ಏರ್ ಇಂಡಿಯಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಪರೀಕ್ಷೆ ಕಡ್ಡಾಯ

(ನ್ಯೂಸ್‌ ಕಡಬ) newskadaba.com,  ಆ.14 : ಪ್ರಯಾಣಿಕರ ಸುರಕ್ಷತೆ ಮತ್ತು ವೈಮಾನಿಕ ಭದ್ರತೆಯ ಹಿತದೃಷ್ಟಿಯಿಂದ ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಮ್ಮ ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಸೇವನೆ (ಡ್ರಗ್ಸ್) ಪರೀಕ್ಷೆಯನ್ನು ಕಡ್ಡಾಯಗೊಳಿಸಿವೆ.

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ A320neo ವಿಮಾನ ಹಾರಾಟದ ಮಧ್ಯೆ ಇದ್ದಕ್ಕಿದ್ದಂತೆ 300 ಅಡಿ ಕೆಳಕ್ಕೆ ಕುಸಿದಿತ್ತು. ತನಿಖೆ ವೇಳೆ ವಿಮಾನದ ಮುಖ್ಯ ಕ್ಯಾಪ್ಟನ್ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು.ಈ ಘಟನೆಯ ಬೆನ್ನಲ್ಲೇ ಆಡಳಿತ ಮಂಡಳಿಯು ಜಾಗೃತರಾಗಿದ್ದು, ಆಗಸ್ಟ್ 13ರಿಂದಲೇ ಎಲ್ಲಾ ಪೈಲಟ್‌ಗಳಿಗೆ ಕಡ್ಡಾಯ ಸ್ಕ್ರೀನಿಂಗ್ ಪರೀಕ್ಷೆ ಆರಂಭಿಸಿದೆ.

ವಿಮಾನಯಾನ ಸಚಿವಾಲಯದ ನಿಯಮಗಳ ಪ್ರಕಾರ ಪ್ರತಿ ವರ್ಷ ಕನಿಷ್ಠ ಶೇ. 10ರಷ್ಟು ಸಿಬ್ಬಂದಿಗೆ ಸೈಕೋಆಕ್ಟಿವ್ ಮಾದಕದ್ರವ್ಯ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ.

ವೈಮಾನಿಕ ಕ್ಷೇತ್ರದ ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿಯುವುದು ಹಾಗೂ ಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

Scroll to Top