(ನ್ಯೂಸ್ ಕಡಬ) newskadaba.com, ಎ.09 ನಗರದ ಮೀನುಗಾರಿಕಾ ಬಂದರಿನ ಸಮೀಪವಿರುವ ನದಿಯಲ್ಲಿ ಬುಧವಾರ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಬೆಂಗ್ರೆ ನಿವಾಸಿ ಮೊಹಿದ್ದೀನ್ ನಾಸಿರ್ (50) ಎಂದು ಗುರುತಿಸಲಾಗಿದೆ.
ನದಿಯ ದಡದ ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಅಪರಿಚಿತ ವ್ಯಕ್ತಿಗಳು ಇವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊಬೈಲ್ ಫೋನ್ ವಿವಾದವೇ ಕಾರಣ?
ಕಳೆದುಹೋದ ಮೊಬೈಲ್ ಫೋನ್‌ವೊಂದರ ಬಗ್ಗೆ ಉತ್ತರ ಕರ್ನಾಟಕ ಮೂಲದ ಕೆಲವು ವ್ಯಕ್ತಿಗಳು ಬಂದರು ಪ್ರದೇಶದಲ್ಲಿ ವಿಚಾರಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಮೊಬೈಲ್ ಫೋನ್ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆಯೇ ಎಂಬ ದೃಷ್ಟಿಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪ್ರಸ್ತುತ ಪೊಲೀಸ್ ತನಿಖೆ ಮುಂದುವರಿದಿದೆ.









