(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 24. ಡಾ. ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರು ಅವರ ಸಾವಿನ ಬೆನ್ನಲ್ಲೇ ನೇತ್ರದಾನ ಮಾಡಿದ್ದರು. ಅಲ್ಲದೇ ನೇತ್ರದಾನ ಮಾಡುವಂತೆ ಅವರು ಅನೇಕರಿಗೆ ಸ್ಫೂರ್ತಿ ನೀಡಿದ್ದರು. ಈ ಕಾರಣದಿಂದ ಅಶ್ವಿನಿ ಪುನೀತ್ ಅವರಿಗೆ ‘ಅಂಗಾಂಗದಾನ ಕ್ಯಾಂಪೇನ್’ನ ರಾಯಭಾರಿ ಆಗುವಂತೆ ರಾಜ್ಯ ಸರಕಾರ ಆಹ್ವಾನಿಸಿದೆ.
ಡಾ. ರಾಜ್ಕುಮಾರ್ ಕುಟುಂಬವು ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದೆ. ಕೇವಲ ನಟನೆ ಮಾತ್ರವಲ್ಲದೇ ಹಲವು ಸಾಮಾಜಿಕ ಕೆಲಸಗಳ ಮೂಲಕವೂ ಈ ಕುಟುಂಬ ಗುರುತಿಸಿಕೊಂಡಿದೆ. ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಈ ಕೆಲಸವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಅಂಗಾಂಗದಾನ ಕ್ಯಾಂಪೇನ್ಗೆ ರಾಯಭಾರಿ ಆಗುವಂತೆ ಅಶ್ವಿನಿ ಅವರಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಇದರಲ್ಲಿ ಅವರು ರಾಜ್ಕುಮಾರ್ ಕುಟುಂಬದ ಕೊಡುಗೆಯನ್ನು ಸ್ಮರಿಸಿದ್ದಾರೆ ಮತ್ತು ಅಶ್ವಿನಿ ಅವರಿಗೆ ಅಂಬಾಸಿಡರ್ ಆಗಲು ಆಹ್ವಾನ ನೀಡಿರುವ ವಿಚಾರವನ್ನು ಅವರು ತಿಳಿಸಿದ್ದಾರೆ.
ರಾಜ್ಕುಮಾರ್ ಹಾಗೂ ಅವರ ಕಿರಿಮಗ ಪುನೀತ್ ರಾಜ್ಕುಮಾರ್, ಅವರ ಮರಣಾನಂತರ ಕಣ್ಣುಗಳನ್ನು ದಾನ ಮಾಡಿ ಮಾದರಿಯಾಗಿದ್ದರು. ಅನೇಕರು ಇವರನ್ನು ಅನುಸರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದ ಆರೋಗ್ಯ ಇಲಾಖೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಅಂಗಾಂಗದಾನ ದಾನ ಕ್ಯಾಂಪೇನ್ನ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ನಿರ್ಧರಿಸಿದೆ’ ಎಂದು ಗುಂಡೂರಾವ್ ಅವರು ತಿಳಿಸಿದ್ದಾರೆ. ಅಂಗಾಂಗದಾನಕ್ಕೆ ಸಹಕರಿಸಿದ 150 ಕುಟುಂಬಗಳನ್ನು ಆರೋಗ್ಯ ಇಲಾಖೆ ಸನ್ಮಾನಿಸಿದೆ.