(ನ್ಯೂಸ್ ಕಡಬ) newskadaba.com ಫೆ.19 : ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ಜೀಲಾಂಗ್ ನಗರದ ಸಮೀಪದ ಕೊರಿಯೊ ಪ್ರದೇಶದಲ್ಲಿ ಭಾರತೀಯ ಮೂಲದ 22 ವರ್ಷದ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಮೇಲೆ ಭೀಕರ ಜನಾಂಗೀಯ ದಾಳಿ ನಡೆದಿದೆ.
ಫೆಬ್ರವರಿ 17ರ ತಡರಾತ್ರಿ ಜಿಮ್‌ನಲ್ಲಿ ವ್ಯಾಯಾಮ ಮುಗಿಸಿ ಹೊರಬರುತ್ತಿದ್ದ ವೇಳೆ ಮೂವರು ವ್ಯಕ್ತಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಬಿಳಿ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಹರ್ಮನ್ ಅವರನ್ನು “ಇಂಡಿಯನ್ ಡಾಗ್” ಎಂದು ನಿಂದಿಸುತ್ತಿರುವುದು ಕಾಣಿಸುತ್ತದೆ.
ದಾಳಿಯ ವೇಳೆ ಹರ್ಮನ್ ಅವರ ಮುಖಕ್ಕೆ ತಲೆಯಿಂದ ಜೋರಾಗಿ ಗುದ್ದಲಾಗಿದ್ದು, ಮೂಗಿಗೆ ತೀವ್ರ ಗಾಯವಾಗಿದೆ. ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.ಪ್ರಸ್ತುತ ಜೀಲಾಂಗ್ ಪೊಲೀಸರು ಹರ್ಮನ್ ಪ್ರೀತ್ ಸಿಂಗ್ ಮೇಲಿನ ದಾಳಿಯನ್ನು ಜನಾಂಗೀಯ ದ್ವೇಷದ ಅಪರಾಧವೆಂದು ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.








