(ನ್ಯೂಸ್ ಕಡಬ) newskadaba.com ಫೆ. 28. ಹೊಸ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿದ್ದ ಬೊಲಿವಿಯನ್ ವಾಯುಪಡೆಗೆ ಸೇರಿದ ಸೇನಾ ಸರಕು ವಿಮಾನವೊಂದು ಪತನಗೊಂಡು ಕನಿಷ್ಠ 15 ಮಂದಿ ಮೃತಪಟ್ಟಿರುವ ಕುರಿತು ವರದಿಯಾಗಿದೆ.
ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವು ನೇರವಾಗಿ ಹೆದ್ದಾರಿಯ ಮೇಲೆ ಅಪ್ಪಳಿಸಿದೆ. ಕ್ಷಣಾರ್ಧದಲ್ಲಿ ರಸ್ತೆಯಲ್ಲಿದ್ದ ನೂರಾರು ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿವೆ.
ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಅವರ ಪ್ರಕಾರ, ಈ ಭೀಕರ ದುರಂತದಲ್ಲಿ 15 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ವಿಮಾನ ಬೊಲಿವಿಯನ್ ವಾಯುಪಡೆಯ ಹರ್ಕ್ಯುಲಸ್ ವಿಮಾನವಾಗಿದ್ದು, ಅದು ಕೇಂದ್ರ ಬ್ಯಾಂಕಿನಿಂದ ಇತರ ನಗರಗಳಿಗೆ ಹೊಸ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಹೊಸ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಈ ವಿಮಾನವು ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ನೋಟುಗಳ ಕಂತೆಗಳು ಗಾಳಿಯಲ್ಲಿ ಹಾರಿ, ರಸ್ತೆಯಾದ್ಯಂತ ಹರಡಿಕೊಂಡಿದೆ.
ಒಂದು ಕಡೆ ಸಾವು-ನೋವಿನ ಆಕ್ರಂದನ ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಆರಿಸಲು ಜನರು ಮುಗಿಬಿದ್ದಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಭೀಕರ ದುರಂತದಲ್ಲಿ ಅಪಘಾತದ ನಂತರ, ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.













