(ನ್ಯೂಸ್ ಕಡಬ) newsksdaba.com ಏ. 07. ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಹತ್ವದ ಸೂಚನೆಯೊಂದನ್ನು ನೀಡಿದೆ. ದೇಶದ ಎಲ್ಲಾ ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ಗುರಿಯೊಂದಿಗೆ, ಇದೇ ಏಪ್ರಿಲ್ 10 ರಿಂದ ಟೋಲ್ ಬೂತ್ ಗಳಲ್ಲಿ ನಗದು ಸ್ವೀಕರಿಸುವುದನ್ನು ಅಧಿಕೃತವಾಗಿ ನಿಲ್ಲಿಸಲಾಗುತ್ತಿದೆ.
ಹಲವು ವರ್ಷಗಳಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ್ದರೂ, ಕೆಲವು ಕಡೆಗಳಲ್ಲಿ ಇನ್ನೂ ನಗದು ಪಾವತಿ ಚಾಲ್ತಿಯಲ್ಲಿತ್ತು. ಆದರೆ ಈಗ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಲುವಾಗಿ ಮತ್ತು ಟೋಲ್ ಬೂತ್ಗಳಲ್ಲಿ ಕಾಯುವ ಸಮಯವನ್ನು ಶೂನ್ಯಕ್ಕೆ ಇಳಿಸಲು NHAI ಈ ಕಠಿಣ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 10ರ ನಂತರ ಯಾವುದೇ ವಾಹನ ಸವಾರರು ಟೋಲ್ ನಲ್ಲಿ ನಗದು ನೀಡಿ ರಶೀದಿ ಪಡೆಯಲು ಅವಕಾಶವಿರುವುದಿಲ್ಲ.
ಫಾಸ್ಟ್ ಟ್ಯಾಗ್ ಇಲ್ಲದ ಅಥವಾ ಅದರಲ್ಲಿ ಬ್ಯಾಲೆನ್ಸ್ ಇಲ್ಲದ ವಾಹನಗಳಿಗೆ ಯುಪಿಐ ಮೂಲಕ ಪಾವತಿಸುವ ಪರ್ಯಾಯ ಆಯ್ಕೆಯನ್ನು ನೀಡಲಾಗಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಯುಪಿಐ ಬಳಕೆಯನ್ನು ಪ್ರೋತ್ಸಾಹಿಸುವ ಬದಲು ಫಾಸ್ಟ್ ಟ್ಯಾಗ್ ಅನ್ನೇ ಬಳಸುವಂತೆ ಒತ್ತಾಯಿಸಲು ಶೇಕಡಾ 25 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಉದಾಹರಣೆಗೆ, ನಿಮ್ಮ ಟೋಲ್ ಶುಲ್ಕ 100 ರೂಪಾಯಿ ಆಗಿದ್ದರೆ, ನೀವು ಯುಪಿಐ ಮೂಲಕ ಪಾವತಿಸುವಾಗ 125 ರೂಪಾಯಿ ನೀಡಬೇಕಾಗುತ್ತದೆ.









