(ನ್ಯೂಸ್ ಕಡಬ) newskadaba.com, ನ.10 :ಸ್ಮಾರ್ಟ್ ಫೋನ್ ಹಾಗೂ ಸೋಶಿಯಲ್ ಮೀಡಿಯಾದ ಪ್ರಭಾವದಿಂದ ಯುವ ಸಮುದಾಯ ದಾರಿ ತಪ್ಪುತ್ತಿದ್ದು, ಈ ಹಿನ್ನೆಲೆ ಡೆನ್ಮಾರ್ಕ್ನಲ್ಲಿ ಸರ್ಕಾರವು 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವುದಕ್ಕೆ ತೀರ್ಮಾನ ಮಾಡಿದೆ. ಮಕ್ಕಳು ಮಾನಸಿಕವಾಗಿ ಹಾಳು ಮಾಡುವ ಡಿಜಿಟಲ್ ವಿಚಾರಗಳತ್ತ ಹೆಚ್ಚು ಹೆಚ್ಚು ವಾಲುತ್ತಿದ್ದು, ಇದು ಅವರ ಮೇಲೆ ಮಾನಸಿಕ ಆರೋಗ್ಯದ ಜೊತೆಗೆ ಸಾಮಾಜದ ಸ್ವಾಸ್ಥ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಕಳವಳದ ನಡುವೆ ಡೆನ್ಮಾರ್ಕ್ ಸರ್ಕಾರವೂ ಈ ನಿರ್ಧಾರಕ್ಕೆ ಬಂದಿದೆ..
ಮೌಲ್ಯಮಾಪನದ ನಂತರ 13ನೇ ವಯಸ್ಸಿಗೆ ಸೋಶಿಯಲ್ ಮೀಡಿಯಾ ಬಳಸುವುದಕ್ಕೆ ಅನುಮತಿ
ಈ ಕ್ರಮದಿಂದಾಗಿ ಪೋಷಕರು ನಿರ್ದಿಷ್ಟ ಮೌಲ್ಯಮಾಪನದ ನಂತರ 13ನೇ ವಯಸ್ಸಿಗೆ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ಬಳಸುವುದಕ್ಕೆ ಅವಕಾಶ ನೀಡುತ್ತದೆ. ಆದರೆ ಈ ನಿಷೇಧವನ್ನು ಯಾವ ರೀತಿ ಜಾರಿಗೊಳಿಸಲಾಗುತ್ತದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಅನೇಕ ತಾಂತ್ರಿಕ ಅಪ್ಲಿಕೇಷನ್ಗಳು
ಈಗಾಗಲೇ ಪುಟ್ಟ ಮಕ್ಕಳು ಸೋಶಿಯಲ್ ಮೀಡಿಯಾ ಸೈನ್ ಅಪ್ ಮಾಡುವುದನ್ನು ನಿರ್ಬಂಧಿಸಿವೆ. ಆದರೆ ಅಧಿಕಾರಿಗಳು ಮತ್ತು ತಜ್ಞರು ಕೆಲ ಅಪ್ಲಿಕೇಷನ್ಗಳು ಜಾರಿಯಲ್ಲಿಟ್ಟಿರುವ ಅಂತಹ ನಿರ್ಬಂಧಗಳು ಯಾವಾಗಲೂ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಾರೆ.ಹದಿಹರೆಯದವರು ಮತ್ತು ಕಿರಿಯ ಮಕ್ಕಳಲ್ಲಿ ಸಾಮಾಜಿಕ ಮಾಧ್ಯಮದ ಬಳಕೆಯನ್ನು ಮಿತಿಗೊಳಿಸಲು ಯುರೋಪಿಯನ್ ಯೂನಿಯನ್ ಸರ್ಕಾರವು ತೆಗೆದುಕೊಂಡಿರುವ ಅತ್ಯಂತ ಕಠಿಣ ಕ್ರಮಗಳಲ್ಲಿ ಈ ಕ್ರಮವು ಒಂದಾಗಲಿದೆ.








