(ನ್ಯೂಸ್ ಕಡಬ) newskadaba.com,ಫೆ.24: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ ಆವರಿಸಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರು ಬಿಸಿಲಿನ ಬೇಗೆಯಿಂದ ತತ್ತರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಇಂದು ರಾಜ್ಯದ ಹಲವೆಡೆ ಗುಡುಗು, ಸಿಡಿಲು ಕಾಣಿಸಿಕೊಳ್ಳುವ ಸಂಭವವಿದ್ದು, 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ. ರಾಜ್ಯದಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 38ರಿಂದ 39 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೀದರ್, ಕಲಬುರ್ಗಿ, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಅಬ್ಬರಿಸಲಿದ್ದು, ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ. ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.








