(ನ್ಯೂಸ್ ಕಡಬ) newskadaba.com, ಮಾ.03 : ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಇರಾನ್ ಮೇಲಿನ ಸೇನಾ ಕಾರ್ಯಾಚರಣೆಯನ್ನ ತೀವ್ರಗೊಳಿಸಿದ್ದು, ಹಲವು ತಾಣಗಳನ್ನು ಗುರಿಯಾಗಿಸಿ ಬಾಂಬ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ. ಈ ದಾಳಿಗೆ ಇರಾನ್ನಲ್ಲೇ 700 ಕ್ಕೂ ಅಧಿಕ ಸಾವು ಸಂಭವಿಸಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ.
ಅಮೆರಿಕ ಹಾಗೂ ಇಸ್ರೇಲ್ ದಾಳಿಗೆ ಇರಾನ್ ಕೂಡಾ ಪ್ರತಿಕಾರದ ದಾಳಿ ನಡೆಸುತ್ತಿದೆ. ಇರಾನ್ನ ಕ್ಷಿಪಣಿ ವ್ಯವಸ್ಥೆಗಳ ಮೇಲೆ ಭಾರೀ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆದಿದೆ. ದೇಶದ 131 ನಗರಗಳ ಮೇಲೆ ದಾಳಿ ನಡೆಸಲಾಗಿದೆ. ಎರಡೂ ಕಡೆ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಮಧ್ಯೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಇರಾನ್ನಲ್ಲಿ 176 ಮಕ್ಕಳು ಸೇರಿ ಕನಿಷ್ಠ 742 ನಾಗರಿಕರು ಸಾವಿಗೀಡಾಗಿದ್ದಾರೆ. 900ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲೇ ಕನಿಷ್ಠ 85 ಜನ ಸಾವನ್ನಪ್ಪಿದ್ದಾರೆ ಎಂದು HRANA ತಿಳಿಸಿದೆ.
ಮತ್ತೊಂದೆಡೆ ಇರಾನ್, ಕೊಲ್ಲಿ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮುಂದುವರಿಸಿದೆ. ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಭಾನುವಾರ ಎಚ್ಚರಿಕೆ ನೀಡಿತ್ತು.













