(ನ್ಯೂಸ್ ಕಡಬ) newskadaba.com,ಮಾ.02: ಯುಗಾದಿ ಹಬ್ಬಕ್ಕೂ ಮುನ್ನವೇ ಅಂದರೆ ಮಾರ್ಚ್ 3ರಂದು ‘ಕೇತುಗ್ರಸ್ತ ರಕ್ತ ಚಂದ್ರಗ್ರಹಣ’ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ ಪೂಜೆ ಮತ್ತು ದರ್ಶನದ ಸಮಯದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಗ್ರಹಣ ಕಾಲದಲ್ಲಿ ದರ್ಶನ ಸ್ಥಗಿತಗೊಳಿಸಿ, ಶುದ್ಧೀಕರಣದ ನಂತರವಷ್ಟೇ ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಬೆಂಗಳೂರಿನ ಪ್ರಮುಖ ದೇವಾಲಯಗಳ ವಿವರ:
ಬನಶಂಕರಿ ದೇವಾಲಯ: ಗ್ರಹಣದ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆಗಳಿರುವುದಿಲ್ಲ. ಸಂಜೆ 7 ಗಂಟೆಯ ನಂತರವಷ್ಟೇ ನಿತ್ಯ ಪೂಜೆಗಳು ಪುನಾರಂಭಗೊಳ್ಳಲಿವೆ.
ಗವಿ ಗಂಗಾಧರೇಶ್ವರ ದೇವಾಲಯ: ಬೆಳಿಗ್ಗೆ 9 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗುವುದು. ಸಂಜೆ 7.45ರ ನಂತರ ದರ್ಶನಕ್ಕೆ ಅವಕಾಶವಿದ್ದು, ಮಾರ್ಚ್ 4ರಂದು ‘ಗ್ರಹಣ ಶಾಂತಿ ಹೋಮ’ ನಡೆಯಲಿದೆ.
ಕಾಡುಮಲ್ಲೇಶ್ವರ ದೇವಾಲಯ: ಬೆಳಿಗ್ಗೆ 11 ಗಂಟೆಗೆ ಬಾಗಿಲು ಮುಚ್ಚಲಿದ್ದು, ರಾತ್ರಿ 7.30ಕ್ಕೆ ಪುನಃ ತೆರೆಯಲಾಗುವುದು. ಮರುದಿನ ನವಗ್ರಹ ಶಾಂತಿ ಹೋಮ ಆಯೋಜಿಸಲಾಗಿದೆ.
ದೊಡ್ಡ ಗಣಪತಿ ದೇವಾಲಯ: ಗ್ರಹಣ ಮೋಕ್ಷವಾದ ನಂತರ ಅಂದರೆ ರಾತ್ರಿ 7.45ಕ್ಕೆ ಭಕ್ತರಿಗಾಗಿ ಬಾಗಿಲು ತೆರೆಯಲಿದೆ.
ಬಂಡೆ ಮಹಾಕಾಳಿ ದೇವಾಲಯ (ವಿಶೇಷ): ಇಲ್ಲಿ ಗ್ರಹಣದ ಅವಧಿಯಲ್ಲೂ ದೇವಾಲಯ ತೆರೆದಿರುತ್ತದೆ. ಈ ಸಮಯದಲ್ಲಿ ದೇವಿಗೆ ತುಪ್ಪದ ಲೇಪನ ಮಾಡಿ ವಿಶೇಷ ಹೋಮ ನಡೆಸಲಾಗುವುದು. ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶವಿದೆ








