(ನ್ಯೂಸ್ ಕಡಬ) newskadaba.com, ನ.10 ಬೆಂಗಳೂರು : ಉಚಿತ ಪ್ರವೇಶ, ಪ್ರತೀ ವರ್ಷ ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ, ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ರಾಜ್ಯ ಸರ್ಕಾರ ನೀಡುತ್ತಿರುವ ಹಲವು ಯೋಜನೆಗಳ ನಡುವೆಯೂ ರಾಜ್ಯದ ಸರ್ಕಾರಿ ಶಾಲೆಗಳಿಗೆ ಕಳೆದ ಒಂದೂವರೆ ದಶಕದಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ.30ರಷ್ಟು ಕುಸಿದಿದೆ.
2010-11ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಪ್ರವೇಶ ಪಡೆಯುತ್ತಿದ್ದ ಮಕ್ಕಳ ಸಂಖ್ಯೆ ಸುಮಾರು 55 ಲಕ್ಷದಷ್ಟಿತ್ತು. ಆದರೆ, ಇದು 2025-26ನೇ ಸಾಲಿನ ವೇಳೆಗೆ 38 ಲಕ್ಷಕ್ಕೆ ಇಳಿದಿದೆ. ಅರ್ಥಾತ್ ಹದಿನೈದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ 17 ಲಕ್ಷಕ್ಕೂ ಹೆಚ್ಚು ಕಡಿಮೆಯಾಗಿದೆ. ತನ್ಮೂಲಕ ರಾಜ್ಯದಲ್ಲಿ ಶಾಲಾ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಮಕ್ಕಳ ಒಟ್ಟು ದಾಖಲಾತಿಯಲ್ಲಿ ಶೇ.54ರಷ್ಟಿದ್ದ ಸರ್ಕಾರಿ ಶಾಲೆಗಳ ಪಾಲು ಈಗ ಶೇ.38ಕ್ಕೆ ಕುಸಿದಿದೆ.
ಪ್ರಾಥಮಿಕ ಸರ್ಕಾರಿ ಶಾಲೆಗಳು, ಶಿಕ್ಷಕರ ಸಂಖ್ಯೆಯೂ ಇಳಿಕೆ
ಇನ್ನು, ಮಕ್ಕಳ ಸಂಖ್ಯೆ ಕಡಿಮೆಯಾದಂತೆ ಹದಿನೈದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಮತ್ತು ಅವುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಯಂ ಶಿಕ್ಷಕರ ಸಂಖ್ಯೆಯೂ ಇಳಿಕೆಯಾಗುತ್ತಾ ಸಾಗಿದೆ.2010-11ರಲ್ಲಿ ಇಲಾಖಾ ಶೈಕ್ಷಣಿಕ ವಿಶ್ಲೇಷಣಾ ವರದಿ ಪ್ರಕಾರವೇ 45000ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು, 4000ಕ್ಕೂ ಹೆಚ್ಚು ಪ್ರೌಢಶಾಲೆಗಳು ಸೇರಿ 49,855 ಶಾಲೆಗಳಿದ್ದವು.
ಮಕ್ಕಳ ಕೊರತೆ, ವಿಲೀನ ಮತ್ತಿತರ ಕಾರಣಗಳಿಂದ ಈ ಶಾಲೆಗಳು ಬಂದ್ ಆಗಿವೆ. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 41,500 ಪ್ರಾಥಮಿಕ ಶಾಲೆಗಳಿವೆ, ಪ್ರೌಢ ಶಾಲೆಗಳ ಸಂಖ್ಯೆ 4800ಕ್ಕೂ ಹೆಚ್ಚಿದೆ ಎಂದು ಹೇಳಿದೆ.
ಇನ್ನು ಹದಿನೈದು ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರ ಸಂಖ್ಯೆ 2.26 ಲಕ್ಷಕ್ಕೂ ಹೆಚ್ಚಿತ್ತು. ಅದು ಈಗ 1.80 ಲಕ್ಷಕ್ಕೆ ಇಳಿಕೆಯಾಗಿದೆ.. ಈ ಹುದ್ದೆಗಳೆಲ್ಲಾ ಖಾಲಿ ಇವೆ. ಪ್ರತೀ ವರ್ಷ ಕನಿಷ್ಠ 6 ಸಾವಿರ ಶಿಕ್ಷಕರು ನಿವೃತ್ತರಾಗುತ್ತಾರೆ. ಆದರೆ, ಅಧಿಕಾರಕ್ಕೆ ಬಂದ ಸರ್ಕಾರಗಳು ಮಾತ್ರ ಆ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ..












