಇದು ಒಂದು ಪ್ರಮುಖ ಸೂಚ್ಯಂಕವಾಗಬಹುದು.
ಅದೇ ರೀತಿ, ಶಾಲಾ ಮುಖ್ಯಶಿಕ್ಷಕರು, ಬಿಇಒ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶೈಕ್ಷಣಿಕ ಸಂಯೋಜಕರು ಹಾಗೂ ಇತರ ಆಡಳಿತಾತ್ಮಕ ಹಂತಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹ ಇಂತಹ ಮಾಹಿತಿಯು ಸಹಕಾರಿಯಾಗುತ್ತದೆ. ಸಮಸ್ಯೆ ಎಲ್ಲಿದೆ ಎಂಬುದು ಸ್ಪಷ್ಟವಾದಾಗ ಮಾತ್ರ ಸೂಕ್ತ ಪರಿಹಾರವನ್ನು ರೂಪಿಸಲು ಸಾಧ್ಯ. ಆದರೆ ಒಂದು ಎಚ್ಚರಿಕೆ ಇರಬೇಕಾದದ್ದು, ಈ ಮೌಲ್ಯಮಾಪನವನ್ನು ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು, ಶಿಕ್ಷಕರನ್ನು ಅವಮಾನಿಸಲು ಅಥವಾ ಕೇವಲ ಶಿಕ್ಷಾತ್ಮಕ ಕ್ರಮಕ್ಕೆ ಬಳಸಬಾರದು. ಬದಲಾಗಿ ಇದು ಸುಧಾರಣೆ, ಬೆಂಬಲ ಮತ್ತು ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವ ಸಾಧನವಾಗಬೇಕು. ನವೋದಯ ಮತ್ತು ಇತರ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ವಿಫಲರಾದ ಮಕ್ಕಳಿಗೆ ಸಮಾಜ “ಇದು ಆಯ್ಕೆ ಪ್ರಕ್ರಿಯೆ” ಎಂದು ಹೇಳುತ್ತದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಮಟ್ಟವನ್ನೇ ಅಳೆಯಬಾರದು ಎನ್ನುವುದು ತಾರ್ಕಿಕವಾಗಿ ಪ್ರಶ್ನೆ ಹುಟ್ಟಿಸುತ್ತದೆ.
ಶಿಕ್ಷಣದ ಹಕ್ಕು ಎಂದರೆ ಕೇವಲ ಶಾಲೆಗೆ ದಾಖಲಾತಿ ಅಥವಾ ಮುಂದಿನ ತರಗತಿಗೆ ಬಡ್ತಿ ಅಲ್ಲ. ನಿಜವಾದ ಶಿಕ್ಷಣದ ಹಕ್ಕು ಎಂದರೆ ಪ್ರತಿಯೊಬ್ಬ ಮಗುವೂ ಗುಣಮಟ್ಟದ ಶಿಕ್ಷಣವನ್ನು ಪಡೆದು, ಓದಲು, ಬರೆಯಲು, ಅರ್ಥಮಾಡಿಕೊಳ್ಳಲು ಮತ್ತು ಆತ್ಮವಿಶ್ವಾಸದಿಂದ ಮುಂದಿನ ಹಂತದ ಶಿಕ್ಷಣಕ್ಕೆ ಸಿದ್ಧವಾಗುವುದು. ಆದ್ದರಿಂದ ಈಗ ನಡೆಯಬೇಕಾದ ಚರ್ಚೆ “ಮೌಲ್ಯಮಾಪನ ಇರಬೇಕೇ ಬೇಡವೇ?” ಎಂಬುದಲ್ಲ; “ಮೌಲ್ಯಮಾಪನವನ್ನು ಮಕ್ಕಳ ಹಿತಕ್ಕಾಗಿ, ಶಿಕ್ಷಕರ ವೃತ್ತಿಪರ ಬೆಳವಣಿಗೆಗಾಗಿ ಮತ್ತು ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸಲು ಹೇಗೆ ಬಳಸಬಹುದು?” ಎಂಬುದಾಗಿರಬೇಕು.
ಏಕೆಂದರೆ ಅಳೆಯಲಾಗದ ಗುಣಮಟ್ಟವನ್ನು ಸುಧಾರಿಸುವುದು ಕಷ್ಟ. ಮಕ್ಕಳ ಕಲಿಕೆಯನ್ನು ಪ್ರಾಮಾಣಿಕವಾಗಿ ಅಳೆಯುವ ಶಿಕ್ಷಣ ವ್ಯವಸ್ಥೆಯೇ ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲು ಸಾಧ್ಯ. ಇನ್ನಾದರೂ ಶಿಕ್ಷಣ ಇಲಾಖೆ ಪ್ರಾಮಾಣಿಕವಾಗಿ ಮಕ್ಕಳ ಗುಣಾತ್ಮಕ ಕಲಿಕೆಗೆ ಪ್ರಾಶಸ್ತ್ಯ ಕೊಡಬಹುದೇ?
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯು ಮಕ್ಕಳ ಕಲಿಕಾ ಗುಣಮಟ್ಟದ ಮಾಪನದ ಉದ್ದೇಶದಿಂದ ನಡೆಸುವ ಯಾವುದೇ ಪರೀಕ್ಷೆಗಳಿದ್ದರೂ ಅದಕ್ಕೆ ಪೂರ್ಣ ಬೆಂಬಲವನ್ನು ಕೊಡಲಿದೆ, ಯಾಕೆಂದರೆ ಈ ವಿರೋಧ ವ್ಯಕ್ತಪಡಿಸುವ ಮಕ್ಕಳ ಹಕ್ಕು, ಶಿಕ್ಷಣತಜ್ಞರುಗಳ ಮಕ್ಕಳೂ ಎಲ್ಲೂ ಅವರ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿದ ಉದಾಹರಣೆಯೇ ಇಲ್ಲ. ನಮ್ಮ ಮಕ್ಕಳ ಕಲಿಕೆಯ, ಬೆಳವಣಿಗೆಯ, ಸುರಕ್ಷತೆಯ ಜವಾಬ್ದಾರಿ ನಮಗೆ ಮಾತ್ರ ಇರಲಿ
ಮೊಯ್ದಿನ್ ಕುಟ್ಟಿ
ರಾಜ್ಯ ಸಂಚಾಲಕರು
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ.)
]]>
ಹಿರಿಯರು ಹೇಳುವಂತೆ, “ಮಳೆಗಾಲದ ಏಡಿ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಉತ್ತಮ”. ಆದರೆ ಇಂದಿನ ಕಾಲದಲ್ಲಿ ಒಂದು ಪ್ರಶ್ನೆ ಕೇಳುವುದು ಅಗತ್ಯ – ಏಡಿ ನಿಜವಾಗಿಯೂ ಆರೋಗ್ಯಕರವೇ? ಸಮುದ್ರದ ಏಡಿ ಮತ್ತು ಗದ್ದೆಯ ಕಾಡು ಏಡಿ ಒಂದೇನಾ? ಯಾವ ವಿಧಾನದಲ್ಲಿ ಬೇಯಿಸಿದರೆ ಅದರ ಪೌಷ್ಟಿಕಾಂಶ ಉಳಿಯುತ್ತದೆ? ಹೆಚ್ಚು ತಿಂದರೆ ಆರೋಗ್ಯಕ್ಕೆ ಹೆಚ್ಚು ಲಾಭವಾಗುತ್ತದೆಯೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಆಧುನಿಕ ಪೌಷ್ಟಿಕ ವಿಜ್ಞಾನ ಮತ್ತು ನಮ್ಮ ಸಾಂಪ್ರದಾಯಿಕ ಆಹಾರ ಜ್ಞಾನ ಎರಡೂ ಸೇರಿ ನೀಡುತ್ತವೆ.
ಏಡಿ – ಉತ್ತಮ ಗುಣಮಟ್ಟದ ಪ್ರೋಟೀನ್ ನ ನೈಸರ್ಗಿಕಮೂಲ
ಏಡಿ ಅತ್ಯುತ್ತಮ ಗುಣಮಟ್ಟದ ಪ್ರೋಟೀನ್ ಹೊಂದಿರುವ ಆಹಾರವಾಗಿದೆ. ಸುಮಾರು 100 ಗ್ರಾಂ ಬೇಯಿಸಿದ ಏಡಿಯಲ್ಲಿ 18–20 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಈ ಪ್ರೋಟೀನ ದೇಹದ ಸ್ನಾಯುಗಳ ಬೆಳವಣಿಗೆ, ಹಾನಿಗೊಳಗಾದ ಅಂಗಾಂಶಗಳ ಮರು ನಿರ್ಮಾಣ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ಹಾರ್ಮೋನ್ ಮತ್ತು ಎಂಜೈಮ್ಗಳ ಉತ್ಪಾದನೆ ಹಾಗೂ ಗಾಯಗಳು ಬೇಗ ಗುಣಮುಖವಾಗಲು ನೆರವಾಗುತ್ತದೆ. ಇದರಲ್ಲಿರುವ ಕೊಬ್ಬಿನ ಪ್ರಮಾಣ ಕಡಿಮೆ ಇರುವುದರಿಂದ ದೇಹದ ತೂಕ ನಿಯಂತ್ರಣ, ಮಧುಮೇಹ ಹಾಗೂ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗೆ ಮಿತ ಪ್ರಮಾಣದಲ್ಲಿ ಉತ್ತಮ ಆಹಾರವಾಗಿದೆ.
ಏಡಿಯಲ್ಲಿ ಅಡಗಿರುವ ಪೌಷ್ಟಿಕ ಸಂಪತ್ತು
ಏಡಿ ಕೇವಲ ಪ್ರೋಟೀನ್ ಮಾತ್ರವಲ್ಲ; ದೇಹಕ್ಕೆ ಅಗತ್ಯವಾದ ಹಲವು ಖನಿಜಾಂಶಗಳು ಮತ್ತು ಜೀವಸತ್ವಗಳ ಉತ್ತಮ ಮೂಲವಾಗಿದೆ.
ಸಮುದ್ರದ ಏಡಿಯಲ್ಲಿ ಒಮೆಗಾ–3 ಕೊಬ್ಬಿನಾಮ್ಲಗಳು ಇರುವುದರಿಂದ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೂ ಸಹಕಾರಿ. ಆದರೆ ಈ ಲಾಭಗಳು ಏಡಿಯನ್ನು ಅತಿಯಾದ ಎಣ್ಣೆಯಲ್ಲಿ ಕರಿದಾಗ ಗಣನೀಯವಾಗಿ ಕಡಿಮೆಯಾಗುತ್ತವೆ.
ಸಮುದ್ರದ ಏಡಿ ಮತ್ತು ಕಾಡು ಏಡಿ- ಯಾವುದು ಉತ್ತಮ?
ಮಳೆಗಾಲದಲ್ಲಿ ಗದ್ದೆಗಳಲ್ಲಿ ದೊರೆಯುವ ಕಾಡುಏಡಿ ಹಾಗೂ ಸಮುದ್ರದ ಏಡಿ ಎರಡೂ ಪೌಷ್ಟಿಕವಾಗಿದ್ದರೂ ಕೆಲವು ವ್ಯತ್ಯಾಸಗಳಿವೆ.
ಸಮುದ್ರದ ಏಡಿಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಮಾಂಸದ ಪ್ರಮಾಣ ಮತ್ತು ಒಮೆಗಾ–3 ಕೊಬ್ಬಿನಾಮ್ಲಗಳು ಹೆಚ್ಚು ಇರುತ್ತವೆ. ಗದ್ದೆಯ ಕಾಡು ಏಡಿಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಉತ್ತಮ ಗುಣಮಟ್ಟದ ಪ್ರೋಟೀನ್, ಕಬ್ಬಿಣ ಮತ್ತು ಇತರ ಖನಿಜಾಂಶಗಳನ್ನುಒದಗಿಸುತ್ತವೆ.
ಆದರೆ ಕಾಡುಏಡಿಗಳು ಕೃಷಿ ಪ್ರದೇಶಗಳಲ್ಲಿ ವಾಸಿಸುವುದರಿಂದ ಕೆಲವೊಮ್ಮೆ ಕಲುಷಿತ ನೀರು ಅಥವಾ ಕೃಷಿರಾಸಾಯನಿಕಗಳ ಸಂಪರ್ಕದಲ್ಲಿರಬಹುದು. ಆದ್ದರಿಂದ ಅವುಗಳನ್ನು ಚೆನ್ನಾಗಿ ತೊಳೆದು, ಸ್ವಚ್ಛಗೊಳಿಸಿ, ಸಂಪೂರ್ಣವಾಗಿ ಬೇಯಿಸಿ ಸೇವಿಸುವುದು ಅತ್ಯಗತ್ಯ.
ಮಳೆಗಾಲದಲ್ಲಿ ಏಡಿ ಏಕೆ ಹೆಚ್ಚು ಜನಪ್ರಿಯ?
ಮಳೆಗಾಲದಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿರ್ಬಂಧ ಇರುವುದರಿಂದ ತಾಜಾ ಸಮುದ್ರ ಮೀನುಗಳ ಲಭ್ಯತೆ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ ದೊರೆಯುವ ಕಾಡು ಏಡಿ ಸ್ಥಳೀಯ ಜನರಿಗೆ ಉತ್ತಮ ಪ್ರೋಟೀನ್ ಮೂಲವಾಗುತ್ತದೆ. ಇದು ನಮ್ಮ ಪೂರ್ವಜರ ಆಹಾರ ಜ್ಞಾನದ ಒಂದು ಉತ್ತಮ ಉದಾಹರಣೆಯಾಗಿದೆ. ಪ್ರಕೃತಿಯಲ್ಲಿ ಯಾವ ಋತುವಿನಲ್ಲಿ ಯಾವ ಆಹಾರ ದೊರೆಯುತ್ತದೆಯೋ, ಅದನ್ನು ಮಿತವಾಗಿ ಸೇವಿಸುವ ಪದ್ಧತಿ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಏಡಿಯನ್ನು ಯಾವ ರೀತಿಯಲ್ಲಿ ಬೇಯಿಸಿದರೆ ಆರೋಗ್ಯಕರ?
ಒಂದು ಆಹಾರದ ಪೌಷ್ಟಿಕ ಮೌಲ್ಯವನ್ನು ಅದು ಏನೆಂಬುದಷ್ಟೇ ಅಲ್ಲ, ಅದನ್ನು ಹೇಗೆ ಬೇಯಿಸುತ್ತೇವೆ ಎಂಬುದೂ ನಿರ್ಧರಿಸುತ್ತದೆ. ಪೌಷ್ಟಿಕ ತಜ್ಞರ ಪ್ರಕಾರ ಏಡಿಯನ್ನು ಈ ವಿಧಾನಗಳಲ್ಲಿ ತಯಾರಿಸುವುದು ಉತ್ತಮ:
ಇತ್ತೀಚಿನ ದಿನಗಳಲ್ಲಿ ಡೀಪ್ ಫ್ರೈ, ಹೆಚ್ಚು ಮಸಾಲೆ ಹಾಗೂ ಹೆಚ್ಚಿನ ಎಣ್ಣೆಯಲ್ಲಿ ತಯಾರಿಸಿದ ಏಡಿ ಖಾದ್ಯಗಳು ಜನಪ್ರಿಯವಾಗುತ್ತಿವೆ. ಇಂತಹ ವಿಧಾನಗಳಿಂದ ಏಡಿಯ ಮೂಲ ಪೌಷ್ಟಿಕ ಮೌಲ್ಯಕ್ಕಿಂತ ಎಣ್ಣೆ, ಉಪ್ಪು ಮತ್ತು ಹೆಚ್ಚುವರಿ ಕ್ಯಾಲೊರಿಗಳ ಸೇವನೆಯೇ ಹೆಚ್ಚಾಗುತ್ತದೆ. ಹೀಗಾಗಿ ಆರೋಗ್ಯಕರ ಆಹಾರವೂ ಅನಾರೋಗ್ಯಕರವಾಗುವ ಸಾಧ್ಯತೆ ಇದೆ.
ಹೆಚ್ಚು ತಿಂದರೆ ಹೆಚ್ಚು ಆರೋಗ್ಯವೇ?
ಮಳೆಗಾಲದಲ್ಲಿ ಒಂದೇ ದಿನದಲ್ಲಿ ಸಾಕಷ್ಟು ಏಡಿಗಳನ್ನು ಹಿಡಿದ ನಂತರ ಕೆಲವರು ಮಿತಿಮೀರಿದ ಪ್ರಮಾಣದಲ್ಲಿ ಸೇವಿಸುವುದು ಕಂಡುಬರುತ್ತದೆ. ಇದರ ಪರಿಣಾಮವಾಗಿ ಅಜೀರ್ಣ, ಹೊಟ್ಟೆಉಬ್ಬರ, ಹೊಟ್ಟೆನೋವು, ವಾಂತಿ ಅಥವಾ ಅತಿಸಾರ ಕಾಣಿಸಿಕೊಳ್ಳಬಹುದು. ಆಗ “ಏಡಿ ನನಗೆ ಆಗುವುದಿಲ್ಲ” ಅಥವಾ “ಏಡಿ ಆರೋಗ್ಯಕ್ಕೆ ಒಳ್ಳೆಯದಲ್ಲ” ಎಂಬ ತಪ್ಪು ಕಲ್ಪನೆ ಮೂಡುತ್ತದೆ. ವಾಸ್ತವವಾಗಿ ಸಮಸ್ಯೆ ಏಡಿಯಲ್ಲ; ಮಿತಿಮೀರಿದ ಸೇವನೆ, ಅತಿಯಾದ ಮಸಾಲೆ, ಹೆಚ್ಚಿನ ಎಣ್ಣೆ ಹಾಗೂ ಸರಿಯಾದ ಸ್ವಚ್ಛತೆಯ ಕೊರತೆಯೇ ಮುಖ್ಯ ಕಾರಣ. ಯಾವುದೇ ಪೌಷ್ಟಿಕ ಆಹಾರವೂ ಮಿತಿಯಲ್ಲಿ ಸೇವಿಸಿದಾಗ ಮಾತ್ರ ಆರೋಗ್ಯಕ್ಕೆ ಲಾಭಕರ.
ಯಾರು ಎಚ್ಚರಿಕೆಯಿಂದ ಇರಬೇಕು?
ಈ ಕೆಳಗಿನವರು ಏಡಿ ಸೇವಿಸುವ ಮೊದಲು ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆಯುವುದು ಸೂಕ್ತ:
ಪ್ರಕೃತಿಯ ಸಮತೋಲನ ಕಾಪಾಡೋಣ
ಏಡಿ ಹಿಡಿಯುವುದು ನಮ್ಮ ಗ್ರಾಮೀಣ ಜೀವನದ ಒಂದು ಸುಂದರ ಸಂಪ್ರದಾಯ. ಆದರೆ ಪರಿಸರದ ಸಮತೋಲನವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಮೊಟ್ಟೆ ಹೊತ್ತಿರುವ ಹೆಣ್ಣು ಏಡಿಗಳನ್ನು ಹಾಗೂ ಅತಿಚಿಕ್ಕ ಏಡಿಗಳನ್ನು ಹಿಡಿಯುವುದನ್ನು ತಪ್ಪಿಸಬೇಕು. ಏಡಿಗಳು ಮಣ್ಣಿನಲ್ಲಿ ಸುರಂಗಗಳನ್ನು ನಿರ್ಮಿಸುವ ಮೂಲಕ ಮಣ್ಣಿನ ಗಾಳಿಯಾಡುವಿಕೆಯನ್ನು ಸುಧಾರಿಸುತ್ತವೆ ಹಾಗೂ ಪರಿಸರದ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ಜವಾಬ್ದಾರಿಯುತ ಏಡಿ ಬೇಟೆ ನಮ್ಮ ಪ್ರಕೃತಿಯನ್ನು ಸಂರಕ್ಷಿಸುವ ಮಾರ್ಗವೂ ಆಗಿದೆ.
ಕೊನೆಯಮಾತು
ಮಳೆಗಾಲದ ಏಡಿ ಕೇವಲ ಋತುಮಾನದ ರುಚಿಕರ ಆಹಾರವಲ್ಲ; ಅದು ನಮ್ಮ ಕರಾವಳಿಯ ಸಂಸ್ಕೃತಿ, ಪ್ರಕೃತಿ ಮತ್ತು ಪೌಷ್ಟಿಕತೆಯ ಸಂಗಮವಾಗಿದೆ. ಉತ್ತಮ ಗುಣಮಟ್ಟದ ಪ್ರೋಟೀನ್, ಖನಿಜಾಂಶಗಳು ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಈ ಆಹಾರವನ್ನು ತಾಜಾಸ್ಥಿತಿಯಲ್ಲಿ ಆಯ್ಕೆಮಾಡಿ, ಸ್ವಚ್ಛವಾ ಗಿತೊಳೆದು, ಸಂಪೂರ್ಣವಾಗಿ ಬೇಯಿಸಿ, ಕಡಿಮೆ ಎಣ್ಣೆಯಲ್ಲಿ ತಯಾರಿಸಿ ಮತ್ತು ಮಿತ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಅದರ ನಿಜವಾದ ಆರೋಗ್ಯ ಲಾಭವನ್ನು ಪಡೆಯಬಹುದು. ನಮ್ಮ ಹಿರಿಯರು ಹೇಳುತ್ತಿದ್ದ ಒಂದು ಮಾತು ಇಂದಿಗೂ ಪ್ರಸ್ತುತವಾಗಿದೆ – “ಆಹಾರವೇ ಔಷಧಿಯಾಗಬೇಕಾದರೆ ಅದನ್ನು ಸರಿಯಾದ ರೀತಿಯಲ್ಲಿ ಮತ್ತು ಮಿತಿಯಲ್ಲಿ ಸೇವಿಸಬೇಕು. “ಈ ಮಳೆಗಾಲದಲ್ಲಿ ಏಡಿಯ ರುಚಿಯನ್ನು ಸವಿಯಿರಿ. ಆದರೆ ಅದರೊಂದಿಗೆ ಪ್ರಕೃತಿಯನ್ನು ಗೌರವಿಸಿ, ಆಹಾರ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ. ಏಕೆಂದರೆ ಉತ್ತಮ ಆರೋಗ್ಯದ ಆರಂಭದು ಬಾರಿ ಔಷಧಿಗಳಿಂದಲ್ಲ; ನಮ್ಮ ಮನೆಯ ಅಡುಗೆ, ಸ್ಥಳೀಯ ಆಹಾರ ಮತ್ತು ಜವಾಬ್ದಾರಿಯುತ ಆಹಾರ ಆಯ್ಕೆಗಳಿಂದಲೇ ಆಗುತ್ತದೆ.
ಡಾ. ಅಜಿತ್ ಕೆ. ಕೋಡಿಂಬಾಳ
ಪ್ರಾಧ್ಯಾಪಕರು, ಆಹಾರ ಮತ್ತು ಪೌಷ್ಟಿಕ ತಜ್ಞರು
ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗ ಯೆನೆಪೋಯ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಹಾಗೂ ಆಸ್ಪತ್ರೆ ಯೆನೆಪೋಯ (ಡೀಮ್ಡ್ 2ಬಿ ವಿಶ್ವವಿದ್ಯಾಲಯ), ಮಂಗಳೂರು
ಬೀಟ್ರೂಟ್ನ ಆರೋಗ್ಯಕರ ಗುಣಗಳ ಬಗ್ಗೆ ಇನ್ನಷ್ಟು ವಿವರವಾದ ಮಾಹಿತಿ ಇಲ್ಲಿದೆ:
1. ರಕ್ತದೊತ್ತಡ ಮತ್ತು ಹೃದಯದ ಆರೋಗ್ಯ
ಬೀಟ್ರೂಟ್ನಲ್ಲಿರುವ ನೈಸರ್ಗಿಕ ನೈಟ್ರೇಟ್ಗಳು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ (Nitric Oxide) ಆಗಿ ಪರಿವರ್ತನೆಯಾಗುತ್ತವೆ. ಇದು ರಕ್ತನಾಳಗಳನ್ನು ವಿಸ್ತರಿಸಲು (Vasodilation) ಸಹಾಯ ಮಾಡುತ್ತದೆ.
ಪ್ರಯೋಜನ: ರಕ್ತನಾಳಗಳು ಸಡಿಲವಾದಾಗ, ರಕ್ತದ ಹರಿವು ಸುಗಮವಾಗುತ್ತದೆ ಮತ್ತು ಹೃದಯವು ರಕ್ತವನ್ನು ಪಂಪ್ ಮಾಡಲು ಕಡಿಮೆ ಶ್ರಮಪಡಬೇಕಾಗುತ್ತದೆ. ಇದು ಅಧಿಕ ರಕ್ತದೊತ್ತಡವನ್ನು (Hypertension) ಕಡಿಮೆ ಮಾಡಲು ನೈಸರ್ಗಿಕವಾಗಿ ಸಹಾಯ ಮಾಡುತ್ತದೆ.
2. ದೈಹಿಕ ಸಾಮರ್ಥ್ಯ ಮತ್ತು ಆಮ್ಲಜನಕದ ಹರಿವು
ಕ್ರೀಡಾಪಟುಗಳು ಮತ್ತು ವ್ಯಾಯಾಮ ಮಾಡುವವರು ಬೀಟ್ ರೂಟ್ ಜ್ಯೂಸ್ ಕುಡಿಯಲು ಇದು ಮುಖ್ಯ ಕಾರಣ.
ಪ್ರಯೋಜನ: ನೈಟ್ರಿಕ್ ಆಕ್ಸೈಡ್ ಸ್ನಾಯುಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಇದು ವ್ಯಾಯಾಮದ ಸಮಯದಲ್ಲಿ ಆಯಾಸವನ್ನು ವಿಳಂಬಗೊಳಿಸುತ್ತದೆ ಮತ್ತು ದೈಹಿಕ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.
3. ಯಕೃತ್ತಿನ ನಿರ್ವಿಷೀಕರಣ
ಯಕೃತ್ತು ನಮ್ಮ ದೇಹದ ಫಿಲ್ಟರ್ನಂತೆ ಕೆಲಸ ಮಾಡುತ್ತದೆ.
ಪ್ರಯೋಜನ: ಬೀಟ್ರೂಟ್ನಲ್ಲಿರುವ ಬೆಟೈನ್ (Betaine) ಎಂಬ ಅಂಶವು ಯಕೃತ್ತಿನ ಕೋಶಗಳನ್ನು ವಿಷಕಾರಿ ವಸ್ತುಗಳಿಂದ ರಕ್ಷಿಸುತ್ತದೆ. ಇದು ಯಕೃತ್ತಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
4. ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ (Digestive Health)
ಬೀಟ್ರೂಟ್ ನಾರಿನಂಶದ ಉತ್ತಮ ಮೂಲವಾಗಿದೆ.
ಪ್ರಯೋಜನ: ನಾರಿನಂಶವು ಮಲಬದ್ಧತೆಯನ್ನು ತಡೆಯಲು ಮತ್ತು ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಕರುಳಿನ ಆರೋಗ್ಯಕ್ಕೆ ಅವಶ್ಯಕವಾದ ‘ಪ್ರೀಬಯಾಟಿಕ್’ ಆಗಿ ಕೆಲಸ ಮಾಡಿ, ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳನ್ನು ಬೆಳೆಸುತ್ತದೆ.
5. ಚರ್ಮದ ಆರೋಗ್ಯ ಮತ್ತು ಕಾಂತಿ (Skin Health)
ಬೀಟ್ ರೂಟ್ ನಲ್ಲಿರುವ ಆಂಟಿ-ಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಸಿ ಚರ್ಮದ ಮೇಲೆ ಅದ್ಭುತ ಪರಿಣಾಮ ಬೀರುತ್ತವೆ.
ಪ್ರಯೋಜನ: ಇದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುವುದರಿಂದ ಮುಖದಲ್ಲಿ ಮೊಡವೆಗಳು ಕಡಿಮೆಯಾಗಿ, ಚರ್ಮಕ್ಕೆ ನೈಸರ್ಗಿಕ ಕಾಂತಿ ಬರುತ್ತದೆ. ಇದು ಉರಿಯೂತವನ್ನು (Anti-inflammatory) ತಗ್ಗಿಸುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಹೆಚ್ಚುವರಿ ಪ್ರಮುಖ ಮಾಹಿತಿ:
ಆಂಟಿ-ಆಕ್ಸಿಡೆಂಟ್ಗಳು (Betalains): ಬೀಟ್ರೂಟ್ನ ಗಾಢ ಬಣ್ಣಕ್ಕೆ ಕಾರಣವಾದ ‘ಬೆಟಾಲೈನ್ಸ್’ ಎಂಬ ವರ್ಣದ್ರವ್ಯವು ಅತ್ಯಂತ ಶಕ್ತಿಶಾಲಿ ಆಂಟಿ-ಆಕ್ಸಿಡೆಂಟ್ ಆಗಿದೆ. ಇದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ತಗ್ಗಿಸುತ್ತದೆ.
ಪೌಷ್ಟಿಕಾಂಶದ ಮೌಲ್ಯ: ಇದರಲ್ಲಿ ಫೋಲೇಟ್ (ವಿಟಮಿನ್ B9), ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಕಬ್ಬಿಣದ ಅಂಶಗಳು ಸಮೃದ್ಧವಾಗಿವೆ.
ಗಮನಿಸಬೇಕಾದ ಅಂಶಗಳು (ಮುನ್ನೆಚ್ಚರಿಕೆ):
ಬೀಟೂರಿಯಾ (Beeturia): ಬೀಟ್ರೂಟ್ ತಿಂದ ನಂತರ ಮೂತ್ರ ಅಥವಾ ಮಲದ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಬಹುದು. ಇದು ಸಂಪೂರ್ಣವಾಗಿ ಸಾಮಾನ್ಯ ಮತ್ತು ಅಪಾಯಕಾರಿಯಲ್ಲ.
ಕಿಡ್ನಿ ಕಲ್ಲುಗಳು: ಬೀಟ್ರೂಟ್ನಲ್ಲಿ ಆಕ್ಸಲೇಟ್ಗಳು (Oxalates) ಹೆಚ್ಚಿರುವುದರಿಂದ, ಕಿಡ್ನಿ ಕಲ್ಲುಗಳ ಸಮಸ್ಯೆ ಇರುವವರು ಇದನ್ನು ಮಿತವಾಗಿ ಸೇವಿಸಬೇಕು ಅಥವಾ ವೈದ್ಯರ ಸಲಹೆ ಪಡೆಯಬೇಕು.
ಅಧಿಕ ರಕ್ತದೊತ್ತಡ ಔಷಧಿ: ನೀವು ಈಗಾಗಲೇ ಅಧಿಕ ರಕ್ತದೊತ್ತಡಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರೊಂದಿಗೆ ಚರ್ಚಿಸಿ, ಏಕೆಂದರೆ ಬೀಟ್ರೂಟ್ ರಕ್ತದೊತ್ತಡವನ್ನು ಮತ್ತಷ್ಟು ಇಳಿಸುವ ಸಾಧ್ಯತೆ ಇರುತ್ತದೆ.
ಸಲಹೆ: ಬೀಟ್ರೂಟ್ನ ಪೂರ್ಣ ಲಾಭ ಪಡೆಯಲು ಅದನ್ನು ಬೇಯಿಸಿ ತಿನ್ನುವುದಕ್ಕಿಂತಲೂ, ಹಸಿ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸುವುದು ಹೆಚ್ಚು ಪರಿಣಾಮಕಾರಿ
]]>ಇವರ ಸವಿನೆನಪಿಗಾಗಿ ಈ ದಿನವನ್ನು ವೈದ್ಯರ ದಿನ ಎಂದು ಆಚರಿಸುತ್ತೇವೆ. ಈ ದಿನದಂದು ಭಾರತದ ಎಲ್ಲಾ ವೈದ್ಯ ಭಾಂದವರು ಸಮಾಜದ ಬಡತನ ರೇಖೆಗಿಂತ ಕೆಳಗಿರುವ ಮನುಸಂಕುಲದ ಉದ್ಧಾರಕ್ಕಾಗಿ ಪ್ರತಿಜ್ಞೆ ಮಾಡುತ್ತಾರೆ. ಬಿಹಾರದ ಪಾಟ್ನಾದಲ್ಲಿ ಜನಿಸಿದ ಬಿ.ಸಿ.ರಾಯ್ ಅವರು ಕಲ್ಕತ್ತದಲ್ಲಿ ಎಂ.ಬಿ.ಬಿ.ಎಸ್. ಶಿಕ್ಷಣ ಮುಗಿಸಿದರು. ಅವರ ಜ್ಞಾನ ಸಂಪತ್ತಿಗೆ, ಅವರ ಅನುಭವಕ್ಕೆ ಯೋಗ್ಯತೆಗೆ ಇಂಗ್ಲೆಂಡ್ನ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಸಿಗುತ್ತಿತ್ತು. ಆದರೆ ತಾಯಿ ನಾಡಿನ ವ್ಯಾಮೋಹ ಅವರನ್ನು ಬಿಡಲಿಲ್ಲ. 1911 ರಲ್ಲಿ ಭಾರತಕ್ಕೆ ಬಂದು ನಮ್ಮ ದೇಶದ ಬಡಜನರ ಉದ್ದಾರಕ್ಕಾಗಿ ಟೊಂಕ ಕಟ್ಟಿ ನಿಂತರು. ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಾಗಿ ಸಾವಿರಾರು ಮಂದಿ ಯುವ ವೈದ್ಯರಿಗೆ ಆದರ್ಶ ಪ್ರಿಯರಾದರು. ಇವತ್ತಿಗೂ ಅವರಿಂದ ಕಲಿತ ನೂರಾರು ವೈದ್ಯರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಮಿನುಗುತ್ತಿದ್ದಾರೆ. ಅವರು ತಮ್ಮ ಪ್ರತಿ ರೋಗಿಗಳಲ್ಲಿ ದೇವರನ್ನು ಕಾಣುತ್ತಿದ್ದರು.
“Poor are my patients, God pays for them” ಎಂಬ ಉಕ್ತಿಯನ್ನು ತಮ್ಮ ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿದ ವ್ಯಕ್ತಿ ಬಿ.ಸಿ. ರಾಯ್ ಎಂದರೆ ಅತಿಶಯೋಕ್ತಿಯಲ್ಲ. ತಾವು ನಂಬಿದ ತತ್ವ, ಆದರ್ಶ ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನು ಪ್ರಾಮಾಣಿಕವಾಗಿ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆಯೇ ನಡೆದರು. ಸ್ವಾತಂತ್ಯ ಬಳಿಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪದವಿ ಏರಿ ತಮ್ಮ ಪದವಿಯ ಗೌರವವನ್ನು ಇಮ್ಮಡಿಗೊಳಿಸಿದರು. ಹಲವಾರು ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ಕಟ್ಟಿಸಿ ಬಡ ವಿದ್ಯಾರ್ಥಿಗಳಿಗೆ ಬಡ ರೋಗಿಗಳಿಗೆ ಆಶಾಕಿರಣವಾದರು.
ಹೀಗೆ ವೈದ್ಯಕೀಯ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡು, ಗಾಂಧೀಜಿ ಕನಸು ಕಂಡ ರಾಮರಾಜ್ಯದ ಸ್ಥಾಪನೆಗೆ ತಮ್ಮ ಜೀವನವನ್ನು ಮುಡಿಪಾಗಿಸಿದರು. ಸುಮಾರು 80 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿ 1962 ಜುಲೈ ಒಂದರಂದು ಕೀರ್ತಿಶೇಷರಾದರು.
ಭಾರತ ಸರಕಾರ ರಾಯ್ ಅವರ ಸೇವೆಯನ್ನು ಗುರುತಿಸಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ 1976ರಿಂದ ಬಿ.ಸಿ.ರಾಯ್ ಪ್ರಶಸ್ತಿ ನೀಡಲು ಆರಂಭಿಸಿತ್ತು. ಇದು ಈ ಮಹಾವ್ಯಕ್ತಿಯ ಮಾನವೀಯ ಸೇವೆಗೆ ನೀಡಿದ ಕಿಂಚಿತ್ ಕಿರು ಕಾಣಿಕೆ ಎಂದರೂ ತಪ್ಪಲ್ಲ. ನಮಗೆ ಸ್ವಾತಂತ್ರ್ಯ ಲಭಿಸಿ 78ಕ್ಕೂ ಹೆಚ್ಚು ವರ್ಷಗಳು ಕಳೆದಿದೆ. ಗಂಗೆ, ಯಮುನೆ, ಕಾವೇರಿ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಕಾಲ ಬದಲಾದಂತೆ ನಮ್ಮ ಜೀವನಶೈಲಿ, ಆದರ್ಶಗಳೂ ಬದಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತವಾದ ಕ್ರಾಂತಿಗಳು, ಆವಿಷ್ಕಾರಗಳು ನಡೆದಿದೆ. ಹೊಸ ಹೊಸ ರೋಗಗಳು ಹೊಸ ಹೊಸ ಔಷಧಿಗಳಾಗಿ ಹುಟ್ಟಿಕೊಂಡಿವೆ. ಇನ್ನೊಂದೆಡೆ ರೋಗಿ ಮತ್ತು ವೈದ್ಯರ ನಡುವಿನ ಭಾವಾನಾತ್ಮಕ ಸಂಬಂಧಗಳು ಶಿಥಿಲವಾಗುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾದನೀಯ ವಿಚಾರ. ವೈದ್ಯ ಶಿಕ್ಷಣವಿರಲಿ, ವೈದ್ಯಕೀಯ ವೃತ್ತಿಯಿರಲಿ, ಸಂಶೋಧನೆಗಳೇ ಇರಲಿ ಎಲ್ಲಾ ಕಡೆಯೂ ಧನ ಬಲವೇ ವಿಜೃಂಭಿಸುತ್ತಿದೆ. ಪ್ರತಿಭೆ, ಪ್ರಾಮಾಣಿಕ ಪರಿಶ್ರಮಗಳಿಗೆ ಕಿಂಚಿತ್ತೂ ಬೆಲೆ ಸಿಗುತ್ತಿಲ್ಲ. ಇದು ಸುಂದರ, ಸುದೃಷ್ಟ ಸ್ವಸ್ಥ ಸಮಾಜಕ್ಕೆ ಖಂಡಿತ ಮಾರಕವಾಗಬಹುದು. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜನತೆ, ಸಂಘ-ಸಂಸ್ಥೆಗಳು ಮತ್ತು ಸರಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ಅರ್ಹ ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ದೊರೆತು, ಆರೋಗ್ಯ ಕ್ಷೇತ್ರದಲ್ಲಿ ತೀವ್ರತರವಾದ ಸಂಶೋಧನೆಗಳು ನಡೆಯಬೇಕು. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ರೋಗಗಳಿಗೂ ಮತ್ತು ತಲೆತಲಾಂತರಗಳಿಂದ ಬಾಧಿಸುತ್ತಿರುವ ರೋಗಗಳಿಗೂ ಕಡಿವಾಣ ಹಾಕಬೇಕು. ಔಷಧ, ಶುಶ್ರೂಷೆ ಮತ್ತು ಎಲ್ಲ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಬಡಜನರ ಮನೆ ಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿಕೊಂಡು ವೈದ್ಯರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಬೇಕು. ಕೊನೆಯದಾಗಿ ರೋಗಿಗಳಿಗೂ ಒಂದೆರಡು ಕಿವಿಮಾತು. ದಯವಿಟ್ಟು ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ನಿಮ್ಮ ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ವೈದ್ಯರೂ ಕೂಡ ನಿಮ್ಮಂತೆಯೇ ಇರುವ ಇನ್ನೊಂದು ಜೀವ. ಅವರಿಗೆ ಆಸೆ, ಆಕಾಂಕ್ಷೆಗಳು, ವೈಯಕ್ತಿಕ ಸಮಸ್ಯೆಗಳು ಭಾವನೆಗಳು ಇರುತ್ತವೆ. ಅವರ ಭಾವನೆಗಳಿಗೆ, ನೋವುಗಳಿಗೂ ರೋಗಿಗಳು ಸ್ಪಂದಿಸಬೇಕು. ಹಾಗಿದ್ದಲ್ಲಿ ಮಾತ್ರ ವೈದ್ಯ-ರೋಗಿಗಳ ನಡುವೆ ಸುಮಧುರ ಬಾಂಧವ್ಯ ಬೆಳೆದು ಸ್ಪಷ್ಟ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ನೆನೆಪಿಡಿ, ಈಗಿರುವ ಕಾಲಘಟ್ಟದಲ್ಲಿ ರೋಗಿಗಳು ವೈದ್ಯರಿಲ್ಲದೆ ಬದುಕಬಹುದು. ಆದರೆ ವೈದ್ಯರು ರೋಗಿಗಳಿಲ್ಲದೆ ಬದುಕುವುದು ಅಸಾಧ್ಯ ಎಂಬ ಮಾತು ಬಂದರೆ ಅತಿಶಯೋಕ್ತಿಯಲ್ಲ.
ರೋಗಿಗಳು ಕೂಡಾ ವೈದ್ಯರಿಗೆ ರೋಗದ ಬಗ್ಗೆ ಸಂಪೂರ್ಣ ಪರಾಮರ್ಶೆ ಮಾಡಲು ಕಾಲಾವಕಾಶ ನೀಡಬೇಕು. ದಿನ ಬೆಳಗಾಗುವುದರೊಳಗೆ ಕಾಯಿಲೆ ವಾಸಿಯಾಗಬೇಕು ಎಂದು ವೈದ್ಯರ ಮೇಲೆ ಅನಗತ್ಯ ಒತ್ತಡ ಹಾಕಬೇಡಿ. ಅನಗತ್ಯ ಪ್ರಶ್ನೆಗಳನ್ನು ಕೇಳಿ ಅಂತರ್ ಜಾಲದ ಮಾಹಿತಿಯನ್ನು ವೈದ್ಯರ ಬಳಿ ತಿಳಿಸಿ ತಮ್ಮ ಅಲ್ಪ ಸ್ವಲ್ಪ ಜ್ಞಾನದಿಂದ ವೈದ್ಯರ ದಾರಿ ಕೆಡಿಸಬೇಡಿ. ಸುಮಾರು ಪ್ರತಿಶತ ಮೂವತ್ತರಷ್ಟು ರೋಗ ವೈದ್ಯರ ಮೇಲಿನ ನಂಬಿಕೆಯ ತಳಹದಿಯಲ್ಲೇ ಗುಣವಾಗುತ್ತದೆ. ನೆನಪಿರಲಿ, ದೇಹದ ರೋಗವನ್ನು ವೈದ್ಯರು ಗುಣಪಡಿಸಬಹುದು ಆದರೆ ಮನಸ್ಸಿನ ರೋಗವನ್ನು ಗುಣಪಡಿಸಲು ವೈದ್ಯರಿಗೆ ಅಸಾಧ್ಯ ಎನ್ನುವುದನ್ನು ಅರಿತುಕೊಂಡಲ್ಲಿ ಎಲ್ಲ ವೈದ್ಯರ ಕೆಲಸ ಸರಳವಾಗುವುದರಲ್ಲಿ ಎರಡು ಮಾತಿಲ್ಲ. ವೈದ್ಯರೂ ಆತ್ಮ ವಿಮರ್ಶೆ ಮಾಡಿಕೊಂಡು ತಮ್ಮ ವೈದ್ಯಕೀಯ ವೃತ್ತಿಯನ್ನು ಪಾಲಿಸಿದಲ್ಲಿ ಸುಂದರ ಸದೃಢ ಸಮಾಜ ನಿರ್ಮಾಣವಾಗಬಹುದು. ಅದುವೇ ನಾವು ಬಿ.ಸಿ. ರಾಯ್ ಎಂಬ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಲ್ಲ. ಎಲ್ಲ ವೈದ್ಯಬಾಂಧವರಿಗೂ ಸುಖ, ಸಂತಸ, ನೆಮ್ಮದಿ ಸಿಗಲಿ ಎಂದು ತುಂಬು ಹೃದಯದಿಂದ ಹಾರೈಸೋಣ.
ಏನಿದು ಆರೋಗ್ಯ ?
ಆರೋಗ್ಯ ಎಂದರೇನು ಎಂಬುದು ಬಹುತೇಕ ಜನರಿಗೆ ಇನ್ನು ತಿಳಿದಿಲ್ಲ. ರೋಗವಿಲ್ಲದಿರುವುದೇ ಆರೋಗ್ಯ (Health is absense of disease) ಎಂಬುದಾಗಿ ಬಹುತೇಕ ಮಂದಿ ತಪ್ಪು ತಿಳುವಳಿಕೆ ಹೊಂದಿದ್ದಾರೆ. ನಮ್ಮ ಈಗಿನ ಜೀವನ ಶೈಲಿ, ಆಹಾರ ಪದ್ಧತಿ, ಕೆಲಸದ ವಾತಾವರಣಗಳಿಂದಾಗಿ ರೋಗವಿಲ್ಲದ ಮನುಷ್ಯನನ್ನು ದುರ್ಬೀನು ಹಾಕಿ ಹುಡುಕಿದರೂ ದೊರಕಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಕೆಟ್ಟ ಜೀವನ ಶೈಲಿಯ ರೋಗಗಳಾದ ಮಧುಮೇಹ, ರಕ್ತದೊತ್ತಡ, ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನುವುದು ಜಾಗತಿಕ ಸತ್ಯ. ಭಾರತದ ಮೆಟ್ರೊ ನಗರಗಳಾದ ಡೆಲ್ಲಿ, ಬೆಂಗಳೂರು, ಕಲ್ಕತ್ತಾ, ಮದ್ರಾಸ್, ಬಾಂಬೆಗಳಲ್ಲಿ ಪ್ರತಿ ಐವರಲ್ಲಿ ಒಬ್ಬರಿಗೆ ಮಧುಮೇಹ, ಪ್ರತಿ ಏಳರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಮತ್ತು ಪ್ರತಿ ಹತ್ತರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇಂತಹಾ ಪರಿಸ್ಥಿತಿಯಲ್ಲಿ ನಮಗೆ ಪರಿಪೂರ್ಣ ಆರೋಗ್ಯವಂತ ವ್ಯಕ್ತಿ ಸಿಗುವುದು ಅಪರೂಪವೇ. ಈ ಕಾರಣದಿಂದಲೇ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಎಂದರೆ ಕೆಲಸ ಮಾಡುವ ಹುರುಪು (Enthusiasm to work) ಎಂಬುದಾಗಿ ಬದಲಿಸಬೇಕು ಎಂದು ಎಲ್ಲೆಡೆ ಕೇಳಿ ಬರುತ್ತಿದೆ. ಯಾಕೆಂದರೆ ಬೆಳಗೆದ್ದು ದಿನನಿತ್ಯದ ಕೆಲಸ ಮಾಡುವ ಹುರುಪು ಇದ್ದಲ್ಲಿ ಆತ ನಿರೋಗಿ ಎಂದು ತಿಳಿಯಬಹುದು. ದೇಹಕ್ಕೆ ರೋಗವಿದ್ದರೂ ಮನಸ್ಸು ಉಲ್ಲಸಿತವಾಗಿದ್ದಲ್ಲಿ ಆತ ನಿರೋಗಿ ಎಂದು ತಿಳಿಯಬೇಕು ಎಂಬ ವಾದವನ್ನು ತಳ್ಳಿ ಹಾಕುವಂತಿಲ್ಲ. ಈ ಕಾರಣಕ್ಕಾಗಿಯೇ ದಲೈಲಾಮ ಅವರು ಹೇಳಿದ ಮಾತು Happiness is the highest form of health ಅಂದರೆ ಸಂತಸವೇ ಆರೋಗ್ಯದ ಪರಮಾವಧಿ ಎಂಬ ಮಾತು ನೂರಕ್ಕೆ ನೂರು ಸತ್ಯ. ಈ ನಿಟ್ಟಿನಲ್ಲಿ ದೇಹಕ್ಕೆ ರೋಗವಿದ್ದರೂ ಮನಸ್ಸು ಉಲ್ಲಸಿತವಾಗಿ, ರೋಗಿ ಯಾವತ್ತೂ ಸಂತಸವಾಗಿರುವಂತೆ ಮಾಡುವ ಗುರುತರ ಜವಾಬ್ದಾರಿ ವೈದ್ಯರ ಮೇಲೆ ಇದೆ. ಬರೀ ಔಷಧಿ ನೀಡಿ ದೇಹಕ್ಕೆ ಒಂದು ರೋಗ ಗುಣಪಡಿಸಿದವರು ವೈದ್ಯರಾಗುವುದಿಲ್ಲ. ರೋಗಿಯ ದೈಹಿಕ ಪರಿಸ್ಥಿತಿ, ಮಾನಸಿಕ ಸ್ಥಿತಿಗಳನ್ನು ಅಭ್ಯಸಿಸಿ, ದೇಹಕ್ಕೆ ಬಂದ ರೋಗವನ್ನು ಗುಣಪಡಿಸುವುದರ ಜೊತೆಗೆ ಮಾನಸಿಕವಾಗಿ ರೋಗಿ ಹೆಚ್ಚು ಸದೃಢರಾಗಲು ಬೇಕಾದ ಮನೋಸ್ಥರ್ಯ, ಧೈರ್ಯ ಪ್ರೇರಣೆ ಮತ್ತು ವಿಶ್ವಾಸ ಮೂಡುವಂತಹ ಕಾರ್ಯಗಳನ್ನು ವೈದ್ಯರು ಮಾಡಬೇಕು. ಹಾಗಾದಲ್ಲಿ ಮಾತ್ರ ವೈದ್ಯರು ತಮ್ಮ ವೃತ್ತಿಗೆ ಹೆಚ್ಚು ಸಂಪೂರ್ಣ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ದಿನದಂದು ವೈದ್ಯರುಗಳು ತಮ್ಮನ್ನು ಮತ್ತಷ್ಟು ಪರಾಮರ್ಷಿಸಿಕೊಂಡು, ತಮ್ಮ ತಪ್ಪು ಒಪ್ಪುಗಳನ್ನು ವಿಮರ್ಷಿಸಿ ಮಗದೊಮ್ಮೆ ತಮ್ಮನ್ನು ಮನುಕುಲದಲ್ಲಿ ಸೇವೆಗೆ ಸಮರ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ವೈದ್ಯರು ಜವಾಬ್ದಾರಿ ಏನು ?
ಯಾವುದೇ ಒಂದು ವೃತ್ತಿಗೆ ವೃತ್ತಿಧರ್ಮ ಅಥವಾ ವೃತ್ತಿಯ ಸಾಮಾಜಿಕ ಹೊಣೆಗಾರಿಕೆ ಎಂಬುದಿರುತ್ತದೆ. ಪ್ರತಿ ವೃತ್ತಿಯ ಅತ್ಯಂತ ಗುರುತರವಾದ ಜವಾಬ್ದಾರಿಯನ್ನು ರಾಜಧರ್ಮ ಎನ್ನುತ್ತಾರೆ. ಹಾಗಾದರೆ ವೈದ್ಯ ವೃತ್ತಿಯ ರಾಜಧರ್ಮ ಯಾವುದು ಎಂಬುದರ ಕುತೂಹಲ ಎಲ್ಲರಿಗೂ ಇರುತ್ತದೆ. ಒಬ್ಬ ವೈದ್ಯ ರೋಗಿಗಳನ್ನು ಚಿಕಿತ್ಸೆ ಮಾಡುವುದನ್ನು ರಾಜಧರ್ಮ ಎನ್ನಲಾಗದು. ಅದು ಅವರ ಪ್ರಾಥಮಿಕವಾದ ಜವಾಬ್ದಾರಿ. ಒಬ್ಬ ವ್ಯಕ್ತಿ ವೈದ್ಯನಾದ ಮೇಲೆ ಆತ ರೋಗಿಗೆ ಚಿಕಿತ್ಸೆ ನೀಡಲೇಬೇಕು. ಹೇಗೆ ಒಬ್ಬ ಪೊಲೀಸ್ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಸಮಾಜವನ್ನು ಕೊಲೆ, ಸುಲಿಗೆ, ಕಳ್ಳತನ, ಆತ್ಯಚಾರ ಮುಕ್ತವಾಗಿಸಿ ರಾಮರಾಜ್ಯವಾಗುವಂತೆ ಮಾಡುತ್ತಾನೆಯೋ ಹಾಗೆಯೇ ವೈದ್ಯರೂ ಕೂಡಾ ಸಮಾಜದಲ್ಲಿ ರೋಗಿಗಳ ಸಂಖ್ಯೆ ಇಲ್ಲದಂತೆ ಮಾಡುವುದೇ ವೈದ್ಯ ವೃತ್ತಿಯ ರಾಜಧರ್ಮ ಎನ್ನಬಹುದು. ರೋಗದ ಚಿಕಿತ್ಸೆ ಮಾಡಿ ರೋಗಿಗಳ ಸಂಖ್ಯೆ ಇಳಿ ಮುಖ ಮಾಡುವುದು ದೊಡ್ಡ ವಿಚಾರವೇನಲ್ಲ ವೈದ್ಯರಾದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಲೇಬೇಕು. ಆದರೆ ರೋಗ ಬರದಂತೆ ರೋಗವನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ವೈದ್ಯರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಆರೋಗ್ಯ ಪ್ರಜ್ಞೆ ಬರುವಂತೆ ಮಾಡುವುದೇ ವೈದ್ಯರ ರಾಜಧರ್ಮವಾಗಬೇಕು. ಜೀವನ ಶೈಲಿಯ ರೋಗಗಳಾದ ಮಧುಮೇಹ, ಅಧಿಕ ರಕ್ತದೊತ್ತಡ ಖಿನ್ನತೆ ಮುಂತಾದವುಗಳ ಬಂದ ಬಳಿಕ ಚಿಕಿತ್ಸೆ ಅನಿವಾರ್ಯ. ಆದರೆ ಅಂತಹಾ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ರೋಗ ಬರುವ ಸೂಚನೆಗಳನ್ನು ಮೊದಲೇ ಅರಿತುಕೊಂಡು ಜನರನ್ನು ಎಚ್ಚರಿಸಿ, ರೋಗ ಬರದಂತೆ ಮಾಡುವ ಗುರುತರ ಸಾಮಾಜಿಕ ಹೊಣೆಗಾರಿಕೆ ವೈದ್ಯರ ಮೇಲಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಾ ವೈದ್ಯರ ಜೊತೆ ಕೈಜೋಡಿಸಬೇಕು. ಕೇವಲ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸಿ, ವೈದ್ಯರ ಸಂಖ್ಯೆ ಜಾಸ್ತಿ ಮಾಡಿ ಉಚಿತ ಜೆನೆರಿಕ್ ಔಷಧಿ ನೀಡುವುದರಿಂದ ಸಮಾಜದ ಮತ್ತು ಜನರ ಆರೋಗ್ಯ ವೃದ್ಧಿಸುವುದಿಲ್ಲ. ಮೂಲಭೂತ ಸೌಕರ್ಯಗಳಾದ ಶುದ್ಧಗಾಳಿ, ಶುದ್ಧ ನೀರು, ಬೆಳಕು ಸಿಗುವಂತಹಾ ವ್ಯವಸ್ಥೆ ಸರಕಾರ ಮಾಡಬೇಕು. ಪರಿಸರ ಮಾಲಿನ್ಯ, ವಾತಾವರಣ ಕಲುಷಿತವಾಗದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಹೊಣೆಗಾರಿಕೆ ಜನರಿಗೆ ಮತ್ತು ಸರಕಾರಕ್ಕೂ ಇದೆ ಎಂಬುದನ್ನು ಜನರು ಅರಿತುಕೊಳ್ಳಲೇಬೇಕು.
ಸರಕಾರ ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಹೋಗುವುದಿಲ್ಲ. ಅವರು ಖಡ್ಡಾಯವಾಗಿ ಹೋಗಬೇಕು ಎನ್ನುವುದು ಬಹಳ ಹಾಸ್ಯಾಸ್ಪದ ವಿಚಾರ. ಎಷ್ಟೋ ಜನ ನಿರುದ್ಯೋಗಿ ವೈದ್ಯರು ಈಗಲೂ ಸಮಾಜದಲ್ಲಿ ಇದ್ದಾರೆ. ಸರಕಾರ ಮನಸ್ಸು ಮಾಡಿದರೆ ಒಂದು ದಿನದಲ್ಲಿ ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಬಹುದು. ಬರೀ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತದೆಯೇ ಹೊರತು ವೈದ್ಯರ ನಿರಾಸಕ್ತಿ ಅಲ್ಲ ಎಂಬುದನ್ನು ಜನರು ಗಮನಿಸಬೇಕು. ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸುವ ಖಾಸಗೀ ವೈದ್ಯರೂ ಇದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಇದರ ಜೊತೆಗೆ ವೈದ್ಯರ ಗ್ರಾಮೀಣ ಪ್ರದೇಶಗಳಿಗೆ ಹೋಗುವಂತಹಾ ಪೂರಕವಾದ ವ್ಯವಸ್ಥೆಗಳನ್ನು ಸರಕಾರ ಮಾಡಲೇ ಬೇಕು. ಒಬ್ಬ ಉನ್ನತ ಶಿಕ್ಷಣ ಕಲಿತ ಹೆರಿಗೆ ತಜ್ಞನನ್ನು ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ಬರೀ ಔಷಧಿ ನೀಡಲು ಸೇರಿಸುವುದು ಮೂರ್ಖತನದ ಪರಮಾವಧಿ. ಅವರವರ ಯೋಗ್ಯತೆಗೆ ತಕ್ಕಂತೆ ಮೂಲಭೂತ ಸೌಕರ್ಯ ನೀಡಿ ನೇಮಕ ಮಾಡಿದಲ್ಲಿ ಮಾತ್ರ ವೃತ್ತಿಗೆ ನ್ಯಾಯ ಸಂದಾಯವಾಗಬಹುದು.
ಭಗವದ್ಗೀತೆಯಲ್ಲಿ ಒಂದು ಮಾತು ಇದೆ. ನಮ್ಮ ದಿನನಿತ್ಯದ ಕೆಲಸಗಳಲ್ಲಿ ಎರಡು ವಿಧಗಳಿದೆ. ಒಂದು ಕ್ರಿಯೆ. ಇನ್ನೊಂದು ಕರ್ಮ. ನಾವು ನಮ್ಮ ಜೀವನೋಪಾಯಕ್ಕಾಗಿ ಮಾಡುವುದನ್ನು ಕ್ರಿಯೆ ಎನ್ನುತ್ತೇವೆ. ನಮ್ಮ ಆಹಾರಕ್ಕೆ, ನಮ್ಮ ಬದುಕಿನ ಭದ್ರತೆಗೆ, ಮಕ್ಕಳ ಭವಿಷ್ಯಕ್ಕಾಗಿ ನಾವು ಮಾಡುವುದು ನಮ್ಮ ಕ್ರಿಯೆಗಳು. ಇದನ್ನು ಪ್ರತಿಯೊಂದು ಪ್ರಾಣಿಗಳೂ ಮಾಡುತ್ತದೆ. ನಮ್ಮ ಅಸ್ಥಿತ್ವಕ್ಕೆ ಜೀವನೋಪಾಯಕ್ಕೆ ಮಾಡುವಂತಹಾ ಎಲ್ಲ ಕೆಲಸಗಳಿಗೂ ಕ್ರಿಯೆ ಎನ್ನುತ್ತಾರೆ. ಆದರೆ ಕರ್ಮ ಎನ್ನುವುದು ಇದಕ್ಕಿಂತ ಭಿನ್ನವಾದುದು. ಕರ್ಮ ಎನ್ನುವುದು ನಾವು ಇನ್ನೊಬ್ಬರ ಜೀವನದಲ್ಲಿ ಬದಲಾವಣಿ ತರಲು ಮಾಡುವ ಕೆಲಸ. ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಕ್ರಿಯೆ ಮತ್ತು ಕರ್ಮವನ್ನು ಸಮಾನವಾಗಿ ಮಾಡಲೇಬೇಕು ಹಾಗಿದ್ದಲ್ಲಿ ಮಾತ್ರ ನಾವು ಮನುಷ್ಯರಾಗುತ್ತೇವೆ. ನಾವು ವೈದ್ಯರಾದ ಮೇಲೆ ರೋಗಿಗಳನ್ನು ಚಿಕಿತ್ಸೆ ಮಾಡುವುದು ನಮ್ಮ ಕ್ರಿಯೆಯಾಗುತ್ತದೆಯೇ ಹೊರತು ಅದು ನಮ್ಮ ಕರ್ಮವಾಗುವುದಿಲ್ಲ. ನಾವು ವೈದ್ಯರಾಗಿ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ರೋಗಿಗಳ ಚಿಕಿತ್ಸೆ ಮಾಡುವುದು ನಮ್ಮ ಕ್ರಿಯೆಯಾಗುತ್ತದೆ ಮತ್ತು ಅದು ನಮ್ಮ ಪ್ರಾಥಮಿಕ ಕರ್ತವ್ಯವೂ ಹೌದು. ರೋಗಿಗಳ ಚಿಕಿತ್ಸೆ ಮಾಡಿ ನಾವು ಏನನ್ನೊ ಸಾಧಿಸಿದ್ದೇನೆ ಎಂದು ತಿಳಿದಿದ್ದರೆ ಅದು ತಪ್ಪಾದೀತು. ಯಾವುದೇ ಫಲಾಪೇಕ್ಷೆ ಇಲ್ಲದೆ ಇತರರ ಸೇವೆ ಮಾಡುವುದೇ ನಿಜವಾದ ಕರ್ಮ. ಆದರೆ ಹೆಚ್ಚಿನ ವೈದ್ಯರು ನಾವು ಮಾಡುವ ಕ್ರಿಯೆಯನ್ನು ಕರ್ಮ ಎಂದು ಭಾವಿಸಿ ತಮ್ಮನ್ನು ತಾವು ದೇವರು ಎಂದು ಹೋಲಿಸಿಕೊಳ್ಳುವುದು ಮೂರ್ಖತನದ ಪರಮಾವಧಿ. ಈ ನಿಟ್ಟಿನಲ್ಲಿ ಎಲ್ಲ ವೈದ್ಯರುಗಳು ತಮ್ಮನ್ನು ಮಗದೊಮ್ಮೆ ವಿಮರ್ಷೆಗೆ ಒಡ್ಡಿಕೊಂಡು ತಾವು ಮಾಡುವ ಕ್ರಿಯೆಗಳ ಜೊತೆಗೆ ಮತ್ತಷ್ಟು ಫಲಾಪೇಕ್ಷೆ ಇಲ್ಲದ ನಿಸ್ವಾರ್ತದ ಸೇವೆಗೆ ಹೆಚ್ಚು ಒತ್ತು ಕೊಟ್ಟು, ವೈದ್ಯವೃತ್ತಿಯ ರಾಜಧರ್ಮವನ್ನು ಪಾಲಿಸಿದಲ್ಲಿ ಒಂದು ಸುಂದರ ಸದೃಢ ರಾಮರಾಜ್ಯದ ನಿರ್ಮಾಣ ಮಾಡಲು ಖಂಡಿತಾ ಸಾಧ್ಯವಾಗಬಹುದು.
ಕೊನೆ ಮಾತು.
ಗೆಳೆಯರೇ, ಒಂದು ಮಾತು ಯಾವತ್ತೂ ನೆನಪಿನಲ್ಲಿಡಿ. ವೈದ್ಯರೂ ಕೂಡಾ ನಿಮ್ಮಂತೆಯೇ ಒಂದು ಜೀವ. ಅವರಿಗೂ ತಮ್ಮಂತೆ ಆದ ಆಸೆ, ಆಕಾಂಕ್ಷೆ, ನೋವು, ನಲಿವು ಭಾವನೆಗಳು ಇರುತ್ತದೆ. ಅವರ ಭಾವನೆಗಳಿಗೂ ಒಂದಷ್ಟು ಗೌರವ ನೀಡಿ. ಇನ್ನೂ ಯಾಕೆ ಯೋಚಿಸುತ್ತಿದ್ದೀರಾ. ಫೋನ್ ಕೈಗೆತ್ತಿಕೊಂಡು ಒಂದು ಮೆಸೇಜ್ ಮಾಡಿ. ನಿಮ್ಮ ವೈದ್ಯರ ಮೇಲಿನ ಪ್ರೀತಿ, ಆದರ, ಗೌರವವನ್ನು ಸಣ್ಣ ಮೆಸೇಜ್ ಮುಖಾಂತರ ತಿಳಿಸಿಬಿಡಿ. ಸಂಕೋಚ ಬೇಡ. ಆ ಜೀವಕ್ಕೂ ಒಂದಷ್ಟು ಅಮೃತ ಸಿಂಚನವಾಗಲಿ. ಅದಿಲ್ಲವಾದ್ದಲ್ಲಿ ಫೇಸ್ ಬುಕ್ ನಲ್ಲಿ ಒಂದು ಸಣ್ಣ ಕಮೆಂಟ್ ಹಾಕಿಬಿಡಿ. ವಾಟ್ಸಪ್ ಮಾಡಿದರೂ ಪರವಾಗಿಲ್ಲ. ನಿಮ್ಮ ಕಮೆಂಟ್ ಅಥವಾ ಮೆಸೇಜಿನ ಶಕ್ತಿ ಮತ್ತು ಸ್ಪೂರ್ತಿ, ನಿಮ್ಮ ವ್ಶೆದ್ಯರಿಗೆ ನೂರಾನೆಯ ಆತ್ಮಸ್ಥೆರ್ಯ ನೀಡಿ ಮತ್ತೊಂದು ಜೀವ ಉಳಿದರೂ ಉಳಿಯಬಹುದು.
ಡಾ| ಮುರಲಿ ಮೋಹನ್ ಚೂಂತಾರು
]]>1945ರ ಔಷಧ ನಿಯಮಗಳ ‘ಷೆಡ್ಯೂಲ್ ಕೆ’ ಅಡಿಯಲ್ಲಿ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಯಿಂದ ‘ಸಿರಪ್ಗಳು’ ಎಂಬ ಪದವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ.ದೇಶದ ಎಲ್ಲಾ ಫಾರ್ಮಸಿಗಳು ಮತ್ತು ಸಾರ್ವಜನಿಕರಿಗೆ ಈ ನಿಯಮ ತಕ್ಷಣದಿಂದಲೇ ಅನ್ವಯವಾಗಲಿದೆ.
]]>ನಮ್ಮ ಭಾರತ ದೇಶವೊಂದರಲ್ಲಿಯೇ ವಾರ್ಷಿಕವಾಗಿ ಒಂದು ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಾರೆ ಮತ್ತು ವಿಶ್ವದಲ್ಲಿ 70 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ರೋಗದಿಂದ ಬಳಲುತ್ತಾರೆ. ಬಹಳ ನಿಧಾನವಾಗಿ ಬೆಳೆಯುವ ಈ ಕಣ್ಣಿನ ಪೊರೆ ಕ್ರಮೇಣವಾಗಿ ಚಲನೆ, ಓದುವಿಕೆ ಅಥವಾ ಮುಖವನ್ನು ಗುರುತಿಸುವಿಕೆಗೆ ತೊಂದರೆ ನೀಡುತ್ತದೆ. ಜಾಗತಿಕವಾಗಿ ಕುರುಡುತನಕ್ಕೆ ಕಣ್ಣಿನ ಪೊರೆ 51 ಶೇಕಡಾ ಕಾರಣವಾಗುತ್ತದೆ ಮತ್ತು ದೃಷ್ಟಿಹೀನತೆಗೆ 31 ಶೇಕಡಾ ಪಾಲನ್ನು ನೀಡುತ್ತದೆ.
ಲಕ್ಷಣಗಳು?
ಕಾರಣಗಳು ಏನು?
ತಡೆಗಟ್ಟುವುದು ಹೇಗೆ?
ಪತ್ತೆ ಹಚ್ಚುವುದು ಹೇಗೆ:
ಚಿಕಿತ್ಸೆ ಹೇಗೆ?
ಒಮ್ಮೆ ಕಣ್ಣಿನ ಪೊರೆ ಬಂದ ಮೇಲೆ ಯಾವುದೇ ಔಷಧಿಯಿಂದ ಸರಿಪಡಿಸಲು ಸಾಧ್ಯವಿಲ್ಲ. ಅದೇ ರೀತಿ ಯಾವುದೇ ಕನ್ನಡಕ ಧರಿಸಿ ಮಂಜಾದ ದೃಷ್ಟಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಕೇವಲ ಸರ್ಜರಿ ಮಾತ್ರ ಮಾಡಬೇಕು.
ಶಸ್ತ್ರ ಚಿಕಿತ್ಸೆ ಮುಖಾಂತರ ಮಂಜಾದ ಮಸೂರವನ್ನು ತೆಗೆಯಲಾಗುತ್ತದೆ. ಹಿಂದಿನ ಸಾಂಪ್ರದಾಯಿಕ ಶಸ್ತ್ರ ಚಿಕಿತ್ಸೆಯಲ್ಲಿ ದೊಡ್ಡದಾದ ಗಾಯ ಇರುತ್ತಿತ್ತು. ಸುಮಾರು 10 ರಿಂದ 12 mm ಉದ್ದದ ಗಾಯದ ಮುಖಾಂತರ ಮಸೂರವನ್ನು ತೆಗೆಯಲಾಗುತ್ತದೆ. ಬಳಿಕ ವಾರಗಳ ಕಾಲ ವಿಶ್ರಾಂತಿ ಇರುತ್ತಿತ್ತು. ನಂತರ ದಿನಗಳಲ್ಲಿ ಗಾಯದ ಗಾತ್ರ 6 ರಿಂದ 8 mm ಗೆ ಇಳಿದು ಕಣ್ಣಿನ ಹೊರ ಒಳ ಭಾಗದಲ್ಲಿ ಸರ್ಜರಿ ಮಾಡಲು ಆರಂಭಿಸಿದರು.
ಈಗ ಶಬ್ದಾತೀತ ತರಂಗಗಳ ಮುಖಾಂತರ ಗಾಯವಿಲ್ಲದೆ ದೋಷಪೂರಿತ ಮಸೂರವನ್ನು ತೆಗೆದು ಕೃತಕ ಮಸೂರವನ್ನು ನೀಡಲಾಗುತ್ತದೆ. ಈ ಸರ್ಜರಿಗೆ ಒಳರೋಗಿಯಾಗಿ ಆಸ್ಪತ್ರೆಯಲ್ಲಿ ವಾರಗಟ್ಟಲೆ ಇರಬೇಕಾಗಿಲ್ಲ ಡೇ ಕೇರ್ ಸರ್ಜರಿ ಮುಖಾಂತರ ಬೆಳಿಗ್ಗೆ ಆಸ್ಪತ್ರೆಗೆ ಹೋಗಿ ಸಂಜೆ ಮನೆಗೆ ಬರಬಹುದು. ಸಾಂಪ್ರದಾಯಿಕ ಸರ್ಜರಿಗಿಂತ ಶಬ್ದಾತೀತ ತರಂಗಗಳ ಸರ್ಜರಿ ಹೇಗೆ ಬಿನ್ನವಾಗಿರುತ್ತದೆ.
ಶಸ್ತ್ರ ಚಿಕಿತ್ಸೆ ನಂತರದ ಜವಾಬ್ದಾರಿಗಳು
ಶಸ್ತ್ರ ಚಿಕಿತ್ಸೆ ನಡೆಸಿ ದೋಷಪೂರಿತ ಮಸೂರವನ್ನು ತೆಗೆದು ಹೊಸ ಮಸೂರವನ್ನು ಕಣ್ಣಿನಲ್ಲಿ ಕೂರಿಸಲಾಗುತ್ತದೆ
ಕೊನೆಮಾತು:
ಕ್ಯಾಟರಾಕ್ಟ್ ಸರ್ಜರಿ ಈಗ ಬಹಳ ಸರಳ ಮತ್ತು ಅತ್ಯಂತ ಮುಂದುವರಿದ ತಂತ್ರಜ್ಞಾನ ಮತ್ತು ಯಂತ್ರಗಳ ಮೂಲಕ ಬಹಳ ಸುರಕ್ಷಿತವಾಗಿ ಮತ್ತು ನಿಖರವಾಗಿ ಮಾಡಲು ಸಾಧ್ಯವಿದೆ. ಯಾವುದೇ ಹಿಂಜರಿಕೆ ಇಲ್ಲದೆ, ನುರಿತ ತಜ್ಞ ವೈದ್ಯರಿಂದ ಈ ಚಿಕಿತ್ಸೆ ಪಡೆದಲ್ಲಿ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಸುಧಾರಿಸಿ ಮರಳಿ ಮೊದಲಿನಂತೆ ಬಾಹ್ಯ ಸೌಂದರ್ಯವನ್ನು ಆಸ್ಪಾದಿಸಿ, ಆನಂದಿಸಿ ಬದುಕನ್ನು ಬಂಗಾರವಾಗಿಸಲು ಸಾಧ್ಯವಾಗಬಹುದು.
ಡಾ|| ಚೂಂತಾರು
]]>